ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ ಬಂದು 14 ದಿನ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕ

ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ 14 ದಿನಗಳ ಕಾಲ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕನನ್ನು ಬಂಧಿಸಲಾಗಿದೆ. ಭಾರಿ ಭದ್ರತಾ ಲೋಪವಾಗಿದ್ದು ಐಐಟಿ ಬಾಂಬೆ ವಿರುದ್ಧ ಪ್ರಶ್ನೆಗಳ ಸುರಿಮಳೆಯೇ ಬಂದಿದೆ. ಯುವಕನ ಹೆಸರು ಬಿಲಾಲ್ ಅಹ್ಮದ್ ಫಯಾಜ್ ಅಹ್ಮದ್ ತೇಲಿ ಎಂದು ಗುರುತಿಸಲಾಗಿದೆ. ಜೂನ್ 17 ರಂದು ಕ್ಯಾಂಪಸ್ ಭದ್ರತಾ ತಂಡವು ಆತನನ್ನು ಹಿಡಿದು ಪೊವೈ ಪೊಲೀಸರಿಗೆ ಹಸ್ತಾಂತರಿಸಿದೆ.

ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ ಬಂದು 14 ದಿನ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕ
ಐಐಟಿ ಬಾಂಬೆ

Updated on: Jun 25, 2025 | 12:45 PM

ಮುಂಬೈ, ಜೂನ್ 25: ಐಐಟಿ ಬಾಂಬೆ(IIT Bombay)ಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ 14 ದಿನಗಳ ಕಾಲ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕನನ್ನು ಬಂಧಿಸಲಾಗಿದೆ. ಭಾರಿ ಭದ್ರತಾ ಲೋಪ ಇದಾಗಿದ್ದು  ಪ್ರಶ್ನೆಗಳ ಸುರಿಮಳೆಯೇ ಬಂದಿದೆ. ಯುವಕನ ಹೆಸರು ಬಿಲಾಲ್ ಅಹ್ಮದ್ ಫಯಾಜ್ ಅಹ್ಮದ್ ತೇಲಿ. ಜೂನ್ 17 ರಂದು ಕ್ಯಾಂಪಸ್ ಭದ್ರತಾ ತಂಡವು ಆತನನ್ನು ಹಿಡಿದು ಪೊವೈ ಪೊಲೀಸರಿಗೆ ಹಸ್ತಾಂತರಿಸಿದೆ.

ಭದ್ರತೆಯನ್ನು ತಪ್ಪಿಸಿ ಕ್ಯಾಂಪಸ್‌ಗೆ ಹೇಗೆ ಪ್ರವೇಶಿಸಿದ್ದ ಮತ್ತು ರಾತ್ರಿ ಎಲ್ಲಿ ಕಳೆದಿದ್ದ ಎಂಬುದರ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ. ಈ ಯುವಕ ಯಾವುದೋ ದೊಡ್ಡ ಪಿತೂರಿ ಮಾಡಲು ಇಲ್ಲಿಗೆ ಬಂದಿರುವ ಅನುಮಾನವಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಐಟಿ ಬಾಂಬೆಯ ಭದ್ರತೆ ಮತ್ತು ಜಾಗೃತ ಇಲಾಖೆ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ರಾಹುಲ್ ದತ್ತಾರಾಮ್ ಪಾಟೀಲ್ ಸಂಸ್ಥೆಯ ಉದ್ಯೋಗಿಯಾಗಿದ್ದು ಅವರೇ ದೂರು ದಾಖಲಿಸಿದ್ದಾರೆ.

ಜೂನ್ 4 ರಂದು CREST ವಿಭಾಗದ ಅಧಿಕಾರಿ ಶಿಲ್ಪಾ ಕೋಟಿಕ್ಕಲ್ ಅವರು ಅನುಮಾನಾಸ್ಪದ ಯುವಕನೊಬ್ಬ ತಮ್ಮ ಕಚೇರಿಗೆ ಪ್ರವೇಶಿಸುವುದನ್ನು ಕಂಡರು, ಕೂಡಲೇ ಹೋಗಿ ಪ್ರಶ್ನಿಸಿದಾಗ ಮತ್ತು ಆತನ ಗುರುತಿನ ಚೀಟಿ ಕೇಳಿದಾಗ, ಅಲ್ಲಿಂದ ಪರಾರಿಯಾಗಿದ್ದ.

ಮತ್ತಷ್ಟು ಓದಿ: QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್

ನಂತರ ಸಿಸಿಟಿವಿ ಫೂಟೇಜ್ ಮೂಲಕ ಶಂಕಿತ ಮುಖವನ್ನು ಗುರುತಿಸಿ ಐಐಟಿಯ ಭದ್ರತಾ ತಂಡ ಕೂಡಲೇ ಪ್ರಿಂಟ್ ಔಟ್ ಹಿಡಿದು ಕ್ಯಾಂಪಸ್ ಪೂರ್ತಿ ಹುಡುಕಾಡಿತ್ತು. ಜೂನ್ 17ರಂದು ಸಂಜೆ 4 ಗಂಟೆ ಸುಮಾರಿಗೆ ಕೋಟಿಕ್ಕಲ್ ಮತ್ತೆ ಆ ಯುವಕನನ್ನು ನೋಡಿದ್ದಾರೆ. ಭದ್ರತಾ ಸಿಬ್ಬಂದಿಗಳಾದ ಕಿಶೋರ್ ಕುಂಭಾರ್ ಮತ್ತು ಶ್ಯಾಮ್ ಘೋಡ್ವಿಂದೆ ಕೂಡಲೇ ಆತನನ್ನು ಬಂಧಿಸಿದ್ದಾರೆ.

ಆರೋಪಿ ವಿಚಾರಣೆ ಸಮಯದಲ್ಲಿ ಹೇಳಿದ್ದೇನು?
ಬಿಲಾಲ್ ತೇಲಿ ಜೂನ್ 2 ರಿಂದ ಜೂನ್ 7 ರವರೆಗೆ ಮತ್ತು ಜೂನ್ 10 ರಿಂದ ಜೂನ್ 17 ರವರೆಗೆ ಹಲವು ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಸುಮಾರು 13,000 ವಿದ್ಯಾರ್ಥಿಗಳು (ಯುಜಿ, ಪಿಜಿ ಮತ್ತು ಪಿಎಚ್‌ಡಿ) ವಾಸಿಸುತ್ತಿದ್ದಾರೆ.

ಪೊವೈ ಪೊಲೀಸರು ಆರೋಪಿಯನ್ನು ಐಐಟಿ ಪೊವೈ ಕ್ಯಾಂಪಸ್‌ನಿಂದ ಬಂಧಿಸಿದ್ದಾರೆ. ಹೊರಗಿನವರು ಎರಡು ವಾರಗಳ ಕಾಲ ಕ್ಯಾಂಪಸ್‌ನಲ್ಲಿ ಹೇಗೆ ಉಳಿಯಬಹುದು ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 329(3) ಮತ್ತು 329(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪೊಲೀಸ್ ವಶದಲ್ಲಿದ್ದಾನೆ. ಬಿಲಾಲ್ ಬಂದ ಹಿಂದಿನ ಉದ್ದೇಶವೇನು, ಆತ ಯಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

​​

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ