’ಉತ್ತರಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇವಿಎಂ ವ್ಯವಸ್ಥೆ ತೆಗೆದುಹಾಕುತ್ತೇವೆ‘-ಅಖಿಲೇಶ್ ಯಾದವ್
ಅಮೆರಿಕದಂಥ ದೇಶಗಳೇ ಬ್ಯಾಲೆಟ್ ವ್ಯವಸ್ಥೆಯ ಮತದಾನ ಅಳವಡಿಸಿಕೊಂಡಿವೆ. ಇಲ್ಲಿಯೂ ಕೂಡ ಇವಿಎಂ ರದ್ದುಗೊಳಿಸಿ, ಬ್ಯಾಲೆಟ್ ಮತದಾನ ನಡೆದರೆ ಖಂಡಿತ ಬಿಜೆಪಿ ಸೋಲುತ್ತದೆ ಎಂದು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲಖನೌ: ಯಾವುದೇ ಚುನಾವಣೆ ಇರಲಿ ಅದರಲ್ಲಿ ಸೋತ ತಕ್ಷಣ ಕೆಲವು ಪಕ್ಷಗಳು ಇವಿಎಂ ವ್ಯವಸ್ಥೆಯನ್ನು ದೂರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಚುನಾವಣೆಗಳಲ್ಲಿ ಇವಿಎಂ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂಬುದು ಸಮಾಜವಾದಿ ಪಕ್ಷ, ಟಿಎಂಸಿ ಸೇರಿ ಹಲವು ಪಕ್ಷಗಳ ಆಗ್ರಹ. ಇದೀಗ ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಆರಂಭಿಸಿರುವ ಸಮಾಜವಾದಿ ಪಕ್ಷದ ನಾಯಕ, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮುಂದಿನ ವರ್ಷ ನಮ್ಮ ಪಕ್ಷ ಉತ್ತರಪ್ರದೇಶದಲ್ಲಿ ಆಡಳಿತಕ್ಕೆ ಬಂದರೆ ಇವಿಎಂ (EVM) ವ್ಯವಸ್ಥೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇಂದು ಲಖನೌದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕದಂಥ ದೇಶಗಳೇ ಬ್ಯಾಲೆಟ್ ವ್ಯವಸ್ಥೆಯ ಮತದಾನ ಅಳವಡಿಸಿಕೊಂಡಿವೆ. ಇಲ್ಲಿಯೂ ಕೂಡ ಇವಿಎಂ ರದ್ದುಗೊಳಿಸಿ, ಬ್ಯಾಲೆಟ್ ಮತದಾನ ನಡೆದರೆ ಖಂಡಿತ ಬಿಜೆಪಿ ಸೋಲುತ್ತದೆ. ನಾವು ಉತ್ತರಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದರೆ, ಇಲ್ಲಿ ಇವಿಎಂ ಪದ್ಧತಿಯನ್ನು ಖಂಡಿತ ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ ಇವಿಎಂಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಇದೇ ಮೊದಲ ಬಾರಿ ಅಲ್ಲ, ಈ ಹಿಂದೆಯೂ ಕೂಡ ಹೇಳಿದ್ದಾರೆ. ಕಳೆದ ತಿಂಗಳು ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ಇವಿಎಂ ಯಂತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕರೆಕೊಟ್ಟಿದ್ದರು.
ಬ್ಯಾಲೆಟ್ ಪತ್ರದ ಮತದಾನಕ್ಕೆ ಮಾಯಾವತಿ ಆಗ್ರಹ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾತ್ರವಲ್ಲದೆ, ಉತ್ತರಪ್ರದೇಶದ ಮತ್ತೊಮ್ಮ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಕೂಡ ಬ್ಯಾಲೆಟ್ ಪತ್ರದ ಮೂಲಕ ಮತದಾನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದಲೂ ಅವರು ಇವಿಎಂ (ಎಲೆಕ್ಟ್ರಾನಿಕ್ ಮತಯಂತ್ರ)ಬಗ್ಗೆ ಅನುಮಾನ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದು, ಈ ಬಾರಿಯೂ ಅದನ್ನೇ ಹೇಳಿದ್ದಾರೆ. ಅಂದಹಾಗೆ ಉತ್ತರಪ್ರದೇಶದಲ್ಲಿ 2022ರ ಫೆಬ್ರವರಿ-ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಒಟ್ಟು 403 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇದನ್ನೂ ಓದಿ: ಜಲ್ ಜೀವನ್ ಮಿಷನ್: ಗ್ರಾಮ ಪಂಚಾಯತ್, ಪಾನಿ ಸಮಿತಿಗಳ ಜತೆ ಪ್ರಧಾನಿ ಮೋದಿ ಸಂವಾದ ನಾಳೆ
Harnaaz Sandhu: ‘ಮಿಸ್ ಯೂನಿವರ್ಸ್ ಇಂಡಿಯಾ 2021’ರ ಕಿರೀಟ ಮುಡಿಗೇರಿಸಿಕೊಂಡ ಹರ್ನಾಸ್ ಸಂಧು