ಸಂಸತ್ ಕಟ್ಟಡ ಉದ್ಘಾಟನೆ: ರಾಜಕೀಯ ಮಾಡದೇ ಸಮಾರಂಭಕ್ಕೆ ಬನ್ನಿ -ವಿಪಕ್ಷಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯ ಸಭಾನಾಯಕರು. ಇದರಲ್ಲಿ ರಾಷ್ಟ್ರಪತಿಗಳನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ಅನಗತ್ಯ ವಿಚಾರ ಮುಂದಿಟ್ಟು ಸಮಾರಂಭ ಬಹಿಷ್ಕಾರ ಮಾಡುತ್ತೇವೆ ಎನ್ನುತ್ತಿರುವುದರಲ್ಲಿ ಅರ್ಥವಿಲ್ಲ -ಪ್ರಲ್ಹಾದ್ ಜೋಶಿ
ನವದೆಹಲಿ: ನೂತನ ಸಂಸತ್ ಕಟ್ಟಡ (New Parliament Building) ಉದ್ಘಾಟನೆಯ ಸಮಾರಂಭಕ್ಕೆ (Inauguration) ಆಗಮಿಸುವಂತೆ ವಿರೋಧ ಪಕ್ಷಗಳ ಮುಖಂಡರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮನವಿ ಮಾಡಿದ್ದಾರೆ. ನೂತನ ಸಂಸತ್ ಕಟ್ಟಡ ಉದ್ಘಾಟನೆಯು ಐತಿಹಾಸಿಕ ಸಂಧರ್ಭ ಎಂದ ಅವರು, ಇಂತಹ ವಿಶೇಷ ಸಮಯಕ್ಕೆ ಸಾಕ್ಷಿಯಾಗದೇ ಉಳಿಯುವ ವಿರೋಧ ಪಕ್ಷಗಳ ಮುಖಂಡರ ನಿಲುವು ಸರಿಯಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ಸಂಸತ್ ಕಟ್ಟಡ ಉದ್ಘಾಟನೆಯಂತಹ ವಿಶೇಷ ಗಳಿಗೆಯಲ್ಲೂ ವಿರೋಧ ಪಕ್ಷಗಳು ರಾಜಕಾರಣ (Politicisation) ತರುವುದು ಸರಿಯಲ್ಲ. ಸಂಸತ್ ಕಟ್ಟಡದ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರೇ ಆಹ್ವಾನಿಸಿದ್ದಾರೆ.
ಲೋಕಸಭೆಯ ಸಭಾಧ್ಯಕ್ಷರನ್ನು ಕಸ್ಟೋಡಿಯನ್ ಆಫ್ ದಿ ಪಾರ್ಲಿಮೆಂಟ್ ಎಂದು ಕರೆಯಲಾಗುತ್ತೆ. ಹೀಗಿರುವಾಗ ಸ್ವತಃ ಸಭಾಧ್ಯಕ್ಷರೇ ಪ್ರಧಾನ ಮಂತ್ರಿ ಅವರಿಗೆ ಉದ್ಘಾಟನೆಗೆ ಆಹ್ವಾನಿಸಿರುವದರಲ್ಲಿ ತಪ್ಪೇನಿದೆ..? ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯ ಸಭಾನಾಯಕರು. ಇದರಲ್ಲಿ ರಾಷ್ಟ್ರಪತಿಗಳನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ಅನಗತ್ಯ ವಿಚಾರ ಮುಂದಿಟ್ಟು ಸಮಾರಂಭ ಬಹಿಷ್ಕಾರ ಮಾಡುತ್ತೇವೆ ಎನ್ನುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.
ರಾಜಕೀಯ ಮಾಡಲು ಸಾಕಷ್ಟು ವಿಚಾರಗಳಿವೆ. ಇಂತಹ ಐತಿಹಾಸಿಕ ಸಮಾರಂಭದ ವಿಚಾರದಲ್ಲಿ ರಾಜಕೀಯ ಮಾಡದೇ ವಿಪಕ್ಷ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುವುದು ಸೂಕ್ತ. ಈ ನಿಟ್ಟಿನಲ್ಲಿ ವಿಪಕ್ಷಗಳ ನಾಯಕರು ಇನ್ನೊಮ್ಮೆ ಯೋಚಿಸಿ ತಮ್ಮ ನಿಲುವನ್ನು ಬದಲಿಸಿಕೊಳ್ಳಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.
ಭಾರತದ ಶಾಸಕಾಂಗ ಸಂಪೂರ್ಣ ಡಿಜಿಟಲಿಕರಣದತ್ತ ಸಾಗುತ್ತಿದೆ:
ಇನ್ನು, NeVA ರಾಷ್ಟ್ರೀಯ ಇ- ವಿಧಾನ್ ಅಪ್ಲಿಕೇಶನ್ ನ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಇ ವಿಧಾನ್ ಯೋಜನೆ ಪ್ರಜಾಪ್ರಭುತ್ವವನ್ನು ಜನರ ಮನೆ ಮನೆಗೆ ತಲುಪಿಸುವ ಮೂಲಕ ಪ್ರಜೆಗಳೇ ರಾಜರು ಎಂಬ ಈ ವ್ಯವಸ್ಥೆಯ ಮೂಲ ಆಶಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
ಒಂದು ದೇಶ – ಒಂದು ಅಪ್ಲಿಕೇಶನ್ (ಒನ್ ನೇಶನ್ – ಒನ್ ಅಪ್ಲಿಕೇಶನ್) ಎಂಬ ಉದ್ದೇಶದಿಂದ ತಯಾರಿಸಿರುವ ರಾಷ್ಟ್ರೀಯ ಇ- ವಿಧಾನ್ ತಂತ್ರಾಂಶ ಸಂಸತ್ತಿನ ಅನೇಕ ಪ್ರಕ್ರಿಯೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ರೂಪಾಂತರಿಸಿ, ಇ-ಕಚೇರಿಯ ಮೂಲಕ ಆಡಳಿತಕ್ಕೆ ಹೊಸ ವೇಗ ನೀಡಲಿದೆ.
ಈಗಾಗಲೇ ದೇಶದ 21 ರಾಜ್ಯಗಳು NeVA ಮೂಲಕ ಪೇಪರ್ ಲೆಸ್ ಶಾಸಕಾಂಗ ಕಾರ್ಯವಿಧಾನಗಳನ್ನ ನಡೆಸಲು ಮುಂದಾಗಿವೆ. 19 ರಾಜ್ಯಗಳು ಒಪ್ಪಂದಕ್ಕೆ ಸಹಿಹಾಕಿದ್ದು, ಈಗಾಗಲೇ 17 ರಾಜ್ಯಗಳಿಗೆ NeVA ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಅನುಮತಿ ನೀಡಲಾಗಿದೆ. NeVA ಯೋಜನೆ ಜಾರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಶಾಸಕಾಂಗಗಳಿಗೆ ಅಗತ್ಯ ಸಹಕಾರ ಹಾಗೂ ಮಾರ್ಗದರ್ಶನ ನೀಡಲು ಉತ್ಸುಕವಾಗಿದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.