ಸರ್ಕಾರಿ ಆಸ್ಪತ್ರೆ ನೆಲದ ಮೇಲೆಯೇ ಬಿದ್ದು ನರಳಾಡುತ್ತಿರುವ ರೋಗಿಗಳು; ವಿಡಿಯೋ ಶೇರ್ ಮಾಡಿಕೊಂಡ ಕಾಂಗ್ರೆಸ್ ಸಂಸದ

ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ರನ್ನು ಟ್ಯಾಗ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರ್ಷವರ್ಧನ್ ಅವರೇ, ಗುಜರಾತ್​ಗೆ ಕೇಂದ್ರದಿಂದ ತಂಡವನ್ನು ಕಳಿಸುವ ಅಗತ್ಯ ನಿಮಗೆ ಕಾಣುತ್ತಿಲ್ಲವೇ? ಎಂದಿದ್ದಾರೆ.

  • TV9 Web Team
  • Published On - 16:55 PM, 8 Apr 2021
ಸರ್ಕಾರಿ ಆಸ್ಪತ್ರೆ ನೆಲದ ಮೇಲೆಯೇ ಬಿದ್ದು ನರಳಾಡುತ್ತಿರುವ ರೋಗಿಗಳು; ವಿಡಿಯೋ ಶೇರ್ ಮಾಡಿಕೊಂಡ ಕಾಂಗ್ರೆಸ್ ಸಂಸದ
ಸರ್ಕಾರಿ ಆಸ್ಪತ್ರೆಯಲ್ಲಿ ನೆಲ, ಸ್ಟ್ರೆಚರ್​ ಮೇಲೆ ರೋಗಿಗಳು ಮಲಗಿರುವುದು

ಅಹ್ಮದಾಬಾದ್: ದೇಶಾದ್ಯಂತ ಕೊರೊನಾ ವೈರಸ್​ ಸಿಕ್ಕಾಪಟೆ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿ ದಿನದಿನವೂ ಸೋಂಕಿತರ ಸಂಖ್ಯೆ ಏರುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣವೂ ಅಧಿಕವಾಗುತ್ತಿದೆ. ಈ ಮಧ್ಯೆ ಗುಜರಾತ್​​ನ ಕಾಂಗ್ರೆಸ್ ಸಂಸದ ಶಕ್ತಿ ಸಿನ್ಹ ಗೋಹಿಲ್​ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋವೊಂದು ಆತಂಕವನ್ನು ಹುಟ್ಟಿಸಿದೆ. ಇದು ಗುಜರಾತ್​ನ ಭಾವನಗರ್​ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಿಸಿದ್ದು ಎಂದು ಸಂಸದರು ಹೇಳಿಕೊಂಡಿದ್ದಾರೆ.

ಒಂದು ನಿಮಿಷ 31 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಇದರಲ್ಲಿ ರೋಗಿಗಳು ಆಸ್ಪತ್ರೆಯಲ್ಲಿ ನೆಲದ ಮೇಲೆ, ಸ್ಟ್ರೆಚರ್​ಗಳ ಮೇಲೆಯೇ ಮಲಗಿರುವುದನ್ನು ನೋಡಬಹುದು.  ಕೊವಿಡ್​ 19 ಮಿತಿಮೀರುತ್ತಿರುವ ಕಾರಣದಿಂದ ಆಸ್ಪತ್ರೆಯಲ್ಲಿ ಬೆಡ್​ಗಳ ಕೊರತೆ ಉಂಟಾಗಿದೆ. ಹಾಗಾಗಿ ರೋಗಿಗಳು ನೆಲದ ಮೇಲೆ ಮಲಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಂಸದ ಗೋಹಿಲ್ ಹೇಳಿದ್ದಾರೆ. ಕಣ್ಣಮುಂದೆಯೇ ಅವ್ಯವಸ್ಥೆ ಕಾಣಿಸುತ್ತಿದ್ದರೂ ಗುಜರಾತ್ ಸರ್ಕಾರ ಮಾತ್ರ, ಎಲ್ಲವೂ ಸರಿಯಾಗಿದೆ ಎಂದೇ ಹೇಳಿಕೊಳ್ಳುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ ಸಂಸದ, ಗುಜರಾತ್ ಮುಖ್ಯಮಂತ್ರಿ ವಿಜಯ್​ ರೂಪಾಣಿ, ಮುಖ್ಯಮಂತ್ರಿ ಕಚೇರಿ ಮತ್ತು ಡೆಪ್ಯೂಟಿ ಸಿಎಂ ನಿತಿನ್​ ಪಟೇಲ್​​ರನ್ನು ಅವರನ್ನು ಟ್ಯಾಗ್ ಮಾಡಿದ್ದಾರೆ.

ಈ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ರನ್ನು ಟ್ಯಾಗ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರ್ಷವರ್ಧನ್ ಅವರೇ, ಗುಜರಾತ್​ಗೆ ಕೇಂದ್ರದಿಂದ ತಂಡವನ್ನು ಕಳಿಸುವ ಅಗತ್ಯ ನಿಮಗೆ ಕಾಣುತ್ತಿಲ್ಲವೇ? ನಿಮ್ಮ ರಾಜಕೀಯಕ್ಕಾಗಿ ಗುಜರಾತ್​ನಲ್ಲಿ ಎಲ್ಲವೂ ಸರಿ ಇದೆ ಎಂಬ ಇಮೇಜ್​​ನ್ನು ಸೃಷ್ಟಿಸಲು ಹೊರಟಿದ್ದೀರಿ. ಇದಕ್ಕಾಗಿ ಗುಜರಾತ್​ ಜನ ತ್ಯಾಗ ಮಾಡಬೇಕಾಗಿ ಬಂದಿದೆ ಎಂದು ಕಿಡಿಕಾರಿದ್ದಾರೆ.

ಗುಜರಾತ್​ನಲ್ಲಿ ಕೊವಿಡ್​-19 ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ 3,575 ಕೊವಿಡ್​ ಕೇಸ್​ಗಳು ದಾಖಲಾಗಿದ್ದವು. ಆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,28,453ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,620ಕ್ಕೆ ತಲುಪಿದೆ. ಗುಜರಾತ್​​ನ 20 ಪ್ರಮುಖ ನಗರಗಳಲ್ಲಿ ಸಂಜೆ 8ಗಂಟೆಯಿಂದ ಬೆಳಗ್ಗೆ 6ರವರೆಗೆ ನೈಟ್​ಕರ್ಫ್ಯೂ ಹೇರಲಾಗಿದ್ದು, ಏಪ್ರಿಲ್​ 30ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಅಲ್ಲದೆ, ಏಪ್ರಿಲ್​ 30ರವರೆಗೆ ಸಾರ್ವಜನಿಕವಾಗಿ ಗುಂಪುಗೂಡುವಂತಿಲ್ಲ ಎಂದು ಹೇಳಿದೆ. ಹಾಗೇ, ಮದುವೆ ಸಮಾರಂಭದಲ್ಲಿ ಕೇವಲ 100-200ಜನರಷ್ಟೇ ಸೇರಬಹುದು. ಉಳಿದ ಕಾರ್ಯಕ್ರಮದಲ್ಲಿ ಗರಿಷ್ಠ 50 ಮಂದಿಗೆ ಮಾತ್ರ ಅವಕಾಶ.

ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್​ ಸಂಚಾರ

ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ನೆನಪು ಮಾಡ್ಕೊಳಿ: ಸಂಸದ ಪ್ರತಾಪ್​ಗೆ ಸಾರಿಗೆ ನೌಕರರಿಂದ ಟಕ್ಕರ್