ಮಕ್ಕಳು ಬೆಳಗ್ಗೆ 7 ಗಂಟೆಗೆ ಶಾಲೆಗೆ ಹೋಗುತ್ತಾರೆ. ಹೀಗಿರುವಾಗ ನ್ಯಾಯಮೂರ್ತಿ ಮತ್ತು ವಕೀಲರು 9 ಗಂಟೆಗೆ ತಮ್ಮ ಕೆಲಸ ಆರಂಭ ಮಾಡಬಹುದಲ್ಲವೇ ಎಂದು ನ್ಯಾಯಮೂರ್ತಿ ಯು ಲಲಿತ್ (Justice Lalit) ಹೇಳಿದ್ದಾರೆ. ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ (Supreme Court) ಕಲಾಪ ಆರಂಭವಾಗುವ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮುಂಚೆ ಕೆಲಸ ಆರಂಭವಾಗಿದೆ. ಸುಪ್ರೀಂಕೋರ್ಟ್ ವಾರದ ದಿನಗಳಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತದೆ. 4 ಗಂಟೆಯವರೆಗೆ ಕೆಲಸ ನಡೆಯುತ್ತದೆ. ಇದರಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆ ವರೆಗೆ ಭೋಜನ ವಿರಾಮವಿರುತ್ತದೆ.ಸಾಮಾನ್ಯ ದಿನಕ್ಕಿಂತ ವ್ಯತ್ಯಸ್ತವಾಗಿ ಶುಕ್ರವಾರ ನ್ಯಾಯಮೂರ್ತಿ ಲಲಿತ್ ಅವರು ಬೆಳಗ್ಗೆ 9.30ಕ್ಕೆ ವಿಚಾರಣೆ ಆರಂಭಿಸಿದ್ದಾರೆ. ಅವರ ನ್ಯಾಯಪೀಠದಲ್ಲಿ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಇದ್ದರು. ಜಾಮೀನು ಅರ್ಜಿಯೊಂದರ ವಿಚಾರಣೆಗೆ ಹಾಜರಾದ ಮಾಜಿ ಅಟಾರ್ನಿ ಜನರಲ್ ಮುಕುಲ್ ರಸ್ಟೋಗಿ ಬೇಗನೆ ಕೋರ್ಟ್ ಕಲಾಪ ಆರಂಭಿಸಿದ್ದಕ್ಕೆ ನ್ಯಾಯಪೀಠವನ್ನು ಶ್ಲಾಘಿಸಿದ್ದಾರೆ. ಬೆಳಗ್ಗೆ 9.30 ಕೋರ್ಟ್ ಕಲಾಪ ಆರಂಭಿಸಲು ಸರಿಯಾದ ಸಮಯ ಎಂದು ರಸ್ಟೋಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತ್ ಅವರು ಕೋರ್ಟ್ ಕಲಾಪ ಯಾವತ್ತೂ ಬೆಳಗ್ಗೆ ಆರಂಭವಾಗಬೇಕು ಎಂಬ ನಿಲುವು ನನ್ನದು. ನಾವು ಬೆಳಗ್ಗೆ 9 ಗಂಟೆಗೆ ಕಲಾಪ ಆರಂಭಿಸಬೇಕು. ನಮ್ಮ ಮಕ್ಕಳು ಬೆಳಗ್ಗೆ 7ಗಂಟೆಗೆ ಶಾಲೆಗೆ ಹೋಗುತ್ತಾರೆ. ಅವರು ಅಷ್ಟು ಬೆಳಗ್ಗೆ ಶಾಲೆಗೆ ಹೋಗಲು ಸಾಧ್ಯವಾಗುವುದಾದರೆ ನಾವು ಯಾಕೆ ಬೆಳಗ್ಗೆ 9 ಗಂಟೆಗೆ ಕೋರ್ಟ್ ಕಲಾಪ ಆರಂಭ ಮಾಡಬಾರದು? ಎಂದು ಹೇಳಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಲಿರುವ ನ್ಯಾಯಮೂರ್ತಿ ಲಲಿತ್ ಅವರು ಸುಪ್ರೀಂಕೋರ್ಟ್ ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕು. ಬೆಳಗ್ಗೆ 11.30ಕ್ಕೆ ಅರ್ಧ ಗಂಟೆ ವಿರಾಮ. ಆಮೇಲೆ 12 ಗಂಟೆಗೆ ಮತ್ತೆ ಆರಂಭವಾಗಿ ಮಧ್ಯಾಹ್ನ 2 ಗಂಟೆಗೆ ಮುಗಿಯಬೇಕು. ಸಂಜೆ ನಮಗೆ ಹೆಚ್ಚು ಹೊತ್ತು ಸಿಗುತ್ತದೆ ಎಂದು ಹೇಳಿದ್ದಾರೆ. ಹೊಸ ವಿಚಾರಣೆ ಮತ್ತು ಪ್ರಕರಣಗಳು ಸಾಮಾನ್ಯವಾಗಿ ವಿಚಾರಣೆಗೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
Published On - 12:35 pm, Fri, 15 July 22