ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿ: ಮೋದಿ ಸರ್ಕಾರದ ನೇರ ಮಿಲಿಟರಿ ಕ್ರಮಗಳು

ಪ್ರಧಾನಿ ಮೋದಿ ಪ್ರಕಾರ, ಕಳೆದ ದಶಕದಲ್ಲಿ ಭಾರತದ ಭಯೋತ್ಪಾದನಾ ನಿಗ್ರಹ ನೀತಿ ಕಠಿಣವಾಗಿದೆ. ರಾಜತಾಂತ್ರಿಕತೆಯಿಂದ ನೇರ ಮಿಲಿಟರಿ ಕ್ರಮಗಳಿಗೆ ಬದಲಾಗಿ, ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ವಾಯುದಾಳಿಗಳಂತಹ ಕಾರ್ಯಾಚರಣೆಗಳು ಉಗ್ರರ ದಾಳಿಗಳನ್ನು 70% ಕಡಿತಗೊಳಿಸಿವೆ. ಗಡಿಯಾಚೆಗಿನ ಉಗ್ರರಿಗೆ ಬೆಲೆ ತೆರುವಂತೆ ಮಾಡುವ ಹೊಸ 'ನಿರೋಧಕ' ತತ್ವವನ್ನು ಭಾರತ ಅಳವಡಿಸಿಕೊಂಡಿದೆ, ದಾಳಿ ನಿಯಮಗಳನ್ನು ತಾನೇ ನಿರ್ಧರಿಸುತ್ತದೆ.

ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿ: ಮೋದಿ ಸರ್ಕಾರದ ನೇರ ಮಿಲಿಟರಿ ಕ್ರಮಗಳು
ಪ್ರಧಾನಿ ಮೋದಿ
Image Credit source: Narendra Modi's X account

Updated on: Sep 30, 2026 | 7:26 PM

ನವದೆಹಲಿ, ಸೆಪ್ಟೆಂಬರ್ 30: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಕಳೆದ ಒಂದು ದಶಕದಲ್ಲಿ ರಾಜತಾಂತ್ರಿಕ ಹಾಗೂ ರಾಜಕೀಯ ಗಡಿಗಳನ್ನು ಮೀರಿ ಕಠಿಣ ಮತ್ತು ನೇರ ಮಿಲಿಟರಿ ಕ್ರಮಗಳ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ ಎಂಬುದು ಪ್ರಧಾನಿ ಮೋದಿ ಅವರ ಅನಿಸಿಕೆ. ಕಳೆದ ಸಂಚಿಕೆಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು, 2016ರ ಸೆಪ್ಟೆಂಬರ್ 28-29ರಂದು ನಡೆದ ಐತಿಹಾಸಿಕ ‘ಸರ್ಜಿಕಲ್ ಸ್ಟ್ರೈಕ್’ನ (Surgical Strike) 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇಶದ ಕಠಿಣ ನಿಲುವುಗಳನ್ನು ಸ್ಮರಿಸಿಕೊಂಡಿದ್ದಾರೆ.

ದಶಕದ ಬದಲಾವಣೆ ಮತ್ತು ಅಂಕಿಅಂಶಗಳು

2014ಕ್ಕೂ ಮೊದಲು ಭಯೋತ್ಪಾದನಾ ದಾಳಿಗಳಿಗೆ ಭಾರತದ ಪ್ರತಿಕ್ರಿಯೆ ಹೆಚ್ಚಾಗಿ ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ 2014ರ ಬಳಿಕ ಗಡಿಯಾಚೆಗಿನ ಉಗ್ರರ ವಿರುದ್ಧ ನೇರ ಮಿಲಿಟರಿ ಕ್ರಮ ಜರುಗಿಸುವ ಸ್ಪಷ್ಟ ಬದಲಾವಣೆ ಕಂಡುಬಂದಿದೆ. ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಮಾಹಿತಿಯ ಪ್ರಕಾರ, ಉಗ್ರರ ಸಂಘಟಿತ ಚಟುವಟಿಕೆಗಳಲ್ಲಿ ಭಾರಿ ಇಳಿಕೆಯಾಗಿದೆ:

  • ಉಗ್ರರ ದಾಳಿ ಪ್ರಕರಣಗಳು: 2004-2014ರ ಅವಧಿಯಲ್ಲಿ 7,217 ಉಗ್ರ ದಾಳಿ ಘಟನೆಗಳಿದ್ದುವು. 2014-2024ರ ಅವಧಿಗೆ ಇವುಗಳ ಸಂಖ್ಯೆ 2,242ಕ್ಕೆ ಇಳಿದಿದೆ.
  • ಸಾವುನೋವು: ಉಗ್ರ ದಾಳಿ ಘಟನೆಗಳಲ್ಲಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ. 70ರಷ್ಟು, ನಾಗರಿಕರ ಸಾವಿನಲ್ಲಿ ಶೇ. 81ರಷ್ಟು ಹಾಗೂ ಭದ್ರತಾ ಸಿಬ್ಬಂದಿ ಬಲಿದಾನದಲ್ಲಿ ಶೇ. 50ರಷ್ಟು ಇಳಿಕೆ ದಾಖಲಾಗಿದೆ.
  • ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದಲ್ಲಿ ನಾಗರಿಕರ ಸಾವುಗಳು 1,769ರಿಂದ 344ಕ್ಕೆ ಕುಸಿದಿದ್ದು, ಹಿಂಸಾಚಾರದ ಘಟನೆಗಳು 16,463ರಿಂದ 7,744ಕ್ಕೆ ತಗ್ಗಿದೆ.

ಇದನ್ನೂ ಓದಿ: ನಗರ ಸಮಸ್ಯೆಗಳ ಪರಿಹಾರ: ಕೌನ್ಸಿಲರ್, ವಾರ್ಡ್ ಸಮಿತಿ ಮತ್ತು ನಿಮ್ಮ ಜವಾಬ್ದಾರಿಗಳು

ಪ್ರಮುಖ ನಾಲ್ಕು ಮಿಲಿಟರಿ ಕಾರ್ಯಾಚರಣೆಗಳು

ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಸೇನೆಯು ಕಾಲಕಾಲಕ್ಕೆ ತಕ್ಕಂತೆ ಅತಿ ದೊಡ್ಡ ಕಾರ್ಯಾಚರಣೆಗಳನ್ನು ನಡೆಸಿ ಉಗ್ರರಿಗೆ ತಕ್ಕೇಟು ನೀಡಿದೆ:

  • ಮ್ಯಾನ್ಮಾರ್ ಕಾರ್ಯಾಚರಣೆ (2015): ಚಂದೇಲ್‌ನಲ್ಲಿ 18 ಯೋಧರ ಹುತಾತ್ಮತೆಯ ಬಳಿಕ, ಭಾರತೀಯ ವಿಶೇಷ ಪಡೆಗಳು ಜೂನ್ 9ರಂದು ಗಡಿ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದವು.
  • ಸರ್ಜಿಕಲ್ ಸ್ಟ್ರೈಕ್ (2016): ಉರಿ ದಾಳಿಗೆ ಪ್ರತಿಕಾರವಾಗಿ LOC (ಗಡಿ ನಿಯಂತ್ರಣ ರೇಖೆ) ದಾಟಿ ಉಗ್ರರ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಲಾಯಿತು.
  • ಬಾಲಕೋಟ್ ವಾಯುದಾಳಿ (2019): ಪುಲ್ವಾಮಾ ದಾಳಿಯ ನಂತರ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು.
  • ಆಪರೇಷನ್ ಸಿಂಧೂರ್ (2025): ಪಹಲ್ಗಾಮ್‌ನಲ್ಲಿ 26 ನಾಗರಿಕರು ಬಲಿಯಾದ ನಂತರ, ಮೇ 7ರಂದು ಪಾಕಿಸ್ತಾನ ಮತ್ತು ಪಿಒಕೆ (PoK) ಒಳಗೆ ಒಟ್ಟು 9 ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಯಿತು. ಪಾಕಿಸ್ತಾನದ ಮಿಲಿಟರಿ ಪ್ರತಿದಾಳಿಯ ಬಳಿಕ ಭಾರತವು ಅದರ 11 ಪ್ರಮುಖ ವಾಯುನೆಲೆಗಳನ್ನೂ ಗುರಿಯಾಗಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.

ಇದನ್ನೂ ಓದಿ: ಉದ್ಯೋಗದ ಹೆಸರಲ್ಲಿ ರಷ್ಯಾಕ್ಕೆ ಕರೆದೊಯ್ದು ಉಕ್ರೇನ್ ಯುದ್ಧಕ್ಕೆ ತಳ್ಳಿದ ಜಾಲ: ತೆಲಂಗಾಣದ ನಾಲ್ವರನ್ನು ರಕ್ಷಿಸಲು ಕುಟುಂಬಗಳ ಮೊರೆ

ಪ್ರಧಾನಿ ಮೋದಿಯವರ ಮೂರು ಹೊಸ ತತ್ವಗಳು

ಕಳೆದ ವರ್ಷದ (2025) ಮೇ 12 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ತತ್ವಗಳನ್ನು ಘೋಷಿಸಿದ್ದರು:

  1. ಭಾರತವು ತಾನು ಇಚ್ಛಿಸಿದ ಸಮಯದಲ್ಲಿ ಹಾಗೂ ಬೇಕಾದ ರೀತಿಯಲ್ಲಿ ಉಗ್ರರಿಗೆ ಪ್ರತಿಕಾರ ತೀರಿಸಿಕೊಳ್ಳುತ್ತದೆ.
  2. ಯಾವುದೇ ರೀತಿಯ ಪರಮಾಣು ಬೆದರಿಕೆಗೆ ಭಾರತ ತಲೆಬಾಗುವುದಿಲ್ಲ.
  3. ಉಗ್ರರಿಗೂ ಮತ್ತು ಅವರನ್ನು ಪೋಷಿಸುವ ರಾಷ್ಟ್ರಗಳಿಗೂ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ.

ಭಯೋತ್ಪಾದನೆಗೆ ಭಾರೀ ಬೆಲೆ (Direct Cost) ತೆರಬೇಕಾಗುವಂತೆ ಸರ್ಕಾರ ಮಾಡಿದೆ. ‘ದಾಳಿಗಳನ್ನು ಸಹಿಸಿಕೊಳ್ಳುವ’ ನೀತಿಯಿಂದ ‘ದಾಳಿಗೆ ಪ್ರತ್ಯುತ್ತರ ನೀಡಿ ನಿರೋಧಕ ಶಕ್ತಿ (Deterrence) ಸೃಷ್ಟಿಸುವ’ ಹಾದಿಗೆ ಭಾರತ ಬದಲಾಗಿದೆ ಎನ್ನುವ ಸಂದೇಶ ರವಾನೆಯಾಗಿದೆ. ಸಿಂಧೂ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವ ಮೂಲಕ ರಾಜತಾಂತ್ರಿಕ ಅಸ್ತ್ರವನ್ನೂ ಭಾರತ ಪ್ರಯೋಗಿಸಿದೆ. ದೇಶದ ಈ ಗಟ್ಟಿ ನಿಲುವು ಗಡಿಯಾಚೆಗಿನ ಉಗ್ರವಾದಕ್ಕೆ ತಕ್ಕ ಉತ್ತರವಾಗಿದ್ದು, ಇನ್ನು ಮುಂದೆ ಭಾರತವೇ ದಾಳಿಯ ನಿಯಮಗಳನ್ನು ನಿರ್ಧರಿಸಲಿದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us