ದೆಹಲಿ: ನೂತನವಾಗಿ ಆಯ್ಕೆಯಾಗಿರುವ ಪಾಕಿಸ್ತಾನದ (Pakistan) ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದಿಸಿದ್ದಾರೆ. ಷರೀಫ್ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ ಅವರು “ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ” ಎಂಬ ಸಂದೇಶವನ್ನು ನೀಡಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಶಹಬಾಜ್ ಷರೀಫ್ ಅವರು 174 ಮತಗಳನ್ನು ಗಳಿಸಿದ ನಂತರ ನ್ಯಾಷನಲ್ ಅಸೆಂಬ್ಲಿಯಿಂದ ಪಾಕಿಸ್ತಾನದ 23 ನೇ ಪ್ರಧಾನಿಯಾಗಿ ಆಯ್ಕೆಯಾದರು. ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಎಚ್.ಇ. ಮಿಯಾನ್ ಮುಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಆಡಳಿತದ ವಿರುದ್ಧ ಅವಿಶ್ವಾಸ ನಿರ್ಣಯದ ನಂತರ ಅಧಿಕಾರದಿಂದ ಹೊರಹಾಕಿದ ನಂತರ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.
Congratulations to H. E. Mian Muhammad Shehbaz Sharif on his election as the Prime Minister of Pakistan. India desires peace and stability in a region free of terror, so that we can focus on our development challenges and ensure the well-being and prosperity of our people.
— Narendra Modi (@narendramodi) April 11, 2022
ಅಸೆಂಬ್ಲಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಷರೀಫ್ ಅವರು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಾರೆ ಆದರೆ ದಶಕಗಳಷ್ಟು ಹಳೆಯದಾದ ಕಾಶ್ಮೀರ ವಿವಾದವನ್ನು ಪರಿಹರಿಸದೆ ಅದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ ಆದರೆ ಕಾಶ್ಮೀರ ಸಮಸ್ಯೆಗೆ ಪರಿಹಾರವಿಲ್ಲದೆ ಬಾಳಿಕೆ ಬರುವ ಶಾಂತಿ ಸಾಧ್ಯವಿಲ್ಲ” ಎಂದು ಶೆಹಬಾಜ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಈ ಹಿಂದೆ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿದ್ದ ಇಮ್ರಾನ್ ಖಾನ್ ಅವರ “ಸರ್ಕಾರವನ್ನು ಹೊರಹಾಕಲು ವಿದೇಶಿ ಪಿತೂರಿ” ನಡೆದಿದೆ ಎಂಬ ಖಾನ್ ಅವರ ಆರೋಪವನ್ನು “ನಾಟಕ” ಎಂದು ಕರೆದ ಶಹಬಾಜ್, ಇಮ್ರಾನ್ ಖಾನ್ ಆ ಆರೋಪಗಳನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು. ಪಾಕಿಸ್ತಾನದಲ್ಲಿ ತನ್ನ ಸರ್ಕಾರದ ಪತನದ ಹಿಂದೆ ಖಾನ್ ಆರೋಪಿಸಿದ “ವಿದೇಶಿ ಪಿತೂರಿ” ಗೆ ಸಂಬಂಧಿಸಿದ ಪತ್ರವನ್ನು ಉಲ್ಲೇಖಿಸಿದ ಷರೀಫ್, “ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯು ವಿದೇಶಿ ಪಿತೂರಿ ಎಂದು ಕರೆಯಲ್ಪಡುವ ವಿವಾದಾತ್ಮಕ ಪತ್ರದ ಬಗ್ಗೆ ವಿಚಾರಣೆ ಮಾಡುತ್ತದೆ. ಇದು ಷಡ್ಯಂತ್ರ ಸಾಬೀತಾದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ. ಹಿಂದಿನ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಉರುಳಿಸುವ ಪಿತೂರಿಯಲ್ಲಿ ಅಮೆರಿಕ ಭಾಗಿಯಾಗಿದೆ ಎಂದು ಖಾನ್ ಹೇಳಿದ್ದರು. 70ರ ಹರೆಯದ ಪಿಎಂಎಲ್-ಎನ್ ನಾಯಕ ಷರೀಫ್ ಅವರನ್ನು ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿದರು. ಷರೀಫ್ 174 ಮತಗಳನ್ನು ಪಡೆದರು. ಅಂದರೆ ಚುನಾವಣೆಯಲ್ಲಿ ಗೆಲ್ಲಲು 172 ಸರಳ ಬಹುಮತಕ್ಕಿಂತ ಎರಡು ಹೆಚ್ಚು.
ಇದನ್ನೂ ಓದಿ: ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕು, ಆದರೆ ಕಾಶ್ಮೀರ ಸಮಸ್ಯೆ ಪರಿಹರಿಸದೆ ಶಾಂತಿ ಸಾಧ್ಯವಿಲ್ಲ: ಶಹಬಾಜ್ ಷರೀಫ್