ಮುಂಬೈ : ಮಹಾರಾಷ್ಟ್ರದಲ್ಲಿ ಕೊವಿಡ್ ಲಸಿಕೆ ಕೊರತೆ ಇದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದರ ಬೆನ್ನಲ್ಲೇ ಕೇಂದ್ರ ಸರ್ಕಾರ 17 ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಲು ನಿರ್ಧರಿಸಿದೆ. ಈ ಹಿಂದೆ 7.3 ಲಕ್ಷ ಡೋಸ್ ಕಳುಹಿಸುವುದಾಗಿ ಹೇಳಿತ್ತು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಕ್ಕೆ 40 ಲಕ್ಷಕ್ಕಿಂತ ಹೆಚ್ಚು ಡೋಸ್ ನೀಡಲಾಗಿದೆ. ಅದೇ ವೇಳೆ ಗುಜರಾತ್ ಗೆ 30ಲಕ್ಷಕ್ಕಿಂತಲೂ ಹೆಚ್ಚು, ಹರ್ಯಾಣಕ್ಕೆ 24 ಲಕ್ಷಕ್ಕಿಂತಲೂ ಹೆಚ್ಚು ಡೋಸ್ ಗಳನ್ನು ನೀಡಲಾಗಿದೆ. ಹೀಗಿರುವಾಗ ನಮ್ಮ ರಾಜ್ಯಕ್ಕೂ ಹೆಚ್ಚು ಡೋಸ್ ಲಸಿಕೆ ಬೇಕು ಎಂದು ಟೋಪೆ ಮನವಿ ಮಾಡಿದ್ದರು.ಗುಜರಾತಿಗಿಂತ ದುಪಟ್ಟು ಜನಸಂಖ್ಯೆ ಮಹಾರಾಷ್ಟ್ರದಲ್ಲಿದೆ. ಗುಜರಾತಿಗಿಂತ ಹೆತ್ತು ಸಕ್ರಿಯ ಪ್ರಕರಣಗಳು ನಮ್ಮಲ್ಲಿವೆ. ಆದರೆ ಲಸಿಕೆ ನೀಡುವಲ್ಲಿ ನಮಗೆ ಆದ್ಯತೆ ಸಿಗುತ್ತಿಲ್ಲ ಎಂದು ಟೋಪೆ ಹೇಳಿದ್ದಾರೆ. ದೇಶದಲ್ಲಿ ಲಸಿಕೆ ಕೊರತೆ ಇದೆ ಎಂಬ ಮಹಾರಾಷ್ಟ್ರದ ಆರೋಪ ನಿರಾಧಾರ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಹೇಳಿಕೆಗೆ ತೋಪೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಮಗೆ ಪ್ರತಿ ವಾರ ಕನಿಷ್ಠ 40 ಲಕ್ಷ ಡೋಸ್ ಬೇಕು. ಮಹಾರಾಷ್ಟ್ರದಲ್ಲಿ 12 ಕೋಟಿ ಜನಸಂಖ್ಯೆ ಇದೆ. ಇಲ್ಲಿಗೆ ಸಿಕ್ಕಿದ್ದು 1.04 ಕೋಟಿ ಡೋಸ್. ಆದರೆ ಗುಜರಾತಿನಲ್ಲಿ 6 ಕೋಟಿ ಜನರಿದ್ದರೂ ಅಲ್ಲಿ 1ಕೋಟಿ ಡೋಸ್ ನೀಡಲಾಗಿದೆ. ಗುಜರಾತಿನ ಜನಸಂಖ್ಯೆ ಮಹಾರಾಷ್ಟ್ರದ ಅರ್ಧದಷ್ಟೇ ಇರುವುದು. ಇಲ್ಲಿಯವರೆಗೆ ಅವರಿಗೆ 1 ಕೋಟಿ ಲಸಿಕೆ ನೀಡಲಾಗಿದೆ. ನಮಗೆ ಸಿಕ್ಕಿದ್ದು 1.04 ಕೋಟಿ ಡೋಸ್. ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4.5 ಲಕ್ಷ ಇದೆ. ಕೊವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 30 ಲಕ್ಷ ದಾಟಿದೆ. ನಮ್ಮ ಬಳಿ ಈಗ ಉಳಿದಿರುವುದು 9 ಲಕ್ಷ ಡೋಸ್ ಮಾತ್ರ ಇದು ಒಂದೂವರೆ ದಿನಕ್ಕೆ ಸಾಕಾಗುತ್ತದೆ. ವಾರಕ್ಕೆ 6 ಲಕ್ಷ ಮಂದಿಗೆ ಲಸಿಕೆ ನೀಡುವ ಉದ್ದೇಶವನ್ನು ನಾವು ಹೊಂದಿದ್ದು, ಇದನ್ನು ಮೀರುವುದಿಲ್ಲ. ವಾರಕ್ಕೆ 40 ಲಕ್ಷ ಡೋಸ್ ನಮಗೆ ನೀಡಿ ಎಂದು ಟೋಪೆ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ಗುರುವಾರ ಬೆಳಗ್ಗೆ ಹಲವಾರು ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಮುಗಿದಿದೆ ಎಂಬ ಬೋರ್ಡ್ ನೇತು ಹಾಕಲಾಗಿತ್ತು. ಸತಾರಾ, ಪನ್ವೇಲ್, ಸಾಂಗ್ಲಿ ಜಿಲ್ಲೆಗಳಲ್ಲಿ ಜನರಿಗೆ ನೀಡಲು ಲಸಿಕೆ ಇಲ್ಲದೇ ಇರವ ಕಾರಣ ಲಸಿಕೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಹೇಳಿಕೆ ಸುಳ್ಳು
ಛತ್ತೀಗಡದಲ್ಲಿ ಲಸಿಕೆ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದು ಸುಳ್ಳು ಎಂದು ಛತ್ತೀಸಗಡದ ಆರೋಗ್ಯ ಸಚಿವರು ಹೇಳಿದ್ದಾರೆ. ಛತ್ತೀಸಗಡದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದರ ಜತೆಗೆ ಸಾವಿನ ಸಂಖ್ಯೆಯೂ ಏರುತ್ತಿರುವುದು ನಿಜ. ಆದರೆ ಇಲ್ಲಿ ಲಸಿಕೆ ನೀಡುತ್ತಿಲ್ಲ ಎಂಬುದು ಸುಳ್ಳು. ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಮಂದಿಗ ಲಸಿಕೆ ನೀಡಿರುವ ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸಗಡ ಮೊದಲ 4ಸ್ಥಾನಗಳಲ್ಲಿದೆ ಎಂದು ಛತ್ತೀಸಗಡದ ಆರೋಗ್ಯ ಸಚಿವ ಟಿ.ಎಸ್.ಸಿಂಘಡೊ ಹೇಳಿದ್ದಾರೆ.
ಅಗ್ರ ಸ್ಥಾನದಲ್ಲಿ ಭಾರತ
ಜಾಗತಿಕ ಮಟ್ಟದಲ್ಲಿ ಪ್ರತಿ ದಿನ ಅತೀ ಹೆಚ್ಚು ಲಸಿಕೆ ನೀಡುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿ ದಿನ ಸರಾಸರಿ 34 ಲಕ್ಷಕ್ಕಿಂತಲೂ ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ಹೇಳಿದ್ದಾರೆ. ಗುರುವಾರ ಬೆಳಗ್ಗೆ 7ಗಂಟೆ ವರೆಗಿನ ಮಾಹಿತಿ ಪ್ರಕಾರ ಇಲ್ಲಿಯವರೆಗೆ 13,77,304 ಸೆಷನ್ ಗಳಲ್ಲಿ 9,01,98,673 ಡೋಸ್ ಲಸಿಕೆಗಳನ್ನು ನೀಡಲಾಗಿದೆ. 89,68,151 ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿಯಲ್ಲಿರುವ 97,67,538 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. 54,18,084 ಆರೋಗ್ಯ ಕಾರ್ಯ ಕರ್ತರಿಗೆ ಮುಂಚೂಣಿಯಲ್ಲಿರುವ 44,11,609 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. ಇದರ ಜತೆಗೆ 60 ವರ್ಷಕ್ಕಿಂತ ಮೇಲ್ಪಟ್ಟ 3,63,32,851 ಮಂದಿ ಮೊದಲ ಡೋಸ್, 11,39,291 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 45-60 ವರ್ಷದ ನಡುವಿನ 2,36,94,487 ಮಂದಿ ಮೊದಲ ಡೋಸ್ , 4,66,662 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
#COVID19India updates
◼️Cumulative vaccination coverage exceeds 9 crores with nearly 30 lakh vaccine doses given in the last 24 hours
◼️Globally, India leads with an average of more than 34 lakh doses administered per day#LargestVaccineDrive
Details: https://t.co/6welsDOfcs pic.twitter.com/IqXT5lf9pD
— PIB India (@PIB_India) April 8, 2021
ಒಡಿಶಾದಲ್ಲಿಯೂ ಕೊವಿಡ್ ಲಸಿಕೆ ಕೊರತೆ
ಸದ್ಯ ನಮ್ಮಲ್ಲಿ 5.34ಲಕ್ಷ ಡೋಸ್ ಇದೆ. ಪ್ರತಿದಿನ ನಾವು 2.5 ಲಕ್ಷ ಡೋಸ್ ನೀಡುತ್ತಿದ್ದೇವೆ. ಹಾಗಾಗಿ ನಮ್ಮಲ್ಲಿರುವ ಲಸಿಕೆ ಸಂಗ್ರಹ ಇನ್ನೆರಡು ದಿನಕ್ಕೆ ಸಾಕಾಗಬಹುದು. 10 ದಿನಗಳಿಗೆ ಕನಿಷ್ಠ 25 ಲಕ್ಷ ಡೋಸ್ ನಮಗೆ ಕಳುಹಿಸಿಕೊಟ್ಟರೆ ನಾವು ಸರಿಯಾಗಿ ಲಸಿಕೆ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ ಎಂದು ಒಡಿಶಾ ಆರೋಗ್ಯ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರ, ಒಡಿಶಾ, ಛತ್ತೀಸಗಡ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ನಿರ್ಬಂಧ ಜಾರಿ
( India leads Covid-19 Vaccination Globally Centre to send 17 lakh doses of vaccine to Maharashtra)