ಕಟ್ನಿ, ಆ.17 : ಮಹಿಳಾ ಪೊಲೀಸ್ ಅಧಿಕಾರಿಗಳು ಮಹಿಳೆಯೊಬ್ಬರ ಜುಟ್ಟು ಹಿಡಿದು ಎಳೆದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೈನಾ ಬಾಯಿ ಕಾಚಿ ಎಂಬ ಮಹಿಳೆ ಕಟ್ನಿ ಜಿಲ್ಲೆಯ ಕೌರಿಯಾ ಗ್ರಾಮದಲ್ಲಿ ತನ್ನ ಜಮೀನಿನಲ್ಲಿ ವಿದ್ಯುತ್ ಟವರ್ನ್ನು ಅಳವಡಿಸಿದಕ್ಕಾಗಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕಾರಣಕ್ಕೆ ಆಕೆಗೆ ಥಳಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಘಟನೆ ನಡೆದಾಗ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಈ ಕೃತ್ಯವನ್ನು ತಡೆಯಲಿಲ್ಲ ಎಂದು ಹೇಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಥಳಿಸಿರುವುದನ್ನು ಅಲ್ಲಗಳೆದಿದ್ದು, ಪೊಲೀಸರು ನಿಯಮಾನುಸಾರ ನಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ಹಳೆಯ ವಿಡಿಯೋ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಚೈನಾ ಬಾಯಿ ಕಾಚಿ ಅವರು ತಮ್ಮ ಜಮೀನಿನಲ್ಲಿ ವಿದ್ಯುತ್ ಟವರ್ ಅಳವಡಿಸಿದ್ದಕ್ಕಾಗಿ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ತಮ್ಮ ಜಾಗಕ್ಕೆ ಬಂದ ಬುಲ್ಡೋಜರ್ನ್ನು ಚೈನಾ ಬಾಯಿ ಮತ್ತು ಆಕೆಯ ಸಂಬಂಧಿಕರು ತಡೆಯಲು ಪ್ರಯತ್ನಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಆಕೆಯನ್ನು ಥಳಿಸಿ, ಆಕೆ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಚೈನಾ ಬಾಯಿ ಮತ್ತು ಆಕೆಯ ಪರ ವಕೀಲರು ಪೊಲೀಸರ ಈ ಕ್ರಮದ ವಿರುದ್ಧ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕಚೇರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಟವರ್ ಅಳವಡಿಕೆಗೆ ಸಂಬಂಧಿಸಿದಂತೆ ನಿಯಮಾನುಸಾರವಾಗಿ ಯಾವುದೇ ಪರಿಹಾರ ನೀಡಿಲ್ಲ. ಗುತ್ತಿಗೆದಾರರು ವಿದ್ಯುತ್ ಕಂಪನಿ, ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತನ್ನ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಕಂದಾಯ ಇಲಾಖೆ ಸಿಬ್ಬಂದಿ, ಸಾಕ್ಷ್ಯ ನಾಶ ಮಾಡಲು ಹಣವನ್ನೇ ನುಂಗಿದ!
ಚೈನಾ ಬಾಯಿ ಪರ ವಕೀಲರು ತಿಳಿಸಿರುವಂತೆ ಆಕೆಯ ವಿರುದ್ಧದ ಕ್ರಮವನ್ನು ಖಂಡಿಸಿದ್ದು, ಯಾರೂ ಅವಳ ದೂರನ್ನು ಕೇಳುತ್ತಿಲ್ಲ ಎಂದು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದೇವೆ ಎಂದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಕೆಡಿಯಾ, ಮಹಿಳೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು ಮತ್ತು ವಿದ್ಯುತ್ ಟವರ್ ಅಳವಡಿಸುವ ಕೆಲಸಕ್ಕೆ ತೊಂದರೆ ಮಾಡುತ್ತಿದ್ದರು. ಹೀಗಾಗಿ ಆಕೆಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ಮಹಿಳೆಗೆ ಥಳಿಸಿದ್ದಾರೆ ಎಂಬುದನ್ನು ಅಧಿಕಾರಿ ನಿರಾಕರಿಸಿದ್ದು, ಮಹಿಳಾ ಪೊಲೀಸರು ನಿಯಮಗಳ ಪ್ರಕಾರವೇ ಕಾರ್ಯನಿರ್ವಹಿಸಿದ್ದರೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Thu, 17 August 23