ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್) ದೇಶದಲ್ಲಿ ಶೇ.99ರಷ್ಟು ಡಿಟಿಪಿ-3 (DTP-3 ಅಂದರೆ ಮಕ್ಕಳಿಗೆ ನೀಡಲ್ಪಡುವ ಡಿಪ್ತೀರಿಯಾ, ಟೆಟನಸ್ ಮತ್ತು ಪೆರ್ಟುಸಿಸ್ ಲಸಿಕೆಗಳು) ಲಸಿಕೆಯನ್ನು ಮಕ್ಕಳಿಗೆ ನೀಡಲಾಗಿದೆ ಎಂಬುದು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ಸರ್ವೇಯಿಂದ ಗೊತ್ತಾಗಿದೆ. ಇದು ಇಲ್ಲಿಯವರೆಗಿನ ಅತಿಹೆಚ್ಚು ಡಿಟಿಪಿ 3 ಲಸಿಕೀಕರಣದ ವ್ಯಾಪ್ತಿಯಾಗಿದ್ದು, ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಆರೋಗ್ಯಪಡೆಯ ಬದ್ಧತೆಯಿಂದ ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾ ವೈರಸ್ ಕಾರಣದಿಂದ ಲಕ್ಷಾಂತರ ಮಕ್ಕಳು, ಬೇರೆ ಅತ್ಯಗತ್ಯವಾಗಿ ನೀಡಲ್ಪಡುವ ಲಸಿಕೆಗಳಿಂದ ವಂಚಿತರಾಗಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾಹಿತಿ ಹೊರಹಾಕಿದೆ.
ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಕಾರಣ ಅದರ ನಿಯಂತ್ರಣ, ಕೊವಿಡ್ 19 ಲಸಿಕೆ ನೀಡುವ ಬಗ್ಗೆಯೇ ಹೆಚ್ಚಿನ ಗಮನಹರಿಸಲಾಗಿದೆ. ಹೀಗಾಗಿ ಮಕ್ಕಳಿಗೆ ಅತ್ಯಗತ್ಯವಾಗಿ ನೀಡಲೇಬೇಕಾದ ಡಿಟಿಪಿ-3 ಲಸಿಕೆ ಸೇರಿ ಇನ್ನೂ ಕೆಲವು ನಿಗದಿತ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ನೀಡಲಾಗಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ಅನೇಕ ಮಕ್ಕಳು ಬೇರೆ ಕಾಯಿಲೆಗಳಿಂದ ಬಳಲಬಹುದು..ಮಕ್ಕಳ ಸಾವಿನ ಪ್ರಮಾಣವೂ ಹೆಚ್ಚಾಗಬಹುದು ಎಂಬಿತ್ಯಾದಿ ವಿಷಯಗಳನ್ನು ಕೆಲವು ಮಾಧ್ಯಮಗಳೂ ವರದಿ ಮಾಡಿದ್ದವು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಾಹಿತಿ ಬಿಚ್ಚಿಟ್ಟಿದೆ.
ಇನ್ನು ವಿಶ್ವಸಂಸ್ಥೆಯ ಮಕ್ಕಳ ತುರ್ತುನಿಧಿ (UNICEF) ಕೂಡ ಇತ್ತೀಚೆಗೆ ಒಂದು ಹೇಳಿಕೆ ನೀಡಿತ್ತು. ಕೊರೊನಾ ಸಾಂಕ್ರಾಮಿಕದ ಮಧ್ಯೆ, ಉಳಿದ ಅತ್ಯಗತ್ಯ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ. 2020ರಲ್ಲಿ ಲಸಿಕೆ ಪಡೆಯದ ಮಕ್ಕಳ ಸಂಖ್ಯೆ ಭಾರತದಲ್ಲಿ 3 ಮಿಲಿಯನ್ಗಳಷ್ಟಿತ್ತು. ಇದೀಗ ಆ ಸಂಖ್ಯೆ 3.5 ಮಿಲಿಯನ್ಗೆ ಏರಿಕೆಯಾಗಿದೆ ಎಂದು ಯುನಿಸೆಫ್ ವರದಿ ನೀಡಿತ್ತು. ನಂತರ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ಉಳಿದ ವೈದ್ಯಕೀಯ, ಅಗತ್ಯ ಸೇವೆಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹೇಳಿದೆ. ದೇಶದಲ್ಲಿ ಮಕ್ಕಳಿಗೆ ಇನ್ನಿತರ ಲಸಿಕೆ ನೀಡುವ ಜತೆಗೆ ಕೊವಿಡ್ 19 ಲಸಿಕೆ ನೀಡುವ ಬಗ್ಗೆಯೂ ಪ್ರಯತ್ನಗಳು ಜಾರಿಯಲ್ಲಿವೆ. ಜೈಡಸ್ ಕ್ಯಾಡಿಲಾ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗ ಮುಗಿದ ತಕ್ಷಣ ಮರುಪರಿಶೀಲನೆ ಮಾಡಿ, ನೀಡಲು ಪ್ರಾರಂಭ ಮಾಡಲಾಗುತ್ತದೆ ಎಂದೂ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಲ್ಲುಗೆ ಕತ್ರಿನಾ ಮೇಲೆ ಇನ್ನೂ ಲವ್ ಇದೆ ಎಂಬುದಕ್ಕೆ ಈ ಪೋಸ್ಟ್ ಸಾಕ್ಷಿ; ಫ್ಯಾನ್ಸ್ ಹೇಳೋದೇನು?
India has achieved 99 per cent coverage of DTP3 in January To March