Matralayam: ಮಂತ್ರಾಲಯಕ್ಕೆ ನೆರೆ ಎಂಬ ಅಪಪ್ರಚಾರಕ್ಕೆ ಕಿವಿಗೊಡದೆ ಎಂದಿನಂತೆ ಬನ್ನಿ ಎಂದ ರಾಘವೇಂದ್ರ ಸ್ವಾಮಿ ಮಠ
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಸಮೀಪದ ಎಲೆಬಿಚ್ಚಾಲೆಯಲ್ಲಿ ‘ರಾಯರ ಜಪದಕಟ್ಟೆ’ ಮುಳುಗಡೆಯಾಗಿದೆ.

ರಾಯಚೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ (Tungabhadra River) ತುಂಬಿ ಹರಿಯುತ್ತಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ಮಂತ್ರಾಲಯ ಸಮೀಪದ ಎಲೆಬಿಚ್ಚಾಲೆಯಲ್ಲಿ ‘ರಾಯರ ಜಪದಕಟ್ಟೆ’ (ರಾಘವೇಂದ್ರ ಸ್ವಾಮಿಗಳು ಜಪ ಮಾಡಿದ ಸ್ಥಳ) ಮುಳುಗಡೆಯಾಗಿದೆ. ಆದರೆ ಮಂತ್ರಾಲಯ ಪಟ್ಟಣ ಹಾಗೂ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠ (Sri Raghavendra Swamy Matha) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಮಂತ್ರಾಲಯ ಪಟ್ಟಣವು ನೀರಿನಲ್ಲಿ ಮುಳುಗಿದೆ ಎಂದು ಕೆಲ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ವರದಿಯಾಗಿದ್ದು, ರಾಘವೇಂದ್ರ ಸ್ವಾಮಿಗಳ ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ. ತುಂಗಭದ್ರಾ ನದಿಯಿಂದ ನೀರು ಬಿಡುಗಡೆ ಮಾಡಲಾಗಿದೆಯಾದರೂ, ಅದು ನದಿ ದಂಡೆಯ ಮಿತಿಯೊಳಗೇ ಇದೆ ಎಂದು ಮಠವು ಸ್ಪಷ್ಟಪಡಿಸಿದೆ.
ಮಂತ್ರಾಲಯದ ದರ್ಶನ, ಪ್ರಸಾದ ಮತ್ತು ವಸತಿ ಸೌಕರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮೊದಲು ಲಭ್ಯವಿದ್ದ ಎಲ್ಲ ಸೇವೆಗಳನ್ನು ಮಠವು ಒದಗಿಸುತ್ತಿದೆ. ಭಕ್ತರು ಮತ್ತು ಶ್ರದ್ಧಾಳುಗಳು ಎಂದಿನಂತೆ ತಮ್ಮ ಪ್ರವಾಸವನ್ನು ಯೋಜಿಸಿಕೊಳ್ಳಬಹುದು ಮತ್ತು ಮಂತ್ರಾಲಯಕ್ಕೆ ಭೇಟಿ ನೀಡಬಹುದು ಎಂದು ಮಠದ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ
ಹೊಸಪೇಟೆಯ ತುಂಗಾಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 1,633 ಅಡಿ. ಪ್ರಸ್ತುತ ಜಲಾಶಯದಲ್ಲಿ 1,631.24 ಅಡಿಗಳಷ್ಟು ನೀರು ಸಂಗ್ರಹಹವಾಗಿದೆ. ಜಲಾಶಯಕ್ಕೆ 1,18,183 ಕ್ಯೂಸೆಕ್ ಒಳಹರಿವು ಇದ್ದು, 1,14,823 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಭದ್ರಾ ಜಲಾಶಯವು ಭರ್ತಿಯಾಗಿದ್ದು, 40,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ತುಂಗಭದ್ರಾ ನದಿ ಸೊಕ್ಕಿ ಹರಿಯುತ್ತಿರುವುದರಿಂದ ಮಂತ್ರಾಲಯ ಪಟ್ಟಣ ಮತ್ತು ವೃಂದಾವನಕ್ಕೆ ಧಕ್ಕೆಯಾಗಬಹುದು ಎಂದು ಕೆಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.
Published On - 1:35 pm, Fri, 15 July 22