ಅದು ಎಡಿಟೆಡ್ ಕ್ಲಿಪ್, ನನ್ನ ಬಳಿ ಇನ್ನೊಂದು ವಿಡಿಯೋ ಇದೆ; ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ. ಆನಂದ ಬೋಸ್ ಬಿಡುಗಡೆ ಮಾಡಿದ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಬಳಿಕ ರಾಜ್ಯಪಾಲರ ನಾಚಿಕೆಗೇಡಿನ ನಡವಳಿಕೆಯನ್ನು ಸಾಬೀತುಪಡಿಸುವ ಮತ್ತೊಂದು ಆಘಾತಕಾರಿ ವಿಡಿಯೋ ಇದೆ ಎಂದು ಹೇಳಿದ್ದಾರೆ.
ಕೊಲ್ಕತ್ತಾ: ರಾಜಭವನದ (Raj Bhavan) ಉದ್ಯೋಗಿಯೊಬ್ಬರಿಂದ ಕಿರುಕುಳದ ಆರೋಪ ಎದುರಿಸುತ್ತಿರುವ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ (CV Ananda Bose) ಅವರ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಇಂದು ವಾಗ್ದಾಳಿ ನಡೆಸಿದ್ದಾರೆ. ಆನಂದ್ ಬೋಸ್ ಅವರು ರಾಜ್ಯಪಾಲ ಹುದ್ದೆಗೆ ತಾವು ಏಕೆ ರಾಜೀನಾಮೆ ನೀಡುವುದಿಲ್ಲ ಎಂಬುದನ್ನು ವಿವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೂಗ್ಲಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಸಪ್ತಗ್ರಾಮದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಆನಂದ್ ಬೋಸ್ ಅವರು ರಾಜ್ಯಪಾಲರಾಗಿ ಉಳಿಯುವವರೆಗೆ ನಾನು ರಾಜಭವನಕ್ಕೆ ಕಾಲಿಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ರಕ್ತ ಹರಿಸಲು ಸಿದ್ಧ ಆದರೆ ಎನ್ಆರ್ಸಿ, ಸಿಎಎ ಜಾರಿಯಾಗಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ಕಳೆದ ವಾರ, ರಾಜಭವನದ ಗುತ್ತಿಗೆ ಮಹಿಳಾ ಉದ್ಯೋಗಿಯೊಬ್ಬರು ಕೊಲ್ಕತ್ತಾ ಪೊಲೀಸರಿಗೆ ದೂರು ಸಲ್ಲಿಸಿದರು. ಏಪ್ರಿಲ್ 24 ಮತ್ತು ಮೇ 2ರಂದು ರಾಜ್ಯಪಾಲರ ಮನೆಯಲ್ಲಿ ಆನಂದ್ ಬೋಸ್ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಆದರೂ ಆ ವಿಡಿಯೋ ಎಡಿಟೆಡ್ ಕ್ಲಿಪ್ ಎಂದು ಹೇಳಿರುವ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ರಾಜ್ಯಪಾಲರ “ನಾಚಿಕೆಗೇಡಿನ” ನಡವಳಿಕೆಯನ್ನು ಸಾಬೀತುಪಡಿಸುವ ಮತ್ತೊಂದು “ಆಘಾತಕಾರಿ ವೀಡಿಯೊ” ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಎಡಿಟ್ ಮಾಡಿದ ವಿಡಿಯೋ ಬಿಡುಗಡೆ ಮಾಡಿದ್ದರು. ನಾನು ಅದರ ಸಂಪೂರ್ಣ ತುಣುಕನ್ನು ನೋಡಿದ್ದೇನೆ. ಅದರಲ್ಲಿರುವ ವಿಷಯಗಳು ಆಘಾತಕಾರಿಯಾಗಿದೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ. ನನಗೆ ಇನ್ನೊಂದು ವಿಡಿಯೋ ಸಿಕ್ಕಿದೆ. ನಿಮ್ಮ ನಡತೆ ನಾಚಿಕೆಗೇಡಿನ ಸಂಗತಿ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: West Bengal: ಹೆಲಿಕಾಪ್ಟರ್ ಹತ್ತುವ ವೇಳೆ ಕಾಲು ಜಾರಿ ಬಿದ್ದ ಸಿಎಂ ಮಮತಾ ಬ್ಯಾನರ್ಜಿ, ಸಣ್ಣಪುಟ್ಟ ಗಾಯ
“ಆನಂದ್ ಬೋಸ್ ರಾಜ್ಯಪಾಲರಾಗಿರುವವರೆಗೂ ನಾನು ರಾಜಭವನಕ್ಕೆ ಹೋಗುವುದಿಲ್ಲ. ನಾನು ಅವರನ್ನು ಬೀದಿಯಲ್ಲಿ ಭೇಟಿಯಾಗಲು ಇಷ್ಟಪಡುತ್ತೇನೆ” ಎಂದು ದೀದಿ ಪ್ರತಿಪಾದಿಸಿದ್ದಾರೆ.
ರಾಜಭವನದ ಮಹಿಳಾ ಉದ್ಯೋಗಿಯೊಬ್ಬರಿಂದ ಕಿರುಕುಳದ ಆರೋಪ ಹೊತ್ತಿರುವ ಬೋಸ್ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಮಹಿಳೆಯರು ಕಿರುಕುಳಕ್ಕೊಳಗಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ