ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ

ಇರಾನ್​​ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಇರಾನ್‌ಗೆ ಅನಗತ್ಯ ಪ್ರಯಾಣವನ್ನು ಮಾಡದಂತೆ ಭಾರತ ಸರ್ಕಾರ ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ. ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಇರಾನ್‌ಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಭಾರತೀಯ ನಾಗರಿಕರನ್ನು ಒತ್ತಾಯಿಸುವ ಪ್ರಯಾಣ ಸಲಹೆಯನ್ನು ವಿದೇಶಾಂಗ ಸಚಿವಾಲಯ (MEA) ನೀಡಿದೆ.

ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ
Randhir Jaiswal

Updated on: Jan 05, 2026 | 10:38 PM

ನವದೆಹಲಿ, ಜನವರಿ 5: ಮುಂದಿನ ಸೂಚನೆ ಬರುವವರೆಗೂ ಇರಾನ್‌ಗೆ ಅನಿವಾರ್ಯವಲ್ಲದಿದ್ದರೆ ಪ್ರಯಾಣವನ್ನು ಮಾಡದಂತೆ ಭಾರತದ ವಿದೇಶಾಂಗ ಸಚಿವಾಲಯ ಭಾರತೀಯ ನಾಗರಿಕರಿಗೆ ಸೂಚಿಸಿದೆ. ಇರಾನ್‌ನಲ್ಲಿರುವ (Iran) ಭಾರತೀಯ ನಾಗರಿಕರು ಕೂಡ ಎಚ್ಚರಿಕೆಯಿಂದಿರಬೇಕು, ಪ್ರತಿಭಟನೆಗಳ ಪ್ರದೇಶಗಳಲ್ಲಿ ಓಡಾಡಬಾರದು, ಏನೇ ಸಮಸ್ಯೆಯಾದರೂ ಅಥವಾ ಎಲ್ಲ ರೀತಿಯ ಸೂಚನೆಗಳಿಗೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಗಮನಿಸುತ್ತಿರಬೇಕು ಎಂದು ಸರ್ಕಾರ ಹೇಳಿದೆ.

ರೆಸಿಡೆಂಟ್ ವೀಸಾಗಳ ಮೇಲೆ ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳು ಈಗಾಗಲೇ ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳದಿದ್ದರೆ ತಕ್ಷಣ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅದರ ಅಧ್ಯಕ್ಷರನ್ನು ಜೈಲಿಗೆ ಹಾಕಿದ ನಂತರ ಭಾರತದ ಈ ಕ್ರಮವು ಜಾರಿಗೆ ಬಂದಿದೆ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ಆಕ್ರಮಣ ಮತ್ತು ಅದರ ಅಧ್ಯಕ್ಷರನ್ನು ಬಂಧಿಸಿರುವುದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಅನೇಕ ದೇಶಗಳು ಅಮೆರಿಕದ ಈ ಕ್ರಮವನ್ನು ಖಂಡಿಸಿವೆ. ಯಾವುದೇ ದೇಶದ ಅಧ್ಯಕ್ಷರನ್ನು ಈ ರೀತಿ ಅಪಹರಿಸುವುದು ಸರಿಯಲ್ಲ ಎಂದು ಹೇಳಿದೆ.


ವೆನೆಜುವೆಲಾ ವಿರುದ್ಧದ ಕ್ರಮದ ನಂತರ ಇರಾನ್ ಅಮೆರಿಕದ ಎರಡನೇ ಗುರಿ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಟ್ರಂಪ್ ಇರಾನ್ ವಿರುದ್ಧವೂ ಕೆಲವು ಕಠಿಣ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ. ಹೀಗಾಗಿ, ಟ್ರಂಪ್ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತ ಈ ಎಚ್ಚರಿಕೆ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:37 pm, Mon, 5 January 26