India China Border Conflict: 16 ಗಂಟೆಗಳ ಕಾಲ ನಡೆದ ಭಾರತ-ಚೀನಾ ಸೇನಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ

|

Updated on: Feb 21, 2021 | 12:42 PM

India China Border Conflict: ಪಾಂಗಾಂಗ್ ತ್ಸೋ ಸರೋವರದ ಆಸುಪಾಸಿನಲ್ಲಿ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಕೈಗೊಂಡ 10ನೇ ಸುತ್ತಿನ ಮಾತುಕತೆ ನಿನ್ನೆ ರಾತ್ರಿ 2 ಗಂಟೆಯ ಹೊತ್ತಿಗೆ ಮುಕ್ತಾಯಗೊಂಡಿದೆ ಎಂದು ಮೂಲಗಳು ತಿಳಿಸಿವೆ.

India China Border Conflict: 16 ಗಂಟೆಗಳ ಕಾಲ ನಡೆದ ಭಾರತ-ಚೀನಾ ಸೇನಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ
ಪಾಂಗಾಂಗ್ ಸರೋವರದಿಂದ ಯುದ್ಧಟ್ಯಾಂಕ್​ಗಳನ್ನು ಹಿಂಪಡೆಯುವ ಒಪ್ಪಂದದ ನಂತರ ಕೈಕುಲುಕುತ್ತಿರುವ ಭಾರತ-ಚೀನಾ ಸೈನಿಕರು
Follow us on

ದೆಹಲಿ: ಭಾರೀ ಮಹತ್ವ ಪಡೆದಿದ್ದ ಭಾರತ ಮತ್ತು ಚೀನಾ ಸೇನೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ 16 ಗಂಟೆಗಳ ನಂತರ ಮುಕ್ತಾಯವಾಗಿದೆ. ಎರಡೂ ದೇಶಗಳ ನಡುವಿನ ಕಮಾಂಡರ್​ಗಳ ಮಟ್ಟದ ಮಾತುಕತೆಯ ಭಾರತ ಮತ್ತು ಚೀನಾದ ವಾಸ್ತವ ಗಡಿರೇಖೆಯ LAC (Line of Actual Control) ಚೀನಾದ ಭಾಗದಲ್ಲಿರುವ ಮೋಲ್ಡೋದಲ್ಲಿ ಬೆಳಗ್ಗೆ 10 ಗಂಟೆಯಿಂದಲೇ ಆರಂಭವಾಗಿತ್ತು. ಉಭಯ ದೇಶಗಳ ಸೇನೆ ಹಿಂತೆಗೆತದ ಬಗ್ಗೆ ಮಹತ್ವದ ಚರ್ಚೆ ನಡೆಸಿದ ನಂತರ
ಗೋಗ್ರಾ, ಹಾಟ್ ಸ್ಪ್ರಿಂಗ್ಸ್, ದೀಪ್ಸಂಗ್​​ನಲ್ಲಿ ಸೇನೆ ಹಿಂತೆಗೆತದ ಬಗ್ಗೆ ಚರ್ಚೆ ನಡೆಸಲಾಗಿದೆ. ಇದು ಪಾಂಗಾಂಗ್ ತ್ಸೋ ಸರೋವರದ ಆಸುಪಾಸಿನಲ್ಲಿ ಉಂಟಾದ ಉದ್ವಿಗ್ನತೆಯನ್ನು ಶಮನಗೊಳಿಸಲು ಕೈಗೊಂಡ 10 ನೇ ಸುತ್ತಿನ ಮಾತುಕತೆಯಾಗಿದ್ದು, ರಾತ್ರಿ 2 ಗಂಟೆಯ ಹೊತ್ತಿಗೆ ಸಭೆ ಮುಕ್ತಾಯಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ 9 ಸುತ್ತಿನ ಮಾತುಕತೆ ನಡೆಸಿದ ಪ್ರತಿಫಲವಾಗಿ ಎರಡೂ ದೇಶಗಳು ತಮ್ಮ ​ಸೇನೆಗಳನ್ನು ವಿವಾದಿತ ಗಡಿರೇಖೆಯಿಂದ ಹಿಂಪಡೆಯುವುದಾಗಿ ನಿರ್ಣಯ ತಳೆದಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಘೋಷಿಸಿದ್ದರು. ಫೆಬ್ರವರಿ 10ರಿಂದಲೇ ಎರಡೂ ದೇಶಗಳು ಪಾಂಗಾಂಗ್ ತ್ಸೋ ಸರೋವರದ ಬಳಿಯಿಂದ ಯುದ್ಧಟ್ಯಾಂಕ್ ಮತ್ತು ಸೈನಿಕರನ್ನು ಹಿಂಪಡೆಯುವ ಕಾರ್ಯದಲ್ಲಿ ತೊಡಗಿದ್ದರು.

ಭಾರತದಿಂದ ಯಾರು  ಭಾಗವಹಿಸಿದ್ದರು?
ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಪಿ.ಕೆ.ಜಿ.ಮೆನನ್, ಚೀನಾದ ಮೇಜರ್ ಜನರಲ್ ಜೆನ್ ಲಿಯು ಲಿನ್ ಭಾಗವಹಿಸಿದ್ದರು. ಎರಡೂ ದೇಶಗಳ ನಡುವಿನ 10ನೇ ಸುತ್ತಿನ ಮಾತುಕತೆ ಭಾರೀ ಮಹತ್ವ ಪಡೆದಿತ್ತು.

2020ರ ಜೂನ್ 15ರಂದು ಎರಡೂ ದೇಶಗಳ ಸೈನಿಕರ ನಡುವೆ ನಡೆದ ಕಾದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಅನಂತರ ಪಾಂಗಾಂಗ್ ಸರೋವರದ ದಡಗಳಲ್ಲಿ ಭಾರತ-ಚೀನಾ ಎರಡೂ ದೇಶಗಳು ಯುದ್ಧಟ್ಯಾಂಕ್​ ಸೇರಿ ಸೈನಿಕರ ಜಮಾವಣೆ ಮಾಡಿದ್ದವು. ಹೀಗಾಗಿ ಪಾಂಗಾಂಗ್ ಸರೋವರದ ಸುತ್ತಮುತ್ತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.

ಒಪ್ಪಂದದ ಪ್ರಮುಖ ಅಂಶಗಳು

1). ಎರಡೂ ದೇಶಗಳು ಶಾಂತಿ ಕಾಪಾಡಲು ಸೇನೆಯನ್ನು ಹಿಂಪಡೆಯಬೇಕು.

2). ಎರಡೂ ದೇಶಗಳು ಪರಸ್ಪರ ಒಪ್ಪಂದಗಳನ್ನು ಗೌರವಿಸಬೇಕು.

3). ಒಪ್ಪಂದದ ಎಲ್ಲ ನಿಯಮಗಳನ್ನೂ ಎರಡೂ ದೇಶಗಳು ಚಾಚೂತಪ್ಪದೇ  ಪಾಲಿಸಬೇಕು.

ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಲು ಭಾರತ ಸಿದ್ಧವಾಗಿದೆ. ಈ ಮೂಲಕ ಶಾಂತಿ ಕಾಪಾಡಲು ಭಾರತ ಬದ್ಧವಾಗಿದೆ. ಗಡಿ ವಿವಾದವನ್ನ ಮಾತುಕತೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು. ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದರಿಂದ ಬಾಂಧವ್ಯ ವೃದ್ದಿಯಾಗಲಿದೆ ಎಂದು ಅವರು ಚೀನಾದ ಆಕ್ರಮಣಶೀಲ ನಡೆಗಳ ಕುರಿತು ದೇಶದ ನಿಲುವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆಯಷ್ಟೇ ರಾಜ್ಯಸಭೆಯಲ್ಲಿ ತಿಳಿಸಿದ್ದರು.

ಚೀನಾದ ಸೇನೆ ಫಿಂಗರ್ 8 ರವರೆಗೆ ಹಿಂದೆ ಸರಿದ ನಂತರ ಭಾರತದ ಸೇನೆ ಫಿಂಗರ್ 3ರ ಧನಸಿಂಗ್ ಪೋಸ್ಟ್​ಗೆ ಹಿಂದಿರುಗಲಿದೆ. ಪಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗದ ಫಿಂಗರ್ ವಲಯದಲ್ಲಿ ಭಾರತ-ಚೀನಾ ಪೆಟ್ರೋಲಿಂಗ್ ಸ್ಥಗಿತವಾಗಲಿದೆ. ಫಿಂಗರ್ 8ರ ವಿಷಯಗಳ ಬಗ್ಗೆ ಚೀನಾದ ಜೊತೆಗೆ ಮಾತುಕತೆ ಬಾಕಿ ಇದ್ದು, ಒಪ್ಪಂದದ ಪ್ರಕಾರ 48 ಗಂಟೆಯಲ್ಲಿ ಚೀನಾ ಸೇನೆ ಹಿಂತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ರಾಹುಲ್ ಗಾಂಧಿ

ನಮ್ಮ ಯೋಧರ ತ್ಯಾಗಕ್ಕೆ ಪ್ರಧಾನಿ ಮೋದಿ ದ್ರೋಹ ಬಗೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್  ರಾಜ್ಯಸಭೆಯಲ್ಲಿ ಪಾಂಗಾಂಗ್ ತ್ಸೋ (disengagement in Ladakh)  ಸರೋವರದಿಂದ ಎರಡೂ ದೇಶಗಳು ಸೈನ್ಯ ಮತ್ತು ಯುದ್ಧ ಟ್ಯಾಂಕ್​ಗಳನ್ನು ಹಿಂಪಡೆಯುವ (Ladakh standoff)) ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಭಾರತೀಯ ಸೇನೆ ಲಡಾಕ್​ನ ಫಿಂಗರ್​ 4 ಬಳಿ ಬೀಡುಬಿಡಬೇಕಿತ್ತು. ಆದರೆ,  ಕೇಂದ್ರ ರಕ್ಷಣಾ ಸಚಿವರ ಹೇಳಿಕೆಯ ಪ್ರಕಾರ ಫಿಂಗರ್ 4ರಿಂದ ಫಿಂಗರ್ 3 ಗೆ ಭಾರತೀಯ ಸೇನೆ ಮರಳಿದೆ. ಫಿಂಗರ್ 4ರ ಪ್ರದೇಶದಿಂದ ಸೇನೆಯನ್ನು ಹಿಂಪಡೆದದ್ದು ಚೀನಾಕ್ಕೆ ಆ ಪ್ರದೇಶವನ್ನು ಬಿಟ್ಟುಕೊಟ್ಟಂತಾಗಿದೆ.  ಇದು ಹುತಾತ್ಮ ಸೈನಿಕರಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪಚಾರ ಎಸಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಚೀನಾಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಆಗುತ್ತಿಲ್ಲ. ಫಿಂಗರ್ 4 ಪ್ರದೇಶವನ್ನು ಆಕ್ರಮಿಸಲು ಚೀನಾಕ್ಕೆ ಅವಕಾಶ ಮಾಡಿಕೊಟ್ಟಂತಾಗಿದ್ದು, ಈ ಬಗ್ಗೆ ಕೇಂದ್ರ ಉತ್ತರ ನೀಡಲಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು. ಆದರೆ ಭಾರತೀಯ ರಕ್ಷಣಾ ಇಲಾಖೆ ಈ ಆರೋಪವನ್ನು ಅಲ್ಲಗಳೆದು ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್​ಗಳು

‘ಪಾಂಗಾಂಗ್‌ ಸರೋವರದ ಕಣಿವೆಯ ಎತ್ತರ ಭಾಗ ನಮ್ಮದು’

Published On - 12:34 pm, Sun, 21 February 21