Viral Video | ಅನಾಥ ಶವಸಂಸ್ಕಾರಕ್ಕಾಗಿ 2 ಕಿಮೀ ಚಟ್ಟ ಹೊತ್ತ ಮಹಿಳಾ ಪೊಲೀಸ್ ಅಧಿಕಾರಿ

ಶ್ರೀಕಾಕುಳಂ ಜಿಲ್ಲೆಯ ಕರಾವಳಿ ನಗರ ಪಲಸ ಸಮೀಪದ ಹಳ್ಳಿಯೊಂದರಿಂದ ಅನಾಥ ಶವವನ್ನು ಸಬ್ ಇನ್​ಸ್ಪೆಕ್ಟರ್ ಕೆ.ಸಿರೀಷಾ ಹೊತ್ತು ತಂದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರದಿಂದೀಚೆಗೆ ವ್ಯಾಪಕವಾಗಿ ಶೇರ್ ಆಗಿದೆ.

Viral Video | ಅನಾಥ ಶವಸಂಸ್ಕಾರಕ್ಕಾಗಿ 2 ಕಿಮೀ ಚಟ್ಟ ಹೊತ್ತ ಮಹಿಳಾ ಪೊಲೀಸ್ ಅಧಿಕಾರಿ
ಚಟ್ಟ ಹೊತ್ತು ನಡೆಯುತ್ತಿರುವ ಸಿರೀಷಾ (ವಿಡಿಯೊ ಚಿತ್ರ)
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 03, 2021 | 5:13 PM

ಹೈದರಾಬಾದ್: ಆಂಧ್ರಪ್ರದೇಶದ ಮಹಿಳಾ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಮಾಡಿರುವ ಮಾನವೀಯ ಕೆಲಸವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅನಾಥ ವೃದ್ಧನ ಶವ ಸಂಸ್ಕಾರ ಮಾಡಲು ಸ್ಥಳೀಯರು ನಿರಾಕರಿಸಿದಾಗ, ಶವವನ್ನು ಪೊಲೀಸ್ ಅಧಿಕಾರಿ 2 ಕಿಲೋಮೀಟರ್​ನಷ್ಟು ದೂರ ಹೊತ್ತು ತಂದು, ಗೌರವಯುತವಾದ ಅಂತಿಮ ವಿಧಿವಿಧಾನ ನೆರವೇರಿಸಿದರು.

ಶ್ರೀಕಾಕುಳಂ ಜಿಲ್ಲೆಯ ಕರಾವಳಿ ನಗರ ಪಲಸ ಸಮೀಪದ ಹಳ್ಳಿಯೊಂದರಿಂದ ಅನಾಥ ಶವವನ್ನು ಸಬ್ ಇನ್​ಸ್ಪೆಕ್ಟರ್ ಕೆ.ಸಿರೀಷಾ ಹೊತ್ತು ತಂದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರದಿಂದೀಚೆಗೆ ವ್ಯಾಪಕವಾಗಿ ಶೇರ್ ಆಗಿದೆ. ಸಾವಿರಾರು ಮಂದಿ ಆಕೆಯ ಕಾರ್ಯವನ್ನು ಮನಸಾರೆ ಶ್ಲಾಘಿಸಿದ್ದಾರೆ.

ಸಿರೀಷಾ ಮತ್ತು ಇನ್ನೊಬ್ಬ ವ್ಯಕ್ತಿ ಚಟ್ಟ ಹೊತ್ತು ನಡೆಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಚಟ್ಟ ಹೊತ್ತು ಸಾಗುತ್ತಿರುವ ಸಿರೀಷಾ ಅವರಲ್ಲಿ ಬಿಟ್ಟು ಬಿಡಿ ಮೇಡಂ ಎಂದು ಒಬ್ಬರು ಹೇಳಿದಾಗ, ಪರವಾಗಿಲ್ಲ ಎಂದು ಸಿರೀಷಾ ಉತ್ತರಿಸಿದ್ದಾರೆ. ಲಲಿತಾ ಚಾರಿಟೇಬಲ್ ಟ್ರಸ್ಟ್ ಗೆ ಮೃತದೇಹವನ್ನು ಒಪ್ಪಿಸಿದ ಸಿರೀಷಾ , ಅಂತ್ಯ ಸಂಸ್ಕಾರಕ್ಕೂ ಸಹಾಯಮಾಡಿದ್ದಾರೆ.

ಸಿರೀಷಾ ಅವರ ಮಾನವೀಯ ನಡೆಗೆ ಡಿಜಿಪಿ ಗೌತಂ ಸವಾಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆಂಧ್ರಪ್ರದೇಶ ಪೊಲೀಸ್ ಟ್ವಿಟರ್ ಹ್ಯಾಂಡ್ಲ್ ಟ್ವೀಟ್ ಮಾಡಿದೆ.

ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ‘ಕನಸಿನ ರಾಣೆಬೆನ್ನೂರು’ ತಂಡ