ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು ಸತ್ಯ. ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಲಿದೆ. ಮೇ 12 ರಂದು ಮತ್ತೆ ಮಾತುಕತೆ ನಡೆಯಲಿದೆ. ನಮಗೆ ಪಾಕಿಸ್ತಾನ ಕರೆ ಮಾಡಿತು. ಎರಡೂ ಕಡೆಯವರು ದಾಳಿ ನಿಲ್ಲಿಸಲು ಒಪ್ಪಿದ್ದೇವೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಸ್ಪಷ್ಟನೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ವಿರಾಮವನ್ನು ಘೋಷಿಸಿದ ಬೆನ್ನಲ್ಲೇ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ
Vikram Misri

Updated on: May 10, 2025 | 6:50 PM

ನವದೆಹಲಿ, ಮೇ 10: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಮಾತುಕತೆ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ (Vikram Misri) ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಎರಡೂ ದೇಶಗಳ ನಡುವೆ ನಡೆದ ಮಾತುಕತೆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಇಂದು ಮಧ್ಯಾಹ್ನ 3.35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದ್ದಾರೆ. ಭಾರತೀಯ ಸಮಯ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಮಿಶ್ರಿ ಖಚಿತಪಡಿಸಿದ್ದಾರೆ.

“ಪಾಕಿಸ್ತಾನದ ಡಿಜಿಎಂಒ ಇಂದು ಮಧ್ಯಾಹ್ನ 3:35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದರು. ಭಾರತೀಯ ಕಾಲಮಾನ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ನಿಯಮವನ್ನು ಜಾರಿಗೆ ತರಲು ಎರಡೂ ಕಡೆಯಿಂದಲೂ ಸೂಚನೆಗಳನ್ನು ನೀಡಲಾಗಿದೆ. ಎರಡೂ ದೇಶಗಳ ನಡುವೆ ಮೇ 12ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಮಾತುಕತೆ ನಡೆಸಯಲಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.


ಇದನ್ನೂ ಓದಿ: ಭಾರತ, ಪಾಕಿಸ್ತಾನ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದರಲ್ಲಿ ಅಮೆರಿಕದ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡ ಟ್ರಂಪ್, ಬಿಕ್ಕಟ್ಟನ್ನು ಶಮನಗೊಳಿಸಲು “ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ”ಯನ್ನು ಆಯ್ಕೆ ಮಾಡಿದ್ದಕ್ಕಾಗಿ ಎರಡೂ ದೇಶಗಳ ನಾಯಕರನ್ನು ಶ್ಲಾಘಿಸಿದರು.


ಈ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಟ್ವೀಟ್ ಮಾಡಿದ್ದು, “ಕಳೆದ 48 ಗಂಟೆಗಳಲ್ಲಿ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಮತ್ತು ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಮತ್ತು ಅಸಿಮ್ ಮಲಿಕ್ ಸೇರಿದಂತೆ ಹಿರಿಯ ಭಾರತೀಯ ಮತ್ತು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ತಟಸ್ಥ ಸ್ಥಳದಲ್ಲಿ ವ್ಯಾಪಕವಾದ ವಿಷಯಗಳ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಶಾಂತಿಯ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ಪ್ರಧಾನಿ ಮೋದಿ ಮತ್ತು ಷರೀಫ್ ಅವರ ಬುದ್ಧಿವಂತಿಕೆ, ವಿವೇಕ ಮತ್ತು ರಾಜತಾಂತ್ರಿಕತೆಯನ್ನು ನಾವು ಶ್ಲಾಘಿಸುತ್ತೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:23 pm, Sat, 10 May 25