ಕ್ಷೇತ್ರ ಮರುವಿಂಗಡಣೆ ಮಸೂದೆ ವಿರುದ್ಧ ಇಂಡಿಯಾ ಒಕ್ಕೂಟ ಮಹತ್ವದ ಸಭೆ: ಕಾರ್ಯತಂತ್ರ ರೂಪಿಸಲು ಸಿದ್ಧತೆ
ಎನ್ಡಿಎ ಸರ್ಕಾರ ರೂಪಿಸಿರುವ ಕ್ಷೇತ್ರ ಮರುವಿಂಗಡಣೆ ಮಸೂದೆ ವಿರುದ್ಧ ಕಾರ್ಯತಂತ್ರ ರೂಪಿಸಲು ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆಯನ್ನು ದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕರೆಯಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ನವದೆಹಲಿ, ನವೆಂಬರ್ 28: ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ವಿರೋಧಿಸುವ ಕುರಿತು ಕಾರ್ಯತಂತ್ರ ರೂಪಿಸಲು ಇಂಡಿಯಾ ಮೈತ್ರಿಕೂಟ ಮಹತ್ವದ ಸಭೆ ಕರೆದಿದೆ. ಈ ಸಭೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನವದೆಹಲಿ ನಿವಾಸದಲ್ಲಿ ನಡೆಯಲಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಒಕ್ಕೂಟದ ಪ್ರಮುಖ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ.
ಇತ್ತೀಚಿನ ಬೆಳವಣಿಗೆಗಳಲ್ಲಿ, ಡಿಎಂಕೆ, ಅಕಾಲಿ ದಳದಂತಹ ಪಕ್ಷಗಳು ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡಿವೆ. ಡಿಎಂಕೆ ಕಾಂಗ್ರೆಸ್‌ನ ಹಿಂದಿನ ಚುನಾವಣಾ ನಡೆಗಳ ಬಗ್ಗೆ ಅಸಮಾಧಾನಗೊಂಡಿದ್ದರೆ, ಅಕಾಲಿ ದಳ ಸಂಪೂರ್ಣವಾಗಿ ಹೊರಗುಳಿದಿದೆ. ಎನ್‌ಸಿಪಿ ಮತ್ತು ಟಿಎಂಸಿಯ ಕೆಲವು ಬಣಗಳೂ ಸಹ ಒಕ್ಕೂಟದಿಂದ ದೂರವಾಗಿವೆ. ಇದು ಇಂಡಿಯಾ ಮೈತ್ರಿಕೂಟದ ಬಲವನ್ನು ಕುಗ್ಗಿಸಿದೆ. ಹೀಗಾಗಿ ಇಂಡಿಯಾ ಮೈತ್ರಿಕೂಟದ ಈ ಸಭೆ ಮಹತ್ವ ಪಡೆದಿದೆ.
ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಹೆಚ್ಚಿಸುವ ಕೇಂದ್ರ ಸರ್ಕಾರದ ಈ ಹಿಂದಿನ ಪ್ರಯತ್ನಕ್ಕೆ ವಿರುದ್ಧವಾಗಿ, ಈಗ ಶೇಕಡಾ 50 ರಷ್ಟು ಹೆಚ್ಚಳದ ಮಾನದಂಡವನ್ನು ಅನುಸರಿಸಲಾಗುತ್ತಿದೆ. ಉದಾಹರಣೆಗೆ, 30 ಕ್ಷೇತ್ರಗಳ ರಾಜ್ಯಕ್ಕೆ 15 ಕ್ಷೇತ್ರಗಳನ್ನು ಸೇರಿಸುವುದು. ಈ ಹೊಸ ಮಾನದಂಡವು ಕೆಲವು ಮೈತ್ರಿ ಪಕ್ಷಗಳಿಗೆ ಸಮಾಧಾನ ತಂದಿದ್ದರೂ, ಕಾಂಗ್ರೆಸ್‌ಗೆ ತಲೆಬಿಸಿ ತಂದಿದೆ. ಈ ಮಸೂದೆಯನ್ನು ವಿಫಲಗೊಳಿಸಲು ಮತ್ತು ವಿರೋಧಿಸಲು ಮೈತ್ರಿಕೂಟವು ತಂತ್ರಗಳನ್ನು ಹೆಣೆಯಲು ಮುಂದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
