ಭಾರತದತ್ತ ಬಂದರೆ ಏರ್​ಸ್ಟ್ರೈಕ್​​ಗೆ ಸಿದ್ಧರಾಗಿಯೇ ಇದ್ದೇವೆ: ತಾಲಿಬಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ ಯೋಗಿ

Yogi Adityanath: ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (SBSP)ದ ಮುಖ್ಯಸ್ಥ ಓಂ ಪ್ರಕಾಶ್​ ರಾಜ್​ಭರ್​ ಬಗ್ಗೆ ಕೂಡ ಯೋಗಿ ಆದಿತ್ಯನಾಥ್​ ಮಾತನಾಡಿದರು. ಈ ಎಸ್​ಬಿಎಸ್​ಪಿ ಪಕ್ಷ ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿತ್ತು. ಆದರೀಗ ಅಖಿಲೇಶ್​ ಯಾದವ್​ರ ಎಸ್​ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಭಾರತದತ್ತ ಬಂದರೆ ಏರ್​ಸ್ಟ್ರೈಕ್​​ಗೆ ಸಿದ್ಧರಾಗಿಯೇ ಇದ್ದೇವೆ: ತಾಲಿಬಾನಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ ಯೋಗಿ
ಯೋಗಿ ಆದಿತ್ಯನಾಥ್​
Edited By:

Updated on: Nov 01, 2021 | 12:03 PM

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ತಾಲಿಬಾನಿಗಳಿಗೆ ಒಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸದ್ಯ ಅಫ್ಘಾನಿಸ್ತಾನ ತಾಲಿಬಾನಿಗಳಿಂದ ತೊಂದರೆಗೊಳಗಾಗಿದೆ. ಪಾಕಿಸ್ತಾನದಲ್ಲೂ ಅಸ್ಥಿರತೆ ಮೂಡಿಸಲು ತಾಲಿಬಾನಿಗಳು ಸಿದ್ಧರಾಗಿದ್ದಾರೆ. ಆದರೆ ಭಾರತದ ಕಡೆ ಬಂದರೆ ನಮ್ಮಲ್ಲಿಂದ ಏರ್​ಸ್ಟ್ರೈಕ್​ (ವೈಮಾನಿಕದಾಳಿ) ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಅತ್ಯಂತ ಬಲಿಷ್ಠ ರಾಷ್ಟ್ರವಾಗಿದೆ. ನಮ್ಮ ರಾಷ್ಟ್ರದೆಡೆಗೆ ಕಣ್ಣೆತ್ತಿ ನೋಡುವ ಧೈರ್ಯವನ್ನು ಯಾವ ದೇಶಗಳೂ ಮಾಡುವುದಿಲ್ಲ. ಇಂದು ತಾಲಿಬಾನ್​ನಿಂದಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಅಸ್ಥಿರತೆ ಉಂಟಾಗಿದೆ. ಆದರೆ ಅವರು ಭಾರತದೆಡೆಗೆ ಬಂದರೆ ವೈಮಾನಿಕ ದಾಳಿಗೆ ನಾವೂ ಸಿದ್ಧರಾಗಿದ್ದೇವೆ. ಅದು ತಾಲಿಬಾನಿಗಳಿಗೂ ಗೊತ್ತಿರುವ ವಿಷಯ ಎಂದು ಹೇಳಿದರು.

ಇದೇ ವೇಳೆ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (SBSP)ದ ಮುಖ್ಯಸ್ಥ ಓಂ ಪ್ರಕಾಶ್​ ರಾಜ್​ಭರ್​ ಬಗ್ಗೆ ಕೂಡ ಮಾತನಾಡಿದ್ದಾರೆ. ಈ ಎಸ್​ಬಿಎಸ್​ಪಿ ಪಕ್ಷ ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿತ್ತು. ಆದರೀಗ ಅಖಿಲೇಶ್​ ಯಾದವ್​ರ ಎಸ್​ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅದನ್ನೇ ಉಲ್ಲೇಖಿಸಿದ ಯೋಗಿ ಆದಿತ್ಯನಾಥ್​, ಎಸ್​​ಬಿಎಸ್​ಪಿ ಮುಖ್ಯಸ್ಥ ರಾಜ್​ಭರ್​ ಆಲೋಚನೆ ಏನಿದ್ದರೂ ಅವರ ಕುಟುಂಬ ಅಭಿವೃದ್ಧಿಗಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು.  ಅಲ್ಲಿ ಅಪ್ಪ ಸಚಿವನಾದರೆ ಒಬ್ಬ ಮಗ ಸಂಸದ ಆಗಲೇಬೇಕು..ಇನ್ನೊಬ್ಬ ಪುತ್ರನಿಗೆ ಎಂಎಲ್​ಸಿ ಸ್ಥಾನ ಕೊಡಲೇಬೇಕು. ಇಂಥ ಬ್ಲ್ಯಾಕ್​ಮೇಲ್​ ರಾಜಕೀಯ ಕೊನೆಯಾಗಬೇಕು ಎಂದೂ ಹೇಳಿದರು.

ಸುಹೇಲ್​ದೇವ್​ ಮಹಾರಾಜನ ಬಗ್ಗೆ ಕೂಡ ಯೋಗಿ ಆದಿತ್ಯನಾಥ್​ ಮಾತನಾಡಿದರು. ಸುಹೇಲ್​ ದೇವ್​ ಮಹಾರಾಜ ಶ್ರಾವಸ್ತಿಯ ರಾಜನಾಗಿದ್ದರು. ಇವರು ಕ್ರಿಪೂ 1304ರಲ್ಲಿ ಘಜ್ನಾವಿಡ್​​ನ ಜನರಲ್​ ಆಗಿದ್ದ ಗಾಜಿ ಮಿಯಾನ್​​ನ್ನು ಕೊಂದು ಸುಪ್ರಸಿದ್ಧರಾಗಿದ್ದಾರೆ. ಅವರ ಸುಹೇಲ್​ದೇವ್​ ಹೆಸರಿನಲ್ಲಿ ಅವರ ಸಮುದಾಯದವರು ರಚಿಸಿಕೊಂಡ ಪಕ್ಷ ಈ  ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ. ಈ ಸುಹೇಲ್​ದೇವ್​ ಬಗ್ಗೆ ಉಲ್ಲೇಖ ಮಾಡಿದ ಯೋಗಿ ಆದಿತ್ಯನಾಥ್​, ನನ್ನ ಕ್ಯಾಬಿನೆಟ್​ನಲ್ಲಿ ರಾಜ್​ಭರ್​ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಇದ್ದಾರೆ. ಅದರಲ್ಲಿ ಒಬ್ಬ ಸಚಿವ ಮಹಾರಾಜ ಸುಹೇಲ್​ ದೇವ್​ ಗೌವರಾರ್ಥ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನೊಬ್ಬ ಸಚಿವ ಅನಿಲ್​ ರಾಜ್​ಭರ್​ ಸ್ಮಾರಕವನ್ನು ನಿರ್ಮಿಸಿಬೇಕು ಎಂದು ಹೇಳಿದ್ದಾರೆ. ಈ ಮಧ್ಯೆ ಬಹ್ರೈಚ್​​​ನಲ್ಲಿ ಮಹಾರಾಜ ಸುಹೇಲ್​ದೇವ್​ ಸ್ಮಾರಕ ಕಟ್ಟಲಾಗುತ್ತಿದೆ.  ಬಹ್ರೈಚ್​​ನ ವೈದ್ಯಕೀಯ ಕಾಲೇಜಿಗೆ ಸುಹೇಲ್​ದೇವ್​ ಹೆಸರು ಇಡಲಾಗಿದೆ. ಆದರೆ ವಿರೋಧ ಪಕ್ಷಗಳು ಸುಹೇಲ್​ದೇವ್​​ಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್​, ಎಸ್​ಪಿ, ಬಿಎಸ್​ಪಿ ಪಕ್ಷಗಳ ವಿರುದ್ಧವೂ ಕಿಡಿಕಾರಿದರು.

ಇದನ್ನೂ ಓದಿ: Coronavirus cases in India: ದೇಶದಲ್ಲಿ 12,514 ಹೊಸ ಕೊವಿಡ್ ಪ್ರಕರಣ ಪತ್ತೆ, 251 ಮಂದಿ ಸಾವು

ಕನ್ನಡ ನಮ್ಮ ದೇವರು, ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು; ಬಸವರಾಜ ಬೊಮ್ಮಾಯಿ ಭಾಷಣ

Published On - 11:31 am, Mon, 1 November 21