
ನವದೆಹಲಿ, ಏಪ್ರಿಲ್ 26: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ, ಭಾರತ ಸರ್ಕಾರವು ಹಲವಾರು ರಾಜತಾಂತ್ರಿಕ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿತು. ಆ ಪ್ರಮುಖ ನಿರ್ಧಾರಗಳಲ್ಲಿ ಒಂದೆಂದರೆ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನಿಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದು. ವಿದೇಶಾಂಗ ಸಚಿವಾಲಯ ಗುರುವಾರ ಪಾಕಿಸ್ತಾನಿಗಳಿಗೆ ನೀಡಲಾದ ಎಲ್ಲಾ ಅಸ್ತಿತ್ವದಲ್ಲಿರುವ ವೀಸಾಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು ಬೇಗನೆ ಮರಳುವಂತೆ ಸಚಿವಾಲಯ ಸೂಚಿಸಿದೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ 26 ಜನರ ಜೀವವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಗಳ ನಡುವೆ, ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಭಾರತವನ್ನು ತೊರೆಯಬೇಕೇ? ಎಂಬ ಚರ್ಚೆ ನಡೆದಿದೆ. ಪಾಕಿಸ್ತಾನದ ಸಿಂಧ್‌ನ 27 ವರ್ಷದ ಮಹಿಳೆ ಸೀಮಾ ಹೈದರ್ ತನ್ನ ಅಸಾಮಾನ್ಯ ಪ್ರೇಮಕಥೆಯಿಂದಾಗಿ ಸುದ್ದಿಯಾಗಿದ್ದರು. ಕೊವಿಡ್-19 ಸಮಯದಲ್ಲಿ, ಅವರು ಆನ್‌ಲೈನ್ ಗೇಮ್ PUBG ಮೂಲಕ ಭಾರತದ 22 ವರ್ಷದ ಅಂಗಡಿ ಸಹಾಯಕ ಸಚಿನ್ ಮೀನಾ ಅವರೊಂದಿಗೆ ಸಂಪರ್ಕ ಬೆಳೆಸಿದ್ದರು. ಆರಂಭಿಕ ಭೇಟಿಗಳ ನಂತರ, ಸೀಮಾ ಮೇ 2023ರಲ್ಲಿ ದುಬೈ ಮತ್ತು ನೇಪಾಳದ ಮೂಲಕ ತನ್ನ ಮೊದಲ ಮದುವೆಯಿಂದ 4 ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಅವರು ಈಗ ಸಚಿನ್ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಈ ವರ್ಷ ಮಗಳು ಕೂಡ ಹುಟ್ಟಿದ್ದಾಳೆ.
ಇದನ್ನೂ ಓದಿ: ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ತಮಗೆ ತಾವೇ ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
ಸೀಮಾ ಮತ್ತು ಸಚಿನ್ ಇಬ್ಬರನ್ನೂ ಜುಲೈ 2023ರಲ್ಲಿ ಬಂಧಿಸಲಾಗಿತ್ತು. ಸೀಮಾ ಅವರನ್ನು ಅಕ್ರಮ ಭಾರತ ಪ್ರವೇಶಕ್ಕಾಗಿ ಮತ್ತು ಸಚಿನ್ ಅವರನ್ನು ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸೀಮಾ ಅವರ ಪ್ರಕರಣವು ಆಕೆ ಭಾರತವನ್ನು ಹೇಗೆ ಪ್ರವೇಶಿಸಿದರು ಎಂಬುದರಿಂದ ಮತ್ತಷ್ಟು ಜಟಿಲವಾಗಿದೆ. ಮಾನ್ಯ ವೀಸಾಗಳೊಂದಿಗೆ ಬಂದ ಇತರ ಪಾಕಿಸ್ತಾನಿ ಪ್ರಜೆಗಳಿಗಿಂತ ಭಿನ್ನವಾಗಿ, ಸೀಮಾ ನೇಪಾಳದಿಂದ ಅಕ್ರಮವಾಗಿ ಗಡಿ ದಾಟುವ ಮೂಲಕ ಅಧಿಕೃತ ವಲಸೆ ಮಾರ್ಗಗಳನ್ನು ಬೈಪಾಸ್ ಮಾಡಿದ್ದರು. ಆಕೆ ಇನ್ನೂ ಭಾರತೀಯ ಪೌರತ್ವವನ್ನು ಪಡೆದಿಲ್ಲ. ನ್ಯಾಯಾಂಗವು ಇನ್ನೂ ಅವರ ಕಾನೂನು ಸ್ಥಿತಿಯನ್ನು ಪರಿಶೀಲಿಸುತ್ತಿದೆ. ಹೀಗಾಗಿ, ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ನಿರ್ಧಾರಗಳು ಸೀಮಾಗೆ ಅನ್ವಯವಾಗುತ್ತದೆಯೇ? ಎಂಬ ಚರ್ಚೆಗಳು ನಡೆದಿವೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭರವಸೆ
ಆದರೆ, ಈ ಬಗ್ಗೆ ಸೀಮಾ ಹೈದರ್ ಪ್ರತಿಕ್ರಿಯಿಸಿದ್ದು, ನಾನೀಗ ಭಾರತದ ಸೊಸೆಯಾಗಿದ್ದೇನೆ. ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಭಾರತದಲ್ಲೇ ಇರುತ್ತೇನೆ ಎಂದಿದ್ದಾರೆ. “ನಾನು ಪಾಕಿಸ್ತಾನದ ಮಗಳಾಗಿದ್ದೆ, ಆದರೆ ಈಗ ನಾನು ಭಾರತದ ಸೊಸೆ” ಎಂದು ಸೀಮಾ ಹೈದರ್ ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಅವರು ತಮ್ಮನ್ನು ಕೂಡ ಗಡೀಪಾರು ಮಾಡುವ ಭಯದಲ್ಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ