ಗುಜರಾತ್‌ನಲ್ಲಿ NACP ಕ್ಯಾಂಪಸ್‌ಗೆ ಶಂಕುಸ್ಥಾಪನೆ; ನೆರೆಹೊರೆಯವರ ಬಗ್ಗೆ ಭಾರತ ಎಚ್ಚರವಾಗಿರಬೇಕು ಎಂದ ಅಮಿತ್ ಶಾ

|

Updated on: May 20, 2023 | 6:12 PM

ಆಧುನಿಕ ಮೂಲಸೌಕರ್ಯ, ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯಾಧುನಿಕ ತರಬೇತಿ ಸೌಲಭ್ಯಗಳೊಂದಿಗೆ NACP ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 441 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಮೋದಿ ಸರ್ಕಾರದ ರಕ್ಷಣಾ ವೆಚ್ಚವನ್ನು ಸಮರ್ಥಿಸಿಕೊಂಡ ಶಾ, ಗಡಿಗಳು ಸುರಕ್ಷಿತವಾಗಿರುವುದರಿಂದ ಮಾತ್ರ ದೇಶದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಗುಜರಾತ್‌ನಲ್ಲಿ NACP ಕ್ಯಾಂಪಸ್‌ಗೆ ಶಂಕುಸ್ಥಾಪನೆ; ನೆರೆಹೊರೆಯವರ ಬಗ್ಗೆ ಭಾರತ ಎಚ್ಚರವಾಗಿರಬೇಕು ಎಂದ ಅಮಿತ್ ಶಾ
ಅಮಿತ್ ಶಾ
Follow us on

ಶನಿವಾರ ಗುಜರಾತ್‌ನ (Gujarat) ಓಖಾದಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ (NACP) ಕ್ಯಾಂಪಸ್‌ಗೆ ಶಂಕುಸ್ಥಾಪನೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಭಾರತವು ತನ್ನ ನೆರೆಹೊರೆಯವರ ಬಗ್ಗೆ ಯಾವಾಗಲೂ ಎಚ್ಚರದಲ್ಲಿರಬೇಕು ಎಂದು ಹೇಳಿದ್ದಾರೆ. ಅಕಾಡೆಮಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ಶಾ, ಭಾರತವು 15500 ಕಿಲೋಮೀಟರ್ ಉದ್ದದ ಭೂ ಗಡಿ ಮತ್ತು 7500 ಕಿಲೋಮೀಟರ್ ಉದ್ದದ ಸಮುದ್ರ ಗಡಿಯನ್ನು ಹೊಂದಿದೆ. ನಾವು ನೆರೆಹೊರೆಯವರನ್ನೂ ಹೊಂದಿದ್ದೇವೆ, ಅವರ ವಿರುದ್ಧ ನಾವು ಯಾವಾಗಲೂ ಜಾಗರೂಕರಾಗಿರಬೇಕು ಎಂದಿದ್ದಾರೆ. ಅಂದಹಾಗೆ ನೆರೆಯ ಯಾವುದೇ ದೇಶದ ಹೆಸರನ್ನು ಸಚಿವರು ಉಲ್ಲೇಖಿಸಿಲ್ಲ.

ಕರಾವಳಿ ಭದ್ರತೆಯಲ್ಲಿನ ಅಸಂಗತೆಯಿಂದಾಗಿ, ನಮ್ಮ ದೇಶವು ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ಅನುಭವಿಸಿದೆ. ಬಾಂಬೆ ಬಾಂಬ್ ಸ್ಫೋಟಗಳನ್ನು ಯಾವ ರಾಷ್ಟ್ರೀಯವಾದಿ ಪ್ರಜೆಯೂ ಮರೆಯಲು ಸಾಧ್ಯವಿಲ್ಲ. ಒಂದು ಸಣ್ಣ ದೋಷದಿಂದಾಗಿ, 166 ಅಮಾಯಕ ನಾಗರಿಕರು ಕೊಲ್ಲಲ್ಪಟ್ಟರು. ಮುಂಬೈ ಭಯೋತ್ಪಾದಕ ದಾಳಿ ನಡೆದಾಗ ದೇಶದ ಭದ್ರತೆಯು ಪ್ರಪಂಚದಾದ್ಯಂತ ನಗೆಪಾಟಲಿನ ವಿಷಯವಾಯಿತು. ಮುಂಬರುವ ಅಕಾಡೆಮಿಯು ಸಂಪೂರ್ಣ ಕಾರ್ಯಾಚರಣೆಗೊಂಡಾಗ ವರ್ಷಕ್ಕೆ 3000 ಕರಾವಳಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಿದೆ ಎಂದು ಶಾ ಹೇಳಿದರು. ಗಡಿ ಭದ್ರತಾ ಪಡೆ (ಬಿಎಸ್‌ಎಫ್) 450 ಎಕರೆಯಲ್ಲಿ ಅಕಾಡೆಮಿ ಸ್ಥಾಪಿಸಿರುವ ಬಗ್ಗೆ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕಾಡೆಮಿ ಸ್ಥಾಪಿಸಲು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಮತಿ ನೀಡಿದ್ದಾರೆ ಎಂದು ಶಾ ಹೇಳಿದರು. ಒಂಬತ್ತು ಕರಾವಳಿ ರಾಜ್ಯಗಳು, ಐದು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ಮೆರೈನ್ ಪೊಲೀಸರಿಗೆ ತೀವ್ರ ಮತ್ತು ಉನ್ನತ ಮಟ್ಟದ ತರಬೇತಿ ನೀಡಲು ಎನ್ಎಸಿಪಿ ಸ್ಥಾಪಿಸಲಾಗಿದೆ.


ಆಧುನಿಕ ಮೂಲಸೌಕರ್ಯ, ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯಾಧುನಿಕ ತರಬೇತಿ ಸೌಲಭ್ಯಗಳೊಂದಿಗೆ NACP ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ 441 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಮೋದಿ ಸರ್ಕಾರದ ರಕ್ಷಣಾ ವೆಚ್ಚವನ್ನು ಸಮರ್ಥಿಸಿಕೊಂಡ ಶಾ, ಗಡಿಗಳು ಸುರಕ್ಷಿತವಾಗಿರುವುದರಿಂದ ಮಾತ್ರ ದೇಶದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: ಜಪಾನ್‌ನಲ್ಲಿ ಭಾಷಾತಜ್ಞ, ಲೇಖಕ ಟೊಮಿಯೊ ಮಿಜೋಕಾಮಿಯನ್ನು ಭೇಟಿ ಮಾಡಿದ ಮೋದಿ; ಯಾರು ಈ ವ್ಯಕ್ತಿ?

ದ್ವಾರಕಾ ಭಾರತಕ್ಕೆ ಪ್ರವೇಶ ಕೇಂದ್ರವಾಗಿದೆ ಎಂದ ಅಮಿತ್ ಶಾ, ಶ್ರೀಕೃಷ್ಣನು ಮಥುರಾದಿಂದ ಬಂದು ಇಲ್ಲಿ ಸಮುದ್ರ-ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ್ದನು. ದ್ವಾರಕಾದಿಂದ ಸೋಮನಾಥದವರೆಗೆ, ಅಲ್ಲಿಂದ ಗಿರ್ನಾರ್‌ವರೆಗೆ, ಯಾದವ ರಾಜವಂಶದ ಸೈನ್ಯವು ಸತ್ಯಕಿ (ಮಹಾಭಾರತ ಮಹಾಕಾವ್ಯದಿಂದ ಸೇನಾ ಜನರಲ್) ಅಡಿಯಲ್ಲಿ ಕರಾವಳಿ ಭದ್ರತೆಯನ್ನು ಒದಗಿಸುತ್ತಿತ್ತು. ಇಂದು ಪ್ರಧಾನಿ ಮೋದಿಯವರ ಕಲ್ಪನೆಯಿಂದಾಗಿ ಇಡೀ ದೇಶದ ಭದ್ರತಾ ತರಬೇತಿ ಕಾರ್ಯಕ್ರಮವು ಶ್ರೀಕೃಷ್ಣನ ನೆಲದಲ್ಲಿ ನಡೆಯುತ್ತಿದೆ.

ಕೇರಳದ ಕರಾವಳಿಯಲ್ಲಿ 12000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ಜಂಟಿ ಕಾರ್ಯಾಚರಣೆಯ ಕುರಿತು ಮಾತನಾಡಿದ ಶಾ, 10 ವರ್ಷಗಳ ಯುಪಿಎ ಆಡಳಿತದಲ್ಲಿ ಕೇವಲ 630 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಗಡಿಯಲ್ಲಿ ಜಾಗರೂಕತೆ ಹೆಚ್ಚಿದೆ ಎಂಬುದನ್ನು ಇದು ತೋರಿಸುತ್ತದೆ.
ಕಚ್ ಜಿಲ್ಲೆಯ ಜಖೌ ಕರಾವಳಿಯಲ್ಲಿ ನೆಲೆಗೊಂಡಿರುವ ಬಿಎಸ್‌ಎಫ್‌ನ ಐದು ಕರಾವಳಿ ಔಟ್‌ಪೋಸ್ಟ್‌ಗಳನ್ನು ಮತ್ತು ಜಿಲ್ಲೆಯ ಸರ್ ಕ್ರೀಕ್ ಪ್ರದೇಶದ ಲಖ್ಪತ್ವಾರಿಯಲ್ಲಿ ಒಂದು ಔಟ್ ಪೋಸ್ಟ್ ಟವರ್ ಅನ್ನು ಶಾ ವರ್ಚುವಲ್ ಆಗಿ ಉದ್ಘಾಟಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:59 pm, Sat, 20 May 23