ದೆಹಲಿ: ವೈದ್ಯಕೀಯ ಆಮ್ಲಜನಕ ಪೂರೈಕೆಗೆ ಯಾರೇ ಅಡ್ಡಿಪಡಿಸಿದರೂ, ಖಂಡಿತ ಅವರನ್ನು ಸುಮ್ಮನೆ ಬಿಡುವುದಿಲ್ಲ, ನೇಣಿಗೆ ಏರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿಯಲ್ಲಿ ಎರಡ್ಮೂರುವ ಆಸ್ಪತ್ರೆಗಳು ಆಮ್ಲಜನಕ ಕೊರತೆಯ ಬಗ್ಗೆ ಹೈಕೋರ್ಟ್ಗೆ ದೂರು ನೀಡಿ ಅರ್ಜಿ ಸಲ್ಲಿಸಿವೆ. ಹಾಗೇ, ದೆಹಲಿಗೆ ಒಟ್ಟಾರೆ 480 ಮೆಟ್ರಿಕ್ ಟನ್ಗಳಷ್ಟು ಆಕ್ಸಿಜನ್ ಪೂರೈಕೆ ಆಗದೆ ಇದ್ದರೆ, ಇಡೀ ವೈದ್ಯಕೀಯ ವ್ಯವಸ್ಥೆ ಕುಸಿಯುತ್ತದೆ ಎಂದು ಸರ್ಕಾರವೂ ಕೋರ್ಟ್ಗೆ ತಿಳಿಸಿದೆ.
ಕಳೆದ 24ಗಂಟೆಯಲ್ಲಿ ಎರಡು ಆಸ್ಪತ್ರೆಗಳಲ್ಲಿ 20ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ತ್ವರಿತವಾಗಿ 480 ಮೆಟ್ರಿಕ್ ಟನ್ಗಳಷ್ಟು ಆಕ್ಸಿಜನ್ ಬೇಕು. ನಿನ್ನೆಯವರೆಗೆ ಕೇವಲ 297 ಮೆಟ್ರಿಕ್ ಟನ್ಗಳಷ್ಟು ಮಾತ್ರ ಆಕ್ಸಿಜನ್ ಲಭ್ಯವಾಗಿದೆ. ಹೀಗೆ ಆದರೆ ಇನ್ನಷ್ಟು ವಿನಾಶ ತಪ್ಪಿದ್ದಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ಗೆ ಹೇಳಿದ್ದಾರೆ.
ಈ ಎಲ್ಲದರ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ದೆಹಲಿ ಯಾವಾಗ 480 ಮೆಟ್ರಿಕ್ ಟನ್ಗಳಷ್ಟು ಆಕ್ಸಿಜನ್ ಪಡೆಯುತ್ತದೆ? ದಯವಿಟ್ಟು ನಮಗೆ ಮಾಹಿತಿ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ. ಆಮ್ಲಜನಕ ಪೂರೈಕೆಗೆ ಯಾರು ಅಡ್ಡಿಯಾಗುತ್ತಿದ್ದಾರೆ ಎಂಬುದನ್ನು ತಿಳಿಸಿ ಎಂದು ದೆಹಲಿ ಸರ್ಕಾರಕ್ಕೂ ಕೋರ್ಟ್ ಸೂಚನೆ ನೀಡಿದೆ.
ಇನ್ನು ಆಕ್ಸಿಜನ್ಗೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಹೇಳಿದೆ. ಉಳಿದೆಲ್ಲ ರಾಜ್ಯಗಳೂ ಆಮ್ಲಜನಕ ಪೂರೈಕೆಗಾಗಿ ಟ್ಯಾಂಕರ್ ಸೇರಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ. ನಾವು ಅವರಿಗೆ ನಿರ್ದೇಶನ, ನೆರವು ನೀಡುತ್ತಿದ್ದೇವೆ ಅಷ್ಟೆ. ಆದರೆ ದೆಹಲಿ ಸರ್ಕಾರ ಸಂಪೂರ್ಣವಾಗಿ ನಮ್ಮ ಮೇಲೆ ಅವಲಂಬಿತವಾಗಿದೆ. ಇಲ್ಲಿನ ಸರ್ಕಾರ, ಅಧಿಕಾರಿಗಳು ಅವರ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದೆ.
ರಾಷ್ಟ್ರರಾಜಧಾನಿಯಲ್ಲಿ ಆಕ್ಸಿಜನ್ ಅಭಾವದ ಸಮಸ್ಯೆ ತುಸು ಹೆಚ್ಚಾಗೇ ಬಾಧಿಸುತ್ತಿದೆ. ಜೈಪುರ ಗೋಲ್ಡನ್ ಆಸ್ಪತ್ರೆ, ಗಂಗಾರಾಮ್ ಆಸ್ಪತ್ರೆಗಳಲ್ಲಿ ಸುಮಾರು 25 ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಟ್ಟಿದ್ದಾರೆ. ಇದನ್ನು ಹೊರತುಪಡಿಸಿ ಕೆಲವು ಆಸ್ಪತ್ರೆಗಳು, ಆಮ್ಲಜನಕ ಬಿಕ್ಕಟ್ಟಿನ ಸಮಸ್ಯೆಗೆ ಪರಿಹಾರ ಕೊಡಿ ಹೈಕೋರ್ಟ್ ಮೆಟ್ಟಿಲೇರಿವೆ. ಇನ್ನು ಜೈಪುರ ಗೋಲ್ಡನ್ ಆಸ್ಪತ್ರೆ ಕೂಡ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈಗಾಗಲೇ 25 ರೋಗಿಗಳನ್ನು ಕಳೆದುಕೊಂಡಿದ್ದೇವೆ. ಆದರೆ ಆಕ್ಸಿಜನ್ ಪೂರೈಕೆ ಆಗಿಲ್ಲ. ಹೀಗಾದರೆ ಇವತ್ತು ಮತ್ತೆ ಅನಾಹುತ ತಪ್ಪಿದ್ದಲ್ಲ ಎಂದು ಹೇಳಿಕೊಂಡಿದೆ.
ನಮಗೆ 8000 ಲೀಟರ್ ಆಮ್ಲಜನಕ ಬೇಕಿತ್ತು. ಆದರೆ ಕೇವಲ 500 ಲೀ.ಪೂರೈಕೆಯಾಗಿದೆ. ಹೀಗಾದರೆ ನಾವು ಮಾಡುವುದಾದರೂ ಏನು ಎಂದು ಆಸ್ಪತ್ರೆಯೊಂದು ದೆಹಲಿ ಹೈಕೋರ್ಟ್ಗೆ ಪ್ರಶ್ನಿಸಿದೆ. ದೆಹಲಿ ಹೈಕೋರ್ಟ್ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ, ನಾವು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್ ಸಂಬರಗಿ
ಪ್ರಭಾವ ಬೀರಿದರೂ ನನ್ನ ಆಪ್ತನನ್ನ ಕಾಪಾಡಿಕೊಳ್ಳೋಕೆ ಆಗಲಿಲ್ಲ, ಎಲ್ಲರೂ ಮನೆಯಲ್ಲೇ ಇರೀ: ನಟ ಅನಿರುದ್ಧ್ ಕಳಕಳಿ
Published On - 3:09 pm, Sat, 24 April 21