
ನವದೆಹಲಿ, ಜನವರಿ 15: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (CM Mamata Banerjee) ನೇತೃತ್ವದ ಟಿಎಂಸಿ ಸರ್ಕಾರ ಮತ್ತು ಕೊಲ್ಕತ್ತಾ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ. ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಮೇಲೆ ದಾಳಿ ನಡೆಸಿದ್ದ ಇಡಿ (ಜಾರಿ ನಿರ್ದೇಶನಾಲಯ? ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗೇ, ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಮತ್ತು ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಸೇರಿದಂತೆ ಇತರರನ್ನು ಅಮಾನತುಗೊಳಿಸುವಂತೆ ಕೋರಿ ಇಡಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರ ಪೀಠವು ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಮತಾ ಬ್ಯಾನರ್ಜಿ ಮತ್ತು ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ ಉತ್ತರಗಳನ್ನು ಕೋರಿದೆ. ಈ ವಿಷಯದಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗೂ ನ್ಯಾಯಾಲಯ ಉತ್ತರವನ್ನು ಕೋರಿದೆ.
I-PAC ಕಚೇರಿಯಲ್ಲಿ ಇಡಿ ದಾಳಿ ನಡೆಸಿದಾಗ ಸಿಎಂ ಮಮತಾ ಬ್ಯಾನರ್ಜಿ ಅಲ್ಲಿಗೆ ತೆರಳಿ ಕೆಲವು ಫೈಲ್ಗಳು, ಹಾರ್ಡ್ ಡಿಸ್ಕ್, ಲ್ಯಾಪ್ಟಾಪ್, ಮೊಬೈಲ್ಗಳನ್ನು ತೆಗೆದುಕೊಂಡು ಹೋಗಿದ್ದರು. ತಮ್ಮ ತನಿಖೆಗೆ ಸಿಎಂ ಅಡ್ಡಿಪಡಿಸಿದ್ದಾರೆ ಎಂದು ಇಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ತನಿಖೆಗೆ ಅಡಚಣೆ ಮಾಡಿದ ಆರೋಪದ ಮೇಲೆ ಇಡಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ತನಿಖೆಗೆ ಅಡ್ಡಿಪಡಿಸಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಇಡಿ
ನ್ಯಾಯಮೂರ್ತಿಗಳಾದ ಪ್ರಶಾಂತ್ ಮಿಶ್ರಾ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಐ-ಪಿಎಸಿ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ಶೋಧ ನಡೆಸುವಲ್ಲಿ ಭಾಗಿಯಾಗಿದ್ದ ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್ ಅನ್ನು ಸಹ ತಡೆಹಿಡಿದಿದೆ. ಈ ವಿಷಯದ ಕುರಿತು ಫೆಬ್ರವರಿ 3ರಂದು ಮುಂದಿನ ವಿಚಾರಣೆಗೆ ದಿನ ನಿಗದಿಪಡಿಸಿದ ಸುಪ್ರೀಂ ಕೋರ್ಟ್, ಇಡಿ ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ರಕ್ಷಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್ ಹೊತ್ತೊಯ್ದ ಮಮತಾ ಬ್ಯಾನರ್ಜಿ
ಈ ತಿಂಗಳ ಆರಂಭದಲ್ಲಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕೊಲ್ಕತ್ತಾ ನಿವಾಸದಲ್ಲಿ ಇಡಿ ಶೋಧ ನಡೆಸಿದ ನಂತರ ಭಾರಿ ವಿವಾದ ಭುಗಿಲೆದ್ದಿತು. ಆಗ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಅಲ್ಲಿಗೆ ತೆರಳಿ ಇಡಿ ತನಿಖೆಗೆ ಅಡ್ಡಿಪಡಿಸಿದ್ದರು. ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸುತ್ತಲೇ ಇದ್ದಾರೆ. ಅದರ ನಡುವೆ ಸುಪ್ರೀಂ ಕೋರ್ಟ್ ಕೂಡ ಇಡಿಗೆ ಬಿಗ್ ರಿಲೀಫ್ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Thu, 15 January 26