ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​

ಸಲ್ಮಾನ್ ಖುರ್ಷಿದ್​ ಪುಸ್ತಕದಲ್ಲಿ ಹೇಳಲಾದ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಪ್ರತಿಯೊಬ್ಬರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅದು ನಿಯಂತ್ರಣ ಮೀರಬಾರದು ಎಂದಿದ್ದರು.

ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​
ದೆಹಲಿ ಹೈಕೋರ್ಟ್​

ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಬರೆದ ಸನ್​ರೈಸ್ ಓವರ್ ಅಯೋಧ್ಯಾ ಎಂಬ ಪುಸ್ತಕ ಇತ್ತೀಚೆಗೆ ವಿವಾದ ಸೃಷ್ಟಿಸಿದೆ. ಆ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್​ ಹಿಂದುತ್ವವನ್ನು, ಇಸ್ಲಾಂ ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೋ ಹರಾಮ್​ಗೆ ಹೋಲಿಸಿದ್ದೇ ಈ ವಿವಾದ, ವಿರೋಧಕ್ಕೆ ಕಾರಣ. ಕೆಲವರು ಆ ಪುಸ್ತಕವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ದೆಹಲಿ ಹೈಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದೆ. ‘ಈ ಪುಸ್ತಕ ಓದುವುದರಿಂದ ಯಾರ ಭಾವನೆಗೆ ಧಕ್ಕೆಯಾಗುತ್ತದೆಯೋ, ಅಂಥವರು ಇದನ್ನು ಓದಲೇಬೇಡಿ. ಬೇರೆ ಏನಾದರೂ ಒಳ್ಳೆಯದನ್ನು ಓದಿ’ ಎಂದು ಸಲಹೆ ನೀಡಿದೆ.  

‘ಪುಸ್ತಕ ನಿಷೇಧಿಸಬೇಕು ಎಂದು ಇಲ್ಲಿ ಅರ್ಜಿ ಸಲ್ಲಿಸುವ ಬದಲು, ನೀವ್ಯಾಕೆ ಜನರಿಗೇ ಹೇಳಬಾರದು. ಈ ಪುಸ್ತಕವನ್ನು ಖರೀದಿಸಬೇಡಿ, ಓದಬೇಡಿ ಎಂದು ಜನರಿಗೇ ನೇರವಾಗಿ ಹೇಳಿ. ಈ ಪುಸ್ತಕದಲ್ಲಿ ಕೆಟ್ಟದಾಗಿ ಬರೆಯಲಾಗಿದೆ. ಹಾಗಾಗಿ ಓದಬೇಡಿ ಎಂದು ಪ್ರತಿಯೊಬ್ಬರಿಗೂ ಹೇಳಿ. ಇದರಲ್ಲಿ ಏನಾದರೂ ನೋವುಂಟಾಗುವ ವಿಷಯಗಳಿದ್ದರೆ, ಅದನ್ನು ಓದುವುದನ್ನು ಬಿಟ್ಟು, ಬೇರೆ ಏನಾದರೂ ಓದುವುದು ಒಳ್ಳೆಯದು’ ಎಂದು ಹೈಕೋರ್ಟ್ ಅರ್ಜಿದಾರರಿಗೆ ಹೇಳಿದೆ.

ಸಲ್ಮಾನ್ ಖುರ್ಷಿದ್​ ಪುಸ್ತಕದಲ್ಲಿ ಹೇಳಲಾದ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರರು, ಪ್ರತಿಯೊಬ್ಬರಿಗೂ ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅದು ನಿಯಂತ್ರಣ ಮೀರಬಾರದು. ಯಾರಿಗೂ ಇತರರ ಭಾವನೆಗಳನ್ನು ಉಲ್ಲಂಘಿಸುವ ಹಕ್ಕು ಇಲ್ಲ. ಆರ್ಟಿಕಲ್​ 19ರಲ್ಲಿರುವ ನಿರ್ಬಂಧಗಳನ್ನು ಮೀರಿದಂತೆ ಆಗುತ್ತದೆ ಎಂದು ದೆಹಲಿ ಹೈಕೋರ್ಟ್​ಗೆ ಹೇಳಿದ್ದರು. ಆದರೆ ಹೈಕೋರ್ಟ್​ ಪುಸ್ತಕ ನಿರ್ಬಂಧಿಸಲಾಗದು ಎಂದು ಖಡಾಖಂಡಿತವಾಗಿ ಹೇಳಿದೆ.  ಅಷ್ಟೇ ಅಲ್ಲ, ಅರ್ಜಿದಾರರು ಹೇಳುತ್ತಿರುವ ವಿಚಾರ ಪುಸ್ತಕದ ಒಂದು ಆಯ್ದ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಅದಕ್ಕಾಗಿ ಪ್ರಕಾಶಕರ ಪರವಾನಗಿಯನ್ನು ರದ್ದುಪಡಿಸಲಾಗದು. ನಮಗೆ ಇಡೀ ಪುಸ್ತಕವನ್ನೂ ಕೊಟ್ಟಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: IPL 2022: ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರ ನೇರ ಆಯ್ಕೆ: ಏನಿದು ನಿಯಮ?

Click on your DTH Provider to Add TV9 Kannada