Delhi Chalo | ದೆಹಲಿಯತ್ತ ಪ್ರಯಾಣ ಬೆಳೆಸಿದ ಆಲ್ ಇಂಡಿಯಾ ಕಿಸಾನ್ ಸಭಾ ಕಾರ್ಯಕರ್ತರು

ಸುಮಾರು 15,000 ರೈತರು ನಿನ್ನೆಯೇ ನಾಸಿಕ್​ನಿಂದ ಮುಂಬೈಗೆ ವಾಹನದ ಮೂಲಕ ಪ್ರಯಾಣ ಆರಂಭಿಸಿದ್ದರು. ಗಾಲ್ಫ್ ಕ್ಲಬ್ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ಪ್ರಯಾಣದಲ್ಲಿ ನೂರಾರು ಟೆಂಪೋ ಹಾಗೂ ಇತರ ವಾಹನಗಳು ಭಾಗವಹಿಸಿವೆ.

  • TV9 Web Team
  • Published On - 18:50 PM, 24 Jan 2021
ಆಲ್ ಇಂಡಿಯಾ ಕಿಸಾನ್ ಸಭಾ ಕಾರ್ಯಕರ್ತರ ಪಾದಯಾತ್ರೆ

ಮುಂಬೈ: ಮಹಾರಾಷ್ಟ್ರ ನಾಸಿಕ್​ನ, ಆಲ್ ಇಂಡಿಯಾ ಕಿಸಾನ್ ಸಭಾ ಮತ್ತು ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಾಗಿ ಇಂದು (ಭಾನುವಾರ) ಮುಂಬೈಯತ್ತ ಹೆಜ್ಜೆ ಹಾಕಿದ್ದಾರೆ.

ರೈತ ಪರ ಚಳುವಳಿಯ ಪತಾಕೆಗಳು, ಬ್ಯಾನರ್​ಗಳನ್ನು ಹಿಡಿದಿರುವ ಜನರು, ನಾಸಿಕ್​ದಿಂದ ಮುಂಬೈಗೆ ಸುಮಾರು 180 ಕಿಲೋ ಮೀಟರ್​ಗಳ ದೂರವನ್ನು ಕ್ರಮಿಸಲು, ಸಾಗರೋಪಾದಿಯಲ್ಲಿ ನಡೆಯುತ್ತಿದ್ದಾರೆ. ಈಗ ಮುಂಬೈಗೆ ಹೊರಟಿರುವ ರೈತರು ಬಳಿಕ ಅಲ್ಲಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆ ಮೂಲಕ, ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಬಲ ತುಂಬಲಿದ್ದಾರೆ.

ಸುಮಾರು 15,000 ರೈತರು ನಿನ್ನೆಯೇ ನಾಸಿಕ್​ನಿಂದ ಮುಂಬೈಗೆ ವಾಹನದ ಮೂಲಕ ಪ್ರಯಾಣ ಆರಂಭಿಸಿದ್ದರು. ಗಾಲ್ಫ್ ಕ್ಲಬ್ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ಪ್ರಯಾಣದಲ್ಲಿ ನೂರಾರು ಟೆಂಪೋ ಹಾಗೂ ಇತರ ವಾಹನಗಳು ಭಾಗವಹಿಸಿವೆ.

ಕೇಂದ್ರದ ಹೊಸ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದೆ. ನಾವು ಅದನ್ನು ವಿರೋಧಿಸಲು ಈಗ ಮುಂಬೈ ತಲುಪಬೇಕಿದೆ. ಬಳಿಕ, ಜನವರಿ 26ಕ್ಕೆ ದೆಹಲಿ ತಲುಪುವಂತೆ ಮುಂಬೈನಿಂದ ಹೊರಡಲಿದ್ದೇವೆ. ಮಹಾರಾಷ್ಟ್ರದ ಸುಮಾರು 23 ಜಿಲ್ಲೆಗಳ ರೈತಪ್ರತಿನಿಧಿಗಳು ಈ ಚಳುವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ನಾಸಿಕ್​ನಿಂದ ಪ್ರಯಾಣ ಬೆಳೆಸಿರುವ ರೈತರೊಬ್ಬರು ANI ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಆಜಾದ್ ಮೈದಾನದಲ್ಲಿ ನಡೆಯಲಿರುವ ರೈತಪ್ರತಿನಿಧಿಗಳ ರ್‍ಯಾಲಿಯಲ್ಲಿ ಚಳುವಳಿಗಾರರು ಭಾಗವಹಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಆ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 26ರಂದು ನಡೆಯಲಿರುವ ‘ಕಿಸಾನ್ ಗಣತಂತ್ರ ಪರೇಡ್’ ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ರೈತರು ಆಗಮಿಸಲಿದ್ದಾರೆ. ಪಂಜಾಬ್, ಹರ್ಯಾಣ, ರಾಜಸ್ಥಾನ ಭಾಗದ ರೈತರು ಈಗಾಗಲೇ ಟಿಕ್ರಿ ಗಡಿಭಾಗ ತಲುಪಿದ್ದಾರೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್​ದಿಂದ ಸುಮಾರು 25,000 ಟ್ರಾಕ್ಟರ್​ಗಳು ಕಿಸಾನ್ ಪರೇಡ್​ನಲ್ಲಿ ಭಾಗವಹಿಸಲಿರುವ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಾಹಿತಿ ನೀಡಿದ್ದಾರೆ.

ರೈತರ ಅಹವಾಲು ಆಲಿಸಲು ನೇಮಿಸಿದ್ದ ಸಮಿತಿಗೆ ಅವಹೇಳನ: ಸುಪ್ರೀಂಕೋರ್ಟ್​ ಕೆಂಡಾಮಂಡಲ