ರಾಮಮಂದಿರ ನಿಧಿ ಸಂಗ್ರಹದಿಂದ ಚುನಾವಣೆ ಲಾಭ: ಶಿವಸೇನೆ ಗಂಭೀರ ಆರೋಪ
ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಹಣ ಬಳಸುವುದು ನಿರ್ಲಕ್ಷಿಸುವ ವಿಷಯವಲ್ಲ. ಇದು ರಾಜಕೀಯ ವಿಚಾರ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಮರಾಠಿ ದಿನಪತ್ರಿಕೆ ತಿಳಿಸಿದೆ.
ಮುಂಬೈ: ರಾಮ ಮಂದಿರ ನಿರ್ಮಾಣಕ್ಕಾಗಿ ಸಾಮೂಹಿಕ ಧನ ಸಂಗ್ರಹ ನಡೆಸುವ ಮೂಲಕ 2024ರ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ, ರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲಾಗುತ್ತಿದೆ ಎಂದು ಎಂದು ಶಿವಸೇನೆ ಆರೋಪಿಸಿದೆ.
ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಹಣ ಬಳಸುವುದು ನಿರ್ಲಕ್ಷಿಸುವ ವಿಷಯವಲ್ಲ. ಇದು ರಾಜಕೀಯ ವಿಚಾರ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಮರಾಠಿ ದಿನಪತ್ರಿಕೆ ತಿಳಿಸಿದೆ. ಯಾವುದೇ ಪಕ್ಷ ಅಥವಾ ಸಂಸ್ಥೆಯನ್ನು ಉಲ್ಲೇಖಿಸದೆ ಈ ವಿಚಾರವನ್ನು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಶಿವಸೇನೆಯ ಆರೋಪವನ್ನು ತಳ್ಳಿಹಾಕಿದೆ. ಇದು ರಾಜಕೀಯಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ರಾಮಮಂದಿರ ಭೂಮಿ ಪೂಜೆಯ ಸಂದರ್ಭದಲ್ಲೂ ಶಿವಸೇನೆ ತೊಂದರೆ ಉಂಟುಮಾಡಿತ್ತು. ಈಗ ಜನರು ಸ್ವಇಚ್ಛೆಯಿಂದ ಧನಸಹಾಯ ನೀಡಲು ಮುಂದೆ ಬಂದರೆ ಅದಕ್ಕೂ ಶಿವಸೇನೆ ಅಡ್ಡಿಪಡಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯ ನಿರ್ಮಾಣಕ್ಕಾಗಿ ಸಾಮೂಹಿಕ ನಿಧಿ ಸಂಗ್ರಹ ಕಾರ್ಯಕ್ರಮವನ್ನು ದೇಶದಲ್ಲೆಡೆ ಹಮ್ಮಿಕೊಳ್ಳಲಿದೆ ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಕಳೆದ ವಾರ ಹೇಳಿಕೆ ನೀಡಿದ್ದರು. ವಿದೇಶದಿಂದ ನಿಧಿ ಸಂಗ್ರಹಿಸಲು ಟ್ರಸ್ಟ್ಗೆ ಅನುಮತಿ ಇಲ್ಲದ ಕಾರಣ, ದೇಶದಲ್ಲಿ ಸಂಗ್ರಹಿಸಲ್ಪಟ್ಟ ಮೊತ್ತದಿಂದಲೇ ರಾಮಮಂದಿರ ನಿರ್ಮಾಣವಾಗಲಿದೆ ಎಂದೂ ಅವರು ತಿಳಿಸಿದ್ದರು.
ಧನಸಂಗ್ರಹ ಮಾಡಲಿರುವ ಸ್ವಯಂಸೇವಕರು ಯಾರು ಮತ್ತು ಅವರ ಮೂಲ ಸಂಘಟನೆ ಯಾವುದು ಎಂದು ಪ್ರಶ್ನಿಸಿರುವ ಪತ್ರಿಕೆಯು, ರಾಮನ ಹೆಸರಿನಲ್ಲಿ ನಡೆಯುವ ರಾಜಕೀಯವು ನಿಲ್ಲಬೇಕಿತ್ತು. ಆದರೆ, ಹಾಗಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ.
ಎಲ್.ಕೆ. ಅಡ್ವಾಣಿ, ಬಾಳಾ ಠಾಕ್ರೆ ಅವರ ರಾಮಮಂದಿರ ಹೋರಾಟದ ಇತಿಹಾಸ ನೆನಪಿಸಿಕೊಂಡಿರುವ ಪತ್ರಿಕೆ, ಈಗ ಅಯೋಧ್ಯೆಯ ರಾಮಮಂದಿರವು ಕೇವಲ ಮಾಲೀಕತ್ವದ ವಿಚಾರವಾಗಿ ಬದಲಾಗಿದೆ ಎಂದು ಹೇಳಿದೆ. ಪತ್ರಿಕೆಯ ಸಂಪಾದಕೀಯಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಆಶಿಶ್ ಶೆಲಾರ್, ಶಿವಸೇನೆ ಯಾಕೆ ಈಗಲೇ ಹೆದರಿಕೊಂಡಿದೆ? ಸಂಜಯ್ ರಾವುತ್ (ಸಾಮ್ನ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ) 2024ರ ತಮ್ಮ ಸೋಲನ್ನು ಈಗಲೇ ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಚಳವಳಿ ಚರ್ಚೆ ತಡೆಯಲೆಂದೇ ಚಳಿಗಾಲದ ಅಧಿವೇಶನ ರದ್ದು: ಶಿವಸೇನಾ ನಾಯಕ ಸಂಜಯ್ ರಾವುತ್ ಟೀಕೆ
Published On - 5:41 pm, Mon, 21 December 20