ಎರಡನೇ ಬಾರಿಗೆ ಕೊರೊನಾ ಕುಣಿತದ ಆತಂಕ: ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ!
ಮಾರುಕಟ್ಟೆ ಕುಸಿತ ಕಂಡ ನಡುವೆಯೂ ಪ್ರಮುಖ 580 ಷೇರುಗಳು ಏರಿಕೆ ಕಂಡರೆ, 2,381 ಷೇರು ಕುಸಿತಗೊಂಡಿವೆ. 163 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ. ಎರಡನೇ ಅಲೆ ಅಬ್ಬರಿಸುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಂತೆ ವಿಶ್ವದ ಬಹುತೇಕ ಮಾರುಕಟ್ಟೆ ಡೌನ್ ಆಗಿದೆ.
ಮುಂಬೈ: ಬ್ರಿಟನ್ನಲ್ಲಿ ಕೊರೊನಾ ವೈರಸ್ ಎರಡನೇ ಅಲೆಯ ಭೀತಿ ಎದುರಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್ ಸಾಕಷ್ಟು ಅಪಾಯಕಾರಿ ಎನ್ನುವ ವಾದವನ್ನು ತಜ್ಞರು ಮುಂದಿಡುತ್ತಿದ್ದಂತೆ ವಿಶ್ವದ ಷೇರು ಮಾರುಕಟ್ಟೆ ಇಳಿಕೆ ಹಾದಿ ಹಿಡಿದೆ. ಭಾರತದ ಷೇರು ಮಾರುಕಟ್ಟೆ ಕೂಡ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.
ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ 2,037 ಅಂಕ ಕಳೆದುಕೊಂಡು 44,923 ಅಂಕಕ್ಕೆ ಇಳಿಕೆ ಆಗಿತ್ತು. ನಂತರ ಮಾರುಕಟ್ಟೆ ಕೊಂಚ ಚೇತರಿಕೆ ಕಂಡಿತ್ತು. ಮಧ್ಯಾಹ್ನ 3:30ಕ್ಕೆ ಷೇರು ವಹಿವಾಟು ಮುಕ್ತಗೊಳ್ಳುವ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ ಶೇ. 3.00 ಅಥವಾ 1,406.73 ಅಂಕ ಕಳೆದುಕೊಂಡು 45553.96 ಅಂಕಕ್ಕೆ ನಿಂತಿದೆ. ಇನ್ನು, ನಿಫ್ಟಿ ಶೇ. 3.14 ಅಥವಾ 432.10 ಅಂಕ ಕಳೆದುಕೊಂಡು 13328.40 ಅಂಕಕ್ಕೆ ಕುಸಿದಿದೆ.
ಮಾರುಕಟ್ಟೆ ಕುಸಿತ ಕಂಡ ನಡುವೆಯೂ ಪ್ರಮುಖ 580 ಷೇರುಗಳು ಏರಿಕೆ ಕಂಡರೆ, 2,381 ಷೇರು ಕುಸಿತಗೊಂಡಿವೆ. 163 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ. ನಿಫ್ಟಿ ಫಿಫ್ಟಿ ಷೇರುಗಳಾದ ಒಎನ್ಜಿಸಿ, ಟಾಟಾ ಮೋಟಾರ್ಸ್, ಗೈಲ್, ಹಿಂಡ್ಲಾಕ್ ಮತ್ತು ಐಒಎಸ್ ಷೇರುಗಳು ಅತಿ ಹೆಚ್ಚು ಕುಸಿತ ಕಂಡ ಷೇರುಗಳು.
ಎರಡನೇ ಅಲೆಯ ಎಫೆಕ್ಟ್ ಅಮೆರಿಕ ಚುನಾವಣೆ ಫಲಿತಾಂಶ ಹಾಗೂ ಕೊರೊನಾ ವೈರಸ್ ಲಸಿಕೆ ಸುದ್ದಿಗಳಿಂದ ಭಾರತದ ಷೇರು ಮಾರುಕಟ್ಟೆ ಐತಿಹಾಸಿಕ ಏರಿಕೆ ಕಂಡಿತ್ತು. ಆದರೆ, ಬ್ರಿಟನ್ನಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಕಾಣಿಸಿಕೊಂಡಿದೆ. ಈ ಮಧ್ಯೆ ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಕೊರೊನಾ ವೈರಸ್ ರೂಪಾಂತರ ತಾಳಿದ್ದು, ಇದು ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಇದರ ಪರಿಣಾಮದಿಂದ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ನಡೆದಿದೆ.
ಬಹುತೇಕ ಮಾರುಕಟ್ಟೆ ಡೌನ್ ಎರಡನೇ ಅಲೆ ಅಬ್ಬರಿಸುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಂತೆ ವಿಶ್ವದ ಬಹುತೇಕ ಮಾರುಕಟ್ಟೆ ಡೌನ್ ಆಗಿದೆ. ಅಮೆರಿಕ, ಬ್ರಿಟನ್ ಸೇರಿ ಎಲ್ಲ ಕಡೆಗಳಲ್ಲಿ ಕರಡಿ ಕುಣಿತ ಮುಂದುವರಿದಿದೆ. ನಾಳೆಯೂ ಮಾರುಕಟ್ಟೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.