ಕೊರೊನಾ ಅವತಾರ್​ 2ಗೆ ಪತರಗುಟ್ಟುತ್ತಿದೆ ಬ್ರಿಟನ್​.. ಅಲ್ಲಿಯ ಪ್ರಧಾನಿ ನಮ್ಮ 72ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿ: ಸ್ವಾಗತಾರ್ಹವೇ?

ಈ ನಡುವೆ ಮುಂಬರುವ 72ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಮುಖ್ಯ ಅತಿಥಿಯನ್ನಾಗಿ ಭಾರತ ಸ್ವಾಗತಿಸಿದೆ. ಗಣರಾಜ್ಯೋತ್ಸವಕ್ಕೆ ಇನ್ನೂ 1 ತಿಂಗಳು ಬಾಕಿ ಇದೆಯಾದರೂ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಬೋರಿಸ್​ ಜಾನ್ಸನ್​ ಆಗಮನ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಬಹುದು.

ಕೊರೊನಾ ಅವತಾರ್​ 2ಗೆ ಪತರಗುಟ್ಟುತ್ತಿದೆ ಬ್ರಿಟನ್​.. ಅಲ್ಲಿಯ ಪ್ರಧಾನಿ ನಮ್ಮ 72ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿ: ಸ್ವಾಗತಾರ್ಹವೇ?
72ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​
Updated By: ಸಾಧು ಶ್ರೀನಾಥ್​

Updated on: Dec 21, 2020 | 3:43 PM

ಬ್ರಿಟನ್​ನಲ್ಲಿ ಕೊರೊನಾ ವೈರಾಣು ಹೊಸ ಅವತಾರ ತಾಳಿದೆ. ಈ ಮೂಲಕ 2ನೇ ಅಲೆಯ ಭೀತಿಯಿಂದ ಬ್ರಿಟನ್​ ಮತ್ತೆ ಲಾಕ್​ಡೌನ್​ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆ ಭೀಕರ ಮತ್ತು ಅಪಾಯಕಾರಿ ಎಂಬ ವಾದಗಳು ಇರುವ ಕಾರಣ ಇತರೆ ದೇಶಗಳು ಬ್ರಿಟನ್ನಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಯಾನ ಸ್ಥಗಿತಗೊಳಿಸಿವೆ.

ಈ ನಡುವೆ ಮುಂಬರುವ 72ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರನ್ನು ಮುಖ್ಯ ಅತಿಥಿಯನ್ನಾಗಿ ಸ್ವಾಗತ ಕೋರಲು ಭಾರತ ನಿರ್ಣಯಿಸಿದೆ. ಗಣರಾಜ್ಯೋತ್ಸವಕ್ಕೆ ಇನ್ನೂ 1 ತಿಂಗಳು ಬಾಕಿ ಇದೆಯಾದರೂ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಬೋರಿಸ್​ ಜಾನ್ಸನ್​ ಆಗಮನ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಬಹುದು. ಬ್ರಿಟನ್​ನಲ್ಲಿ ಕೊವಿಡ್​​ 2ನೇ ಅಲೆ ಎಗ್ಗಿಲ್ಲದೇ ಹಬ್ಬುತ್ತಿರುವಾಗ ಅಲ್ಲಿಂದಲೇ ಅತಿಥಿಗಳನ್ನು ಸ್ವಾಗತಿಸುವುದು ಸಾರ್ವಜನಿಕರ ದೃಷ್ಟಿಯಲ್ಲಿ ಅಚ್ಚರಿಯಾಗಿಯೂ ಕಾಣಬಹುದು.

ಬೋರಿಸ್​ ಜಾನ್ಸನ್​ ಮತ್ತವರ ತಂಡ ಎಷ್ಟೇ ಎಚ್ಚರಿಕೆಯಿಂದ ಬಂದರೂ, ಸೋಂಕಿನ ಯಾವ ಲಕ್ಷಣವೂ ಇಲ್ಲದೇ ವೈರಾಣು ನಮ್ಮ ನೆಲಕ್ಕೆ ಕಾಲಿಟ್ಟರೆ ಮುಂದೇನು? ಎಂಬ ಪ್ರಶ್ನೆ ಮೂಡುವುದರಲ್ಲಿ ತಪ್ಪೇನಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಕೊರೊನಾ ವೈರಾಣು ತನ್ನ ಸ್ವರೂಪವನ್ನೇ ಬದಲಿಸಿಕೊಂಡು ಹಬ್ಬುತ್ತಿದೆ. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಹೇಳಿರುವ ಬ್ರಿಟನ್​ ಅಧ್ಯಕ್ಷರ ಮಾತು ಇನ್ನಷ್ಟು ಗಂಭೀರ ಆಲೋಚನೆಗಳನ್ನು ಮೂಡಿಸುವುದು ಸಹಜ. ಈ ಹಿನ್ನೆಲೆಯಲ್ಲಿ ಭಾರತ ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ವಿಮಾನ ಸೇವೆ ನಿರ್ಬಂಧಿಸಿ – ಅಶೋಕ್​ ಗೆಹ್ಲೋಟ್​
ಇನ್ನೊಂದೆಡೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್,​ ಬ್ರಿಟನ್​ನಲ್ಲಿ ಕೊರೊನಾ 2ನೇ ಅಲೆ ಹಬ್ಬುತ್ತಿರುವ ಕಾರಣ ಭಾರತ, ಬ್ರಿಟನ್​ ಮತ್ತು ಯುರೋಪಿಯನ್​ ರಾಷ್ಟ್ರಗಳ ನಡುವಣ ವಿಮಾನ ಸಂಪರ್ಕ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೊವಿಡ್​ ಆರಂಭದಲ್ಲಿ ಭಾರತ ವಿಮಾನ ಸೇವೆ ಸ್ಥಗಿತಗೊಳಿಸುವುದು ತಡವಾಗಿ ಸಾಕಷ್ಟು ಹೊಡೆತ ಅನುಭವಿಸಿದೆ. ಈಗ ಮತ್ತೆ ಆ ತಪ್ಪು ಮಾಡಬಾರದು ಎಂದು ಎಚ್ಚರಿಸಿದ್ದಾರೆ.

ಹೆದರುವ ಅಗತ್ಯವಿಲ್ಲ – ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​
ಕೊವಿಡ್​ 2ನೇ ಅಲೆ ಕುರಿತು ತಜ್ಞರೊಂದಿಗೆ ಸಭೆ ನಡೆಸಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​, ಯಾರೂ ಭಯಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಬಹಳಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಧೈರ್ಯ ತುಂಬಿದ್ದಾರೆ.

ಕೊರೊನಾ 2ನೇ ಅಲೆ: ಬ್ರಿಟನ್​ನಲ್ಲಿ ಮತ್ತೆ ಲಾಕ್​​ಡೌನ್.. ಯುರೋಪಿಯನ್​ ದೇಶಗಳಿಂದ ಬ್ರಿಟನ್​ ವಿಮಾನಗಳಿಗೆ ನಿರ್ಬಂಧ