ದೇಶದಲ್ಲಿ ಅಗತ್ಯಕ್ಕಿಂತ ದುಪ್ಪಟ್ಟು ಆಹಾರ ಧಾನ್ಯ ಸಂಗ್ರಹವಿದೆ: ಸಚಿವ ಪ್ರಲ್ಹಾದ್​​​​ ಜೋಶಿ

ದೇಶದಲ್ಲಿ ಆಹಾರದ ಕೊರತೆಯಿದೆ ಎಂಬ ವದಂತಿಯನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳು ದೇಶದಲ್ಲಿ ಸಂಗ್ರಹವಿದೆ. ಜನರು ಆತಂಕಗೊಳ್ಳಬಾರದು ಮತ್ತು ಅನಗತ್ಯವಾಗಿ ಸಾಮಾಗ್ರಿಗಳನ್ನು ಖರೀದಿಸಬಾರದು. ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ದೇಶದಲ್ಲಿ ಅಗತ್ಯಕ್ಕಿಂತ ದುಪ್ಪಟ್ಟು ಆಹಾರ ಧಾನ್ಯ ಸಂಗ್ರಹವಿದೆ: ಸಚಿವ ಪ್ರಲ್ಹಾದ್​​​​ ಜೋಶಿ
ಸಚಿವ ಪ್ರಲ್ಹಾದ್​​​​ ಜೋಶಿ

Updated on: May 09, 2025 | 8:57 AM

ನವದೆಹಲಿ, ಮೇ 09: ಭಾರತ ಮತ್ತು ಪಾಕಿಸ್ತಾನ ನಡುವೆ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚುತ್ತಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಸದ್ಯ ಈ ವಿಚಾರವಾಗಿ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್​​​​ ಜೋಶಿ (Pralhad Joshi) ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಆಹಾರ (food) ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬುದು ಶುದ್ಧ ಸುಳ್ಳು. ಯಾರೊಬ್ಬರೂ ಈ ಹುಸಿ ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ವಿವಿಧೆಡೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿದೆ ಎಂದು ಕೆಲವರು ಸುಳ್ಳು ವದಂತಿಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕಿಡಿಗೇಡಿಗಳ ಪ್ರಯತ್ನ ಇದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೆಚ್​ಎಎಲ್​ನಲ್ಲಿ ಹೈ ಅಲರ್ಟ್, ಸಿಬ್ಬಂದಿ ರಜೆ ರದ್ದು: ಓವರ್ ಟೈಂ ಕೆಲಸಕ್ಕೆ ಸಿದ್ಧರಿರಲು ಸೂಚನೆ

ಪಂಜಾಬ್‌ನಲ್ಲಿ ಇಂಥ ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದರೆ, ದೇಶದ ಯಾವುದೇ ಸ್ಥಳದಲ್ಲೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚೇ ದಾಸ್ತಾನಿದೆ. ಜನರು ಅಗತ್ಯ ಆಹಾರ ಧಾನ್ಯ ಮತ್ತು ದೈನಂದಿನ ಅಗತ್ಯ ವಸ್ತುಗಳಿಗೆ ಎಲ್ಲೂ ಮುಗಿಬೀಳಬೇಕಿಲ್ಲ ಎಂದು ಹೇಳಿದ್ದಾರೆ.

ಸಚಿವ ಪ್ರಲ್ಹಾದ್​​ ಜೋಶಿ ಟ್ವೀಟ್​

ದೇಶಾದ್ಯಂತ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ಎಲ್ಲೆಡೆಯೂ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲೇ ಆಹಾರ ಧಾನ್ಯ ಮತ್ತು ಅಗತ್ಯ ಸಾಮಾನು ಸರಂಜಾಮು ಇರುವುದು ದೃಢಪಟ್ಟಿದೆ. ದೇಶದಲ್ಲಿ ಸಾಕಷ್ಟು ಸಂಗ್ರಹವಿದೆ. ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ವದಂತಿ ಹಬ್ಬಿಸುವ ಪ್ರಯತ್ನ

ಈ ಸುಳ್ಳು ಸುದ್ದಿ ಪಂಜಾಬ್‌ನಲ್ಲಿ ಹರಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಯಾರೋ ಉದ್ದೇಶಪೂರ್ವಕವಾಗಿ ವದಂತಿ ಹರಡುತ್ತಿರುವಂತೆ ತೋರುತ್ತಿದೆ. ಯಾರೂ ಇಂಥದ್ದಕ್ಕೆಲ್ಲ ಕಿವಿಗೊಡಬಾರದು ಎಂದು ಸಚಿವರು ಕರೆ ನೀಡಿದ್ದಾರೆ.

ತರಾತುರಿ ಖರೀದಿ ಬೇಡ

ಸುಳ್ಳು ವದಂತಿಗೆ ಕಿವಿಗೊಟ್ಟು ಯಾರೊಬ್ಬರೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಖರೀದಿಗೆ ತರಾತುರಿ ತೋರಬಾರದು. ಬೇರೆ ಬೇರೆ ಮಾರುಕಟ್ಟೆಗಳಿಗೆ ತೆರಳಿ ದುಪ್ಪಟ್ಟು ಹಣ ತೆತ್ತು ಖರೀದಿಯಲ್ಲಿ ತೊಡಗಿಕೊಳ್ಳುವ ಅವಶ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಾಲ ಬಿಚ್ಚಿದ ಪಾಕ್​ ಪ್ರೇಮಿ: ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್​​, ದೂರು ದಾಖಲು

ದೇಶದಲ್ಲಿ ಅಕ್ಕಿ, ಗೋಧಿ, ಕಡಲೆ, ತೊಗರಿ, ಮಸೂರ್, ಹೆಸರುಕಾಳು ಹೀಗೆ ಎಲ್ಲಾ ಆಹಾರ-ಧಾನ್ಯ, ಬೇಳೆ-ಕಾಳುಗಳು ಅಗತ್ಯಕ್ಕಿಂತ ದುಟ್ಟಪ್ಪು ದೊಡ್ಡ ಪ್ರಮಾಣದಲ್ಲೇ ಸಂಗ್ರಹವಿದೆ. ಆಹಾರ ಪದಾರ್ಥ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿದೆ ಎಂಬ ವದಂತಿ ನಿರಾಧಾರವಾಗಿದ್ದು, ಯಾರೂ ಇದನ್ನು ನಂಬಬಾರದು, ಜನತೆ ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.