ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರಿಂದ ಶುಭಾಶಯ

#DeshKiBeti ಎಂಬ ಹ್ಯಾಷ್​ಟ್ಯಾಗ್​ನ್ನು ಬಳಸಿ ಟ್ವೀಟ್ ಮಾಡಿರುವ ಮೋದಿ, ದೇಶದ ಮಗಳಿಗೆ ನಾವು ಗೌರವ ಸೂಚಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಲಿಂಗ ಸಂವೇದನೆ ಹಾಗೂ ಸಂಪೂರ್ಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶ್ರಮಿಸಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರಿಂದ ಶುಭಾಶಯ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Edited By:

Updated on: Apr 06, 2022 | 8:44 PM

ದೆಹಲಿ: ಭಾರತದ ಪ್ರತಿಯೊಬ್ಬ ಬಾಲಕಿಯೂ ಗೌರವಯುತವಾದ ಹಾಗೂ ಎಲ್ಲ ಅವಕಾಶಗಳನ್ನು ದಕ್ಕಿಸಿಕೊಳ್ಳಲು ಮುಕ್ತ ಅವಕಾಶವಿರುವ ಬದುಕನ್ನು ಪಡೆಯುವಂತೆ ನೋಡಿಕೊಳ್ಳಬೇಕು ಎಂದು ದೇಶದ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಹೆಣ್ಣು ಮಗು ದಿನವಾದ ಇಂದು (ಜ.24), ಲಿಂಗ ಸಮಾನತೆ ವಿಚಾರವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಟ್ವೀಟ್ ಮೂಲಕ ಮೋದಿ ಜನರಿಗೆ ಮಾಹಿತಿ ನೀಡಿದ್ದಾರೆ.

#DeshKiBeti ಎಂಬ ಹ್ಯಾಷ್​ಟ್ಯಾಗ್​ನ್ನು ಬಳಸಿ ಟ್ವೀಟ್ ಮಾಡಿರುವ ಮೋದಿ, ದೇಶದ ಮಗಳಿಗೆ ನಾವು ಗೌರವ ಸೂಚಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಲಿಂಗ ಸಂವೇದನೆ ಹಾಗೂ ಸಂಪೂರ್ಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶ್ರಮಿಸಿದೆ ಎಂದು ಬರೆದುಕೊಂಡಿದ್ದಾರೆ. ಇದು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನರನ್ನು ಅಭಿನಂದಿಸಲು ಸೂಕ್ತ ಸಮಯ ಎಂದೂ ಟ್ವೀಟ್ ಮಾಡಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಬಾಲಕಿಯರ ಸಾಧನೆಯನ್ನು ಪ್ರಧಾನಿ ಸ್ಮರಿಸಿಕೊಂಡಿದ್ದಾರೆ.

ಮಹಿಳಾ ಸಾಧಕಿಯರನ್ನು ಉದ್ದೇಶಿಸಿ, ಹಲವು ರಾಜಕೀಯ ನಾಯಕರು ಟ್ವೀಟ್ ಮಾಡಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಸ್ವಾತಿ ರಾವಲ್ ಅವರ ಭಾವಚಿತ್ರಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಕೊವಿಡ್-19 ಸಂದರ್ಭದಲ್ಲಿ ರೋಮ್​ನಲ್ಲಿ ಸಿಲುಕಿ ಹಾಕಿಕೊಂಡಿದ್ದ 263 ಪ್ರಯಾಣಿಕರನ್ನು ಯಶಸ್ವಿಯಾಗಿ ಕರೆತಂದಿದ್ದ ಸ್ವಾತಿ ರಾವಲ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, ಬಾಲಕಿಯರೊಂದಿಗೆ ಇರುವ ಭಾವಚಿತ್ರಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. #DeshKiBeti ಹ್ಯಾಷ್​ಟ್ಯಾಗ್ ಬಳಸಿ, ಮಹಿಳಾ ಶಿಕ್ಷಣ, ಅಭಿವೃದ್ಧಿ, ಬಾಲಕಿಯರ ಕನಸು, ಆಶಯಗಳನ್ನು ಯಶಸ್ವಿಗೊಳಿಸುವ ವಿಚಾರವನ್ನು ಬರೆದುಕೊಂಡಿದ್ದಾರೆ.

#BetiBachaoBetiPadhao ಹ್ಯಾಷ್​ಟ್ಯಾಗ್ ಬಳಸಿರುವ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್, ಶಕ್ತಿಶಾಲಿ ನವ ಭಾರತಕ್ಕಾಗಿ ದೇಶದ ಬಾಲಕಿಯರನ್ನು ಬಲಗೊಳಿಸಿ ಎಂದು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ, ತಮ್ಮ ಮಗಳ ಜೊತೆಗೆ ಇರುವ ಫೊಟೊ ಹಂಚಿಕೊಂಡು ಅಮ್ಮ-ಮಗಳ ಬಾಂಧವ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಈ ಬಾಂಧವ್ಯವನ್ನು ದಿನವೂ ಆಚರಿಸಿ. ಮಗಳು ಅಂದರೆ ಸೆಲ್ಫೀ ಪಾರ್ಟ್​ನರ್, ಆಪ್ತ ಸ್ನೇಹಿತೆ, ಡ್ರಾಮಾ ಜೊತೆಗಾರ್ತಿ, ನೋವು-ತೊಂದರೆಗಳ ಮರೆಸುವಾಕೆ, ಸಂತೋಷದ ಚಿಲುಮೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯನ್ನು ಜ.24ರಂದು ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು 2008ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆರಂಭಿಸಿತು. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಹೊಸ ಅವಕಾಶಗಳನ್ನು ನೀಡಲು ಪ್ರೋತ್ಸಾಹಿಸುವ ಸಲುವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ರಾಷ್ಟ್ರೀಯ ಹೆಣ್ಣುಮಕ್ಕಳ‌ ದಿನ: ಕ್ಷಯ ರೋಗ ತಗುಲಿದ ಬಾಲಕಿಗೆ ದೊಡ್ಡಪ್ಪನೇ ಶತ್ರುವಾದ, ಅರಿವು ಮೂಡಿಸಲು ಮುಂದಾದ NGO..!

Published On - 4:55 pm, Sun, 24 January 21