ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಡಬ್ಲ್ಯುಎಫ್‌ಐ ಮುಖ್ಯಸ್ಥ

ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಬಿಸಾಡಲು ಹರಿದ್ವಾರಕ್ಕೆ ಹೋದರು, ಆದರೆ ನಂತರ, ಅವರು ಅವುಗಳನ್ನು ಟಿಕಾಯತ್ ಗೆ ನೀಡಿದರು. ಇದು ಅವರ ನಿಲುವು, ನಾವು ಏನು ಮಾಡಬೇಕು? ಎಂದು  ಬ್ರಿಜ್ ಭೂಷಣ್ ಶರಣ್ ಸಿಂಗ್ ಕೇಳಿದ್ದಾರೆ.

ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ: ಡಬ್ಲ್ಯುಎಫ್‌ಐ ಮುಖ್ಯಸ್ಥ
ಬ್ರಿಜ್ ಭೂಷಣ್ ಶರಣ್ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: May 31, 2023 | 2:50 PM

ಲಖನೌ: ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಯಾವುದೇ ಪುರಾವೆಗಳಿದ್ದರೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಡಬ್ಲ್ಯುಎಫ್‌ಐ (WFI) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ (BJP MP) ಬ್ರಿಜ್ ಭೂಷಣ್ ಶರಣ್ ಸಿಂಗ್  (Brij Bhushan Sharan Singh) ಹೇಳುತ್ತಿರುವ ವಿಡಿಯೊವನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಬಿಸಾಡಲು ಹರಿದ್ವಾರಕ್ಕೆ ಹೋದರು, ಆದರೆ ನಂತರ, ಅವರು ಅವುಗಳನ್ನು ಟಿಕಾಯತ್ ಗೆ ನೀಡಿದರು. ಇದು ಅವರ ನಿಲುವು, ನಾವು ಏನು ಮಾಡಬೇಕು? ಎಂದು  ಬ್ರಿಜ್ ಭೂಷಣ್ ಶರಣ್ ಸಿಂಗ್ ಕೇಳಿದ್ದಾರೆ. ಮಂಗಳವಾರ ಹರಿದ್ವಾರದಲ್ಲಿ ಜಮಾಯಿಸಿ ಪದಕಗಳನ್ನು ಗಂಗೆಯಲ್ಲಿ ಎಸೆಯುವುದಾಗಿ ಬೆದರಿಕೆ ಹಾಕಿದ ಕುಸ್ತಿಪಟುಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ವಿರುದ್ಧದ ಆರೋಪಗಳ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ. ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಸಿಂಗ್, ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ನೀರಿಗೆ ಹಾಕುವ ನಿರ್ಧಾರವು ಸಂಪೂರ್ಣವಾಗಿ ಅವರು ತೆಗೆದುಕೊಂಡ ನಿಲುವು ಎಂದು ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಈ ವಿಷಯವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯವಿದ್ದರೆ ಅವರು ನನ್ನನ್ನು ಬಂಧಿಸುತ್ತಾರೆ ಎಂದು ಹೇಳಿದ್ದಾರೆ.

ಮಂಗಳವಾರ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗೆಗೆ ಬಿಸಾಡಲು ನಿರ್ಧರಿಸಿ ಅಲ್ಲಿಗೆ ಬಂದಿದ್ದರು. ಆದರೆ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ ರೈತ ನಾಯಕ ನರೇಶ್ ಟಿಕಾಯತ್, ಆ ಪದಕಗಳನ್ನು ಕುಸ್ತಿಪಟುಗಳಿಂದ ಪಡೆದುಕೊಂಡಿದ್ದಾರೆ.ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಐದು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸಿದ್ದಾರೆ.

ಲೈಂಗಿಕ ಕಿರುಕುಳದ ಆರೋಪದ ಮೇಲೆ ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ತೆಗೆದುಹಾಕಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸುತ್ತಿರುವ ಒಲಿಂಪಿಯನ್‌ಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಪದಕಗಳನ್ನು ಗಂಗೆಯಲ್ಲಿ ಮುಳುಗಿಸಲು ಮಂಗಳವಾರ ಹರಿದ್ವಾರ ತಲುಪಿದ್ದರು. ಇದಕ್ಕೂ ಮುನ್ನ, ಕುಸ್ತಿಪಟುಗಳು ಟ್ವಿಟರ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ತೆರೆದುಕೊಂಡ ಘಟನೆಗಳು ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯದಂತೆ ತಡೆದ ರೈತ ನಾಯಕ ನರೇಶ್ ಟಿಕಾಯತ್

ಮಂಗಳವಾರ ಸಂಜೆ 6 ಗಂಟೆಗೆ ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾ ನದಿಯಲ್ಲಿ ಪದಕಗಳನ್ನು ಎಸೆಯುವುದಾಗಿ ಹೇಳಿಕೆಗಳನ್ನು ಟ್ವೀಟ್ ಮಾಡಿದ ಕುಸ್ತಿಪಟುಗಳು, ಮೇ 28 ರಂದು ನಡೆದ ಎಲ್ಲವನ್ನೂ ನೀವು ನೋಡಿದ್ದೀರಿ, ಪೊಲೀಸರು ನಮ್ಮನ್ನು ಹೇಗೆ ನಡೆಸಿಕೊಂಡರು ಮತ್ತು ಅವರು ನಮ್ಮನ್ನು ಬಂಧಿಸಿದ ರೀತಿಯನ್ನು ನೀವು ನೋಡಿದ್ದೀರಿ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು, ನಮ್ಮ ಸ್ಥಳವನ್ನು ಕಿತ್ತುಕೊಳ್ಳಲಾಗಿದೆ. ಮರುದಿನ ನಮ್ಮ ಮೇಲೆ ಗಂಭೀರ ಪ್ರಕರಣಗಳು ಮತ್ತು ಎಫ್‌ಐಆರ್ ದಾಖಲಿಸಲಾಗಿದೆ. ಕುಸ್ತಿಪಟುಗಳು ತಮಗೆ ಆಗಿರುವ ಲೈಂಗಿಕ ಕಿರುಕುಳಕ್ಕೆ ನ್ಯಾಯ ಕೇಳುವ ಮೂಲಕ ಅಪರಾಧ ಎಸಗಿದ್ದಾರೆಯೇ?ಪೊಲೀಸರು ಮತ್ತು ವ್ಯವಸ್ಥೆ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದೆ, ದಬ್ಬಾಳಿಕೆ ನಡೆಸುವವರು ಮುಕ್ತವಾಗಿ ಓಡಾಡುತ್ತಿದ್ದಾರೆ.ಪೋಸ್ಕೋ ಕಾಯ್ದೆಯನ್ನು ಬದಲಾಯಿಸುವ ಬಗ್ಗೆ ಅವರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ನಿನ್ನೆ, ನಮ್ಮ ಅನೇಕ ಮಹಿಳಾ ಕುಸ್ತಿಪಟುಗಳು ಹೊಲಗಳಲ್ಲಿ ಅಡಗಿಕೊಂಡಿದ್ದರು, ವ್ಯವಸ್ಥೆಯು ದಬ್ಬಾಳಿಕೆ ಮಾಡುವವರನ್ನು ಬಂಧಿಸಬೇಕು. ಆದರೆ ಅದು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಲು ಸಂತ್ರಸ್ತ ಮಹಿಳೆಯರ ಮೇಲೆ ದಬ್ಬಾಳಿಕೆ ಮತ್ತು ಬೆದರಿಸುವುದರಲ್ಲಿ ತೊಡಗಿದೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ದೇಶಕ್ಕಾಗಿ ನಾವು ಗೆದ್ದ ಪದಕಗಳು ಇನ್ನು ಮುಂದೆ ಯಾವುದೇ ಅರ್ಥ ಅಥವಾ ಮಹತ್ವವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಪದಕಗಳನ್ನು ಹಿಂದಿರುಗಿಸಬೇಕೆಂದು ಯೋಚಿಸುತ್ತಿರುವ ನಮಗೆ ಇದು ಸಾವಿಗಿಂತ ಕಡಿಮೆಯಿಲ್ಲ ಆದರೆ ನಾವು ನಮ್ಮ ಆತ್ಮಗೌರವಕ್ಕೆ ರಾಜಿ ಮಾಡಿಕೊಳ್ಳುವುದು ಹೇಗೆ? ಇನ್ನು ಮುಂದೆ ನಮಗೆ ಈ ಪದಕಗಳು ಅಗತ್ಯವಿಲ್ಲ, ಶೋಷಣೆಯ ವಿರುದ್ಧ ಮಾತನಾಡಿದರೆ ನಮ್ಮನ್ನು ಜೈಲಿಗೆ ಹಾಕಲು ಅವರು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:Wrestlers Protest: ಬ್ರಿಜ್​ ಭೂಷಣ್​ರನ್ನು ಬಂಧಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ: ಪೊಲೀಸ್ ಮೂಲಗಳು

ನಾವು ಈ ಪದಕಗಳನ್ನು ಗಂಗೆಯಲ್ಲಿ ಬಿಡುತ್ತಿದ್ದೇವೆ. ನಾವು ಕಠಿಣ ಪರಿಶ್ರಮದಿಂದ ಗಳಿಸಿದ ನಮ್ಮ ಪದಕಗಳು ಗಂಗಾ ನದಿಯಷ್ಟೇ ಪವಿತ್ರವಾಗಿವೆ. ಈ ಪದಕಗಳು ಇಡೀ ದೇಶಕ್ಕೆ ಪವಿತ್ರವಾಗಿವೆ ಮತ್ತು ಪವಿತ್ರ ಪದಕವನ್ನು ಇಡಲು ಸರಿಯಾದ ಸ್ಥಳವು ಪವಿತ್ರ ಗಂಗೆ.ನಮ್ಮ ಅಪವಿತ್ರ ವ್ಯವಸ್ಥೆಯು  ನಮ್ಮ ಲಾಭ ಪಡೆದ ನಂತರ ದಬ್ಬಾಳಿಕೆಯ ಜೊತೆ ನಿಲ್ಲುತ್ತದೆ. ಪದಕವು ನಮ್ಮ ಜೀವನ, ನಮ್ಮ ಆತ್ಮ. ನಾವು ಸಾಯುವವರೆಗೂ ಇಂಡಿಯಾ ಗೇಟ್‌ನಲ್ಲಿ ಉಪವಾಸ ಕುಳಿತುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಭಾನುವಾರ, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಮೆರವಣಿಗೆ ಮಾಡಲು ಪ್ರಯತ್ನಿಸುತ್ತಿದ್ದಾಗ ದೆಹಲಿ ಪೊಲೀಸರು ಬಂಧಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ