ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೆ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ.. : ಬಾಂಬೆ ಹೈಕೋರ್ಟ್ ತೀರ್ಪು
ಆರೋಪಿಯು ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕ ಹೊಂದಲಿಲ್ಲ. ಹಾಗಾಗಿ ಈ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮುಂಬೈ: ಕೇವಲ ದೇಹವನ್ನು ತಡವುವುದು, ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಲೈಂಗಿಕ ಉದ್ದೇಶವನ್ನಿಟ್ಟುಕೊಂಡು ನೇರವಾಗಿ ದೇಹಸಂಪರ್ಕ ಮಾಡುವುದು, ಚರ್ಮದಿಂದ ಚರ್ಮಕ್ಕೆ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯ ಎಂದು ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ತೀರ್ಪು ನೀಡಿದೆ.
ಒಬ್ಬ ಅಪ್ರಾಪ್ತೆ ಬಟ್ಟೆ ಧರಿಸಿಕೊಂಡಿದ್ದಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದರೆ ಅಥವಾ ಅವರ ಕೈ ಎದೆಗೆ ತಾಗಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಅಪ್ರಾಪ್ತೆ ಧರಿಸಿದ್ದ ಬಟ್ಟೆಯನ್ನು ತೆಗೆದು ಸ್ಪರ್ಶಿಸಿದರೆ ಅಥವಾ ಬಟ್ಟೆಯೊಳಗಿಂದ ಕೈ ಹಾಕಿದರೆ ಅದನ್ನು ಲೈಂಗಿಕ ದೌರ್ಜನ್ಯ ಎನ್ನುವುದು ಸರಿ ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ, ಜೈಲುಪಾಲಾಗಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಪುಷ್ಪಾ ಗನೇಡಿವಾಲಾ ಹೀಗೆ ತೀರ್ಪು ಪ್ರಕಟಿಸಿದ್ದಾರೆ.
ಅಪ್ರಾಪ್ತೆ ಜತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು POCSOಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಧೀಶೆ ಪುಷ್ಪಾ, ಪ್ರಸ್ತುತ ಪ್ರಕರಣ ಹೀಗಿಲ್ಲ. ಇಲ್ಲಿ ಆರೋಪಿಯು 12 ವರ್ಷದ ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕ ಹೊಂದಲಿಲ್ಲ. ಹಾಗಾಗಿ ಈ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ. ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಕುಂದು ತರುವುದು) ಅನ್ವಯ ಆಗುತ್ತದೆ ಎಂದು ಹೇಳಿದ್ದಾರೆ.
ಈತ 12 ವರ್ಷದ ಬಾಲಕಿಯನ್ನು ಪೇರಲೆ ಹಣ್ಣಿನ ಆಮಿಷ ತೋರಿಸಿ ಈತ ಮನೆಗೆ ಕರೆದಿದ್ದ. ಕೆಲವು ಸಮಯದ ಬಳಿಕ ಆಕೆಯ ತಾಯಿ ಹುಡುಕುತ್ತ ಹೋದಾಗ ಆಕೆ ಅಳುತ್ತ ಕುಳಿತಿದ್ದಳು. ಏನಾಯಿತು ಎಂದು ಕೇಳಿದಾಗ ಆಕೆ ಎಲ್ಲವನ್ನೂ ವಿವರಿಸಿದ್ದಳು. ನಂತರ ತಾಯಿ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ದೂರು ನೀಡಿದ್ದರು. ನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಸದ್ದಿಲ್ಲದೆ ತಯಾರಾಗುತ್ತಿದೆ ಬಿಜೆಪಿ ಪ್ರಣಾಳಿಕೆ