ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದ್ಯ ಪಂಜಾಬ್ ರಾಜ್ಯದ ಪ್ರವಾಸದಲ್ಲಿದ್ದಾರೆ. ನಿನ್ನೆ ಪಂಜಾಬ್ನಲ್ಲಿ ಮಾತನಾಡಿದ್ದ ಅವರು, ತಮ್ಮ ಪಕ್ಷ ಇಲ್ಲಿಗೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೂ ತಿಂಗಳಿಗೆ 1 ಸಾವಿರ ರೂಪಾಯಿ ನೀಡುವ ಭರವಸೆ ನೀಡಿದ್ದರು. ಹಾಗೇ, ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಸುಮಾರು 25 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲ ಆಪ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ನನಗೆ ಕಾಂಗ್ರೆಸ್ ಕಸವನ್ನು ಒಪ್ಪಿಕೊಳ್ಳಲು, ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಮನಸು ಒಪ್ಪುತ್ತಿಲ್ಲ ಎಂದು ನಗುತ್ತ ಹೇಳಿದ್ದಾರೆ. ಇತ್ತೀಚೆಗೆ ಒಂದಿಲ್ಲೊಂದು ವಿವಾದ ಎಬ್ಬಿಸುತ್ತಿರುವ ನವಜೋತ್ ಸಿಂಗ್ ಸಿಧು ಆಪ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದು ನಿಜವಾ ಎಂದು ಮಾಧ್ಯಮ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕಾಂಗ್ರೆಸ್ನ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಕಾಂಗ್ರೆಸ್ನ ಕಚಡಾ, ಕಸಕಡ್ಡಿಗಳನ್ನೇಕೆ ನಾವು ಸೇರಿಸಿಕೊಳ್ಳಬೇಕು. ಕಾಂಗ್ರೆಸ್ನ ಒಂದು ಕಸವನ್ನು ಸೇರಿಸಿಕೊಂಡರೂ ಅದರ ಹಿಂದೆ ಮತ್ತೆ 25 ಶಾಸಕರು, ಮೂವರು ಸಂಸದರು ಆ ಪಕ್ಷದಿಂದ ಬರುತ್ತಾರೆ ಎಂದು ಖಚಿತವಾಗಿಯೂ ಸತ್ಯ ಎಂದಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಬಲವಾದ ಆಶಯ. ಹಾಗೊಮ್ಮೆ ನಮ್ಮ ಪಕ್ಷ ಗೆದ್ದರೆ ನಾನಂತೂ ಖಂಡಿತವಾಗಿಯೂ ಇಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅರವಿಂದ್ ಕೇಜ್ರಿವಾಲ್, ಈಗ ರಾಜ್ಯದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಇಲ್ಲಿನ ಸರ್ಕಾರ ಕಣ್ಣಲ್ಲಿ ನೀರಿಡುತ್ತಿದೆ. 15 ವರ್ಷಗಳಿಂದ ಇಲ್ಲಿ ನೀವೇ ಅಧಿಕಾರದಲ್ಲಿ ಇರುವಾಗ ಅದನ್ನು ಖಾಲಿ ಮಾಡಿದ್ದು ಯಾರು? ಆದರೆ ನನಗೆ ಗೊತ್ತಿದೆ ಪಂಜಾಬ್ ಖಜಾನೆ ಹೇಗೆ ತುಂಬಿಸಬೇಕು ಎಂಬುದು ಎಂದು ದೆಹಲಿ ಸಿಎಂ ಹೇಳಿದ್ದಾರೆ. ಪಂಜಾಬ್ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ದೆಹಲಿಯನ್ನು ನಾವು ಹೇಗೆ ಬದಲಾಯಿಸಿದ್ದೇವೋ ಹಾಗೇ ಇದನ್ನೂ ಬದಲಿಸುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದ ನಂತರ ಪರಿಣಾಮಗಳ ಬಗ್ಗೆ ಬಿಜೆಪಿಗೆ ಎಚ್ಚರಿಕೆ ನೀಡಿದ ಸಚಿನ್ ಪೈಲಟ್
Published On - 4:12 pm, Tue, 23 November 21