ನಿಮಗೆ ತಾಕತ್ತಿದ್ದರೆ ದಾವೂದ್ ಇಬ್ರಾಹಿಂನನ್ನು ಸಾಯಿಸಿ; ಮೋದಿ ಸರ್ಕಾರಕ್ಕೆ ಸಿಎಂ ಉದ್ಧವ್ ಠಾಕ್ರೆ ಸವಾಲು
ಬಿಜೆಪಿ ರಾಮಮಂದಿರದ ಹೆಸರಿನಲ್ಲಿ ಕಳೆದ ಚುನಾವಣೆಯಲ್ಲಿ ಹೋರಾಡಿದೆ. ಮುಂದಿನ ಚುನಾವಣೆಯಲ್ಲಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮತ ಕೇಳಲು ಹೊರಟಿದೆಯೇ? ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ (BJP Government) ತಾಕತ್ತಿದ್ದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಕೊಲ್ಲಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಸವಾಲು ಹಾಕಿದ್ದಾರೆ. ಈ ಕುರಿತು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ದಾವೂದ್ ಇಬ್ರಾಹಿಂ ಜೊತೆ ಹಲವು ವರ್ಷಗಳ ಕಾಲ ಸಂಪರ್ಕ ಹೊಂದಿದ್ದರೆ ಕೇಂದ್ರ ಸಂಸ್ಥೆಗಳು ಏನು ಮಾಡುತ್ತಿತ್ತು? ಎಂದು ನವಾಬ್ ಮಲಿಕ್ (Nawab Malik) ಅವರನ್ನು ಸಮರ್ಥಿಸಿಕೊಂಡಿದ್ದಾರೆ. ನವಾಬ್ ಮಲಿಕ್ ರಾಜೀನಾಮೆಗೆ ಒತ್ತಾಯಿಸಿ ಮಹಾರಾಷ್ಟ್ರ ವಿಧಾನಸಭೆಯ ಹೊರಗೆ ಬಿಜೆಪಿ ಶಾಸಕರು ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ಅಫ್ಜಲ್ ಗುರು ಮತ್ತು ಭಯೋತ್ಪಾದಕ ಬುರ್ಹಾನ್ ವಾನಿ ಬಗ್ಗೆ ಸಹಾನುಭೂತಿ ಹೊಂದಿರುವ ಮೆಹಬೂಬಾ ಮುಫ್ತಿಯನ್ನು ಕೇಂದ್ರ ಸರ್ಕಾರ ಏಕೆ ಬೆಂಬಲಿಸಿತು? ಎಂದು ಕೇಳಿದ್ದಾರೆ.
ನೀವು ನನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿ, ನನ್ನನ್ನು ಜೈಲಿಗೆ ಹಾಕಲು ಬಯಸುತ್ತಿರುವ ರೀತಿಯನ್ನೆಲ್ಲ ಬಯಲಿಗೆಳೆದು ಏನು ಪ್ರಯೋಜನ? ಕೋರ್ಟ್ ಸಾಕ್ಷಿ ನೋಡಿ ತೀರ್ಮಾನಿಸುತ್ತದೆ. ನನ್ನನ್ನು ಜೈಲಿಗೆ ಬೇಕಾದರೂ ಹಾಕಿ. “ನೀವು ಅಧಿಕಾರಕ್ಕೆ ಬರಬೇಕಾದರೆ ಅಧಿಕಾರಕ್ಕೆ ಬನ್ನಿ. ಆದರೆ ಅಧಿಕಾರಕ್ಕೆ ಬರಲು ಈ ಎಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ. ನಮ್ಮ ಅಥವಾ ಬೇರೆಯವರ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡಬೇಡಿ. ನಿಮ್ಮ ಕುಟುಂಬಕ್ಕೆ ನಾವು ಎಂದಿಗೂ ತೊಂದರೆ ನೀಡಿಲ್ಲ” ಎಂದು ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ನೇಮಕ ಮಾಡಿಕೊಳ್ಳಬೇಕು. ನಿಮಗೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿದ್ದರೆ ಸ್ವಂತ ಪರಿಶ್ರಮದಿಂದ ಅಧಿಕಾರಕ್ಕೆ ಬನ್ನಿ. ಆದರೆ, ಅಧಿಕಾರಕ್ಕಾಗಿ ಈ ರೀತಿಯ ಕೆಲಸಗಳನ್ನೆಲ್ಲ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಮಮಂದಿರದ ಹೆಸರಿನಲ್ಲಿ ಕಳೆದ ಚುನಾವಣೆಯಲ್ಲಿ ಹೋರಾಡಿದೆ. ಮುಂದಿನ ಚುನಾವಣೆಯಲ್ಲಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಮತ ಕೇಳಲು ಹೊರಟಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ದಾವೂದ್ ಇಬ್ರಾಹಿಂಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23 ರಂದು ಜಾರಿ ನಿರ್ದೇಶನಾಲಯ (ಇಡಿ) ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು. 62 ವರ್ಷದ ನವಾಬ್ ಮಲಿಕ್ ಅವರು ಗೊಂಡಿಯಾ ಮತ್ತು ಪರ್ಭಾನಿ ಜಿಲ್ಲೆಗಳ ರಕ್ಷಕ ಸಚಿವರಾಗಿ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಹೊಂದಿದ್ದರು. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಏಪ್ರಿಲ್ 4 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ; ಮಧ್ಯ ಪ್ರವೇಶಿಸಲು ಪ್ರಧಾನಿ ಮೋದಿಗೆ ಸಿಎಂ ಉದ್ಧವ್ ಠಾಕ್ರೆ ಒತ್ತಾಯ
ಸಿಎಂ ಉದ್ಧವ್ ಠಾಕ್ರೆ ಮಾವನ ಮೇಲೆ ಇಡಿ ದಾಳಿ, ಆಸ್ತಿ ಸೀಜ್; ಬಿಜೆಪಿಯಿಂದ ಸೇಡಿನ ರಾಜಕಾರಣ ಎಂದ ಶಿವಸೇನೆ
Published On - 8:14 pm, Fri, 25 March 22