ದೆಹಲಿ ಜುಲೈ 31: ದೆಹಲಿಯ ಲೆಫ್ಟಿನೆಂಟ್ ಗವರ್ನರ್ (Lieutenant Governor) ವಿನಯ್ ಕುಮಾರ್ ಸಕ್ಸೇನಾ (Vinai Kumar Saxena) ಅವರು ಕೋಚಿಂಗ್ ಸೆಂಟರ್‌ಗಳ (Coaching centre) ನಿಯಂತ್ರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರ ರಾಜಧಾನಿಯ ಮುಖ್ಯ ಕಾರ್ಯದರ್ಶಿ ಅಡಿಯಲ್ಲಿ ಸಮಿತಿಯನ್ನು ರಚಿಸಿದ್ದಾರೆ. ಕೋಚಿಂಗ್ ಸಂಸ್ಥೆಗಳನ್ನು ವಿವಿಧ ಸ್ಥಳಗಳಿಂದ ಉತ್ತಮ ಯೋಜಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಮಿತಿಯು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ. ಮೂವರು ಐಎಎಸ್ ಆಕಾಂಕ್ಷಿಗಳು ತಮ್ಮ ಕೋಚಿಂಗ್ ಸೆಂಟರ್ನ ನೆಲಮಾಳಿಗೆಯಲ್ಲಿ ಮುಳುಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಏತನ್ಮಧ್ಯೆ, ದೆಹಲಿ ಶಿಕ್ಷಣ ಸಚಿವೆ ಅತಿಶಿ, ಓಲ್ಡ್ ರಾಜಿಂದರ್ ನಗರದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದು, ಕೋಚಿಂಗ್ ಸಂಸ್ಥೆಗಳನ್ನು ನಿಯಂತ್ರಿಸಲು ಕಾನೂನನ್ನು ರಚಿಸುವ ಸಮಿತಿಯ ಭಾಗವಾಗಿರುವ ಅವರ 10 ಪ್ರತಿನಿಧಿಗಳ ಹೆಸರನ್ನು ನೀಡುವಂತೆ ಒತ್ತಾಯಿಸಿದರು. ಓಲ್ಡ್ ರಾಜಿಂದರ್ ನಗರದಲ್ಲಿ ರಾವೂಸ್ ಐಎಎಸ್ ಕೋಚಿಂಗ್‌ನ ನೆಲಮಾಳಿಗೆಯಲ್ಲಿ ಮೂವರು ಆಕಾಂಕ್ಷಿಗಳು ಸಾವಿಗೀಡಾದ ನಂತರ ಪ್ರತಿಭಟನೆ ಭುಗಿಲೆದ್ದಿತ್ತು.
ಅತಿಶಿ ಅವರು ಬಂದಾಗ ವಿದ್ಯಾರ್ಥಿಗಳು ‘ಗೋ ಬ್ಯಾಕ್’ ಮತ್ತು ‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆ ಕೂಗಿದ್ದಾರೆ. ಆದರೆ ಪ್ರತಿಭಟನಾಕಾರರ ಜತೆ ಕುಳಿತು ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬೆಂಬಲ ನೀಡುವುದಾಗಿ ಅತಿಶಿ ಭರವಸೆ ನೀಡಿದ್ದಾರೆ.
“ನಮ್ಮೊಂದಿಗೆ ಕುಳಿತು ಅಂತಹ ಸಂಸ್ಥೆಗಳ ನಿಯಂತ್ರಣಕ್ಕಾಗಿ ಕಾನೂನು ರೂಪಿಸಲು ನಮಗೆ ಸಹಾಯ ಮಾಡುವ 10 ವಿದ್ಯಾರ್ಥಿಗಳ ಹೆಸರನ್ನು ನಮಗೆ ನೀಡಿ. ಬ್ರೋಕರೇಜ್, ಬಾಡಿಗೆ ಮತ್ತು ವಿದ್ಯುತ್ ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಲಾಗುವುದು. ನೀವು ನಮಗೆ 10 ಹೆಸರುಗಳನ್ನು ನೀಡಿದ ನಂತರ, ನಾವು ನಿಮ್ಮೊಂದಿಗೆ ಹಂಚಿಕೊಳ್ಳುವ ಕಾನೂನಿನ ಕರಡನ್ನು ತಯಾರಿಸಲು ಸಮಿತಿಯು ಒಂದು ತಿಂಗಳು ತೆಗೆದುಕೊಳ್ಳುತ್ತದೆ, ”ಎಂದು ಅತಿಶಿ ಹೇಳಿದ್ದಾರೆ.
ಏತನ್ಮಧ್ಯೆ, ದೆಹಲಿ ಸರ್ಕಾರವು ಎಲ್ಲಾ ಶಾಲೆಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವಯನಾಡ್ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 238; ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿ
“ಶಾಲಾ ಕಟ್ಟಡಗಳಲ್ಲಿ ಯಾವುದಾದರೂ ನೆಲಮಾಳಿಗೆಗಳನ್ನು ಮಾಸ್ಟರ್ ಪ್ಲಾನ್‌ನ ನಿಬಂಧನೆಗಳ ಪ್ರಕಾರ ಮತ್ತು ಮಂಜೂರಾದ ಯೋಜನೆಯ ಪ್ರಕಾರ ಅನುಮತಿಸುವ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ಶಾಲಾ ಕಟ್ಟಡಗಳ ಎಲ್ಲಾ ಗೇಟ್‌ಗಳು ಸರಿಯಾಗಿದ್ದು ಪ್ರವೇಶ ಮತ್ತು ನಿರ್ಗಮನಕ್ಕಾಗಿ ತೆರೆದಿರುತ್ತವೆ. ಎಲ್ಲಾ ಕಾರಿಡಾರ್‌ಗಳು ಎಲ್ಲಾ ಸಮಯದಲ್ಲೂ ಅಡೆತಡೆಗಳಿಂದ ಮುಕ್ತವಾಗಿರಬೇಕು. ನೀರಿನ ಶೇಖರಣೆ ಮತ್ತು ಮೆಟ್ಟಿಲುಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಎಲೆಕ್ಟ್ರಿಕಲ್ ವೈರಿಂಗ್‌ಗಳು ಮತ್ತು ಉಪಕರಣಗಳು ಸೇರಿದಂತೆ ಫಿಟ್ಟಿಂಗ್‌ಗಳನ್ನು ಪರಿಶೀಲಿಸಬೇಕು ಮತ್ತು ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಪ್ಪಿಸಲು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ