ಚುನಾವಣೆಗಳಲ್ಲಿ ಕೊಡುವ ಬೇಕಾಬಿಟ್ಟಿ ಭರವಸೆಗಳಿಂದ ಆರ್ಥಿಕ ಅನಾಹುತ: ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ
ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಸರ್ಕಾರಗಳು ಅಭಿವೃದ್ಧಿಗಾಗಿ ಬಳಸುತ್ತಿಲ್ಲ ಎಂದು ಬಹುತೇಕರು ಭಾವಿಸುತ್ತಿದ್ದಾರೆ. ಉಚಿತ ಕೊಡುಗೆಗಳ ಭರವಸೆಯಿಂದ ಎಲ್ಲ ರಾಜಕೀಯ ಪಕ್ಷಗಳು ಅನುಕೂಲ ಪಡೆದುಕೊಳ್ಳುತ್ತಿವೆ ಎಂದು ಸುಪ್ರೀಂಕೋರ್ಟ್ ಹೇಳಿತು.
ದೆಹಲಿ: ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳ ಭರವಸೆಯಿಂದ ಆರ್ಥಿಕತೆಗೆ ಹಾನಿಯಾಗುತ್ತಿದೆ. ಇದು ದೇಶದ ಹಿತಕ್ಕೂ ಪ್ರತಿಕೂಲ ಪರಿಣಾಮ ಉಂಟು ಮಾಡುವುದಲ್ಲದೆ, ಇದು ಆರ್ಥಿಕ ವಿಪತ್ತಿಗೆ ಕಾರಣವಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗ ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯ ತಿಳಿಸಿದೆ. ಉಚಿತವಾಗಿ ಸೌಲಭ್ಯ ಕೊಡುವ ಯೋಜನೆಗಳಿಗೆ ಕಡಿವಾಣ ಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿದೆ.
‘ಜನಪ್ರಿಯತೆಯನ್ನು ಗಮನದಲ್ಲಿರಿಸಿಕೊಂಡು ನೀಡುವ ಇಂಥ ಭರವಸೆಗಳು ಮತದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಹೀಗೆಯೇ ಮುಂದುವರಿದರೆ ನಾವು ಆರ್ಥಿಕ ಅನಾಹುತದತ್ತ ಹೆಜ್ಜೆ ಹಾಕುತ್ತೇವೆ. ಚುನಾವಣಾ ಆಯೋಗವು ವಿವೇಚನೆ ಬಳಸಬೇಕು. ಆರ್ಥಿಕ ಅನಾಹುತ ತಡೆಯಲು ಏನು ಮಾಡಬಹುದು ಎನ್ನುವ ಬಗ್ಗೆ ನಾವು ಸಲಹೆ ಕೊಡಬಲ್ಲೆವು’ ಎಂದು ಅವರು ತುಷಾರ್ ಮೆಹ್ತಾ ಹೇಳಿದರು.
ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿದ್ದ ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಂಡಿತು. ಕೇಂದ್ರ ಸರ್ಕಾರದ ಪರವಾಗಿ ಮಂಡಿಸಿದ ಮೆಹ್ತಾ, ‘ಅರ್ಜಿದಾರರ ವಾದವನ್ನು ನಾನು ಒಪ್ಪುತ್ತೇನೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬಲ ಜೇಬಿನಿಂದ ಏನಾದರೂ ತೆಗೆದುಕೊಡುವಂತೆ ಯೋಚಿಸುತ್ತವೆ. ಆದರೆ ನಂತರದ ದಿನಗಳಲ್ಲಿ ಅದನ್ನು ಸರಿತೂಗಿಸಲು ಎಡ ಜೇಬಿಗೂ ಕೈ ಇಡಬೇಕಾಗುತ್ತದೆ’ ಎಂದರು.
ಮುಖ್ಯ ನ್ಯಾಯಮೂರ್ತಿ ರಮಣ ಅವರು ಸಹ ತುಷಾರ್ ಮೆಹ್ತಾ ಅವರ ವಾದಕ್ಕೆ ಸಹಮತ ಸೂಚಿಸಿದರು. ‘ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಸರ್ಕಾರಗಳು ಅಭಿವೃದ್ಧಿಗಾಗಿ ಬಳಸುತ್ತಿಲ್ಲ ಎಂದು ಬಹುತೇಕರು ಭಾವಿಸುತ್ತಿದ್ದಾರೆ. ಉಚಿತ ಕೊಡುಗೆಗಳ ಭರವಸೆಯಿಂದ ಎಲ್ಲ ರಾಜಕೀಯ ಪಕ್ಷಗಳು ಅನುಕೂಲ ಪಡೆದುಕೊಳ್ಳುತ್ತಿವೆ. ನಾನು ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸಲು ಇಚ್ಛಿಸುವುದಿಲ್ಲ’ ಎಂದು ಹೇಳಿದರು.
‘ಈ ಸಂಬಂಧ ಚರ್ಚಿಸಲು ಒಂದು ನಿಷ್ಪಕ್ಷಪಾತ ವೇದಿಕೆ ಬೇಕಿದೆ. ಅದು ನ್ಯಾಯಾಲಯ ಆಗಬೇಕಿಲ್ಲ. ಸರ್ಕಾರವು ಸುಪ್ರೀಂಕೋರ್ಟ್ಗೆ ಯಾವುದೇ ಸಲಹೆ ನೀಡುವ ಮೊದಲು ಪ್ರತಿಪಕ್ಷಗಳು, ಭಾರತೀಯ ರಿಸರ್ವ್ ಬ್ಯಾಂಕ್, ನೀತಿ ಆಯೋಗ, ಹಣಕಾಸು ಆಯೋಗ, ಕಾನೂನು ಆಯೋಗ ಮತ್ತು ಚುನಾವಣಾ ಆಯೋಗಗಳ ಅಭಿಪ್ರಾಯವನ್ನು ಸಂಗ್ರಹಿಸಬೇಕು’ ಎಂದು ಸುಪ್ರೀಂಕೋರ್ಟ್ ಸಲಹೆ ಮಾಡಿತು.
ಹಿರಿಯ ವಕೀಲ ಕಬಿಲ್ ಸಿಬಲ್ ಅವರು ಈ ಸಂಬಂಧ ಸಲಹೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಕೋರಿತು. ಉಚಿತ ಕೊಡುಗೆಗಳಿಂದ ಆರ್ಥಿಕತೆಯ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಪರಿಶೀಲಿಸಲು ನ್ಯಾಯಾಲಯವು ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಲಿದೆ ಎಂದು ಸಿಜೆಐ ರಮಣ ಹೇಳಿದರು.