ಜ.25ರಿಂದ ಲಭ್ಯವಾಗಲಿದೆ ಡಿಜಿಟಲ್ ವೋಟರ್ ಐಡಿ ಕಾರ್ಡ್
e-EPIC ಎಂಬುದು ಎಡಿಟ್ ಮಾಡಲಾಗದ, ಸ್ಥಳಾಂತರಿಸಲು ಅನುಕೂಲವಾದ, ಸುರಕ್ಷಿತವಾದ ಪಿಡಿಎಫ್ ದಾಖಲೆಯಾಗಿರಲಿದೆ. ಕ್ಯೂಆರ್ ಕೋಡ್, ಭಾವಚಿತ್ರ, ಕ್ರಮಸಂಖ್ಯೆಗಳು ಇದರಲ್ಲಿ ಇರಲಿದೆ.
ದೆಹಲಿ: ಚುನಾವಣಾ ಆಯೋಗವು, ಡಿಜಿಟಲ್ ವೋಟರ್ ಐಡಿ ಕಾರ್ಡ್ಗಳನ್ನು (e-EPIC) ಸೋಮವಾರದಿಂದ ವಿತರಿಸಲು ಉದ್ದೇಶಿಸಿದೆ. e-EPIC (Electronic Electoral Photo Identity Card) ರಾಷ್ಟ್ರೀಯ ಮತದಾರರ ದಿನವಾದ ಜ.25ರಿಂದ ಅಧಿಕೃತವಾಗಿ ಆರಂಭಿಸಲು ಚುನಾವಣಾ ಆಯೋಗ ಸಿದ್ಧವಾಗಿದೆ.
e-EPIC ಎಂಬುದು ಎಡಿಟ್ ಮಾಡಲಾಗದ, ಸ್ಥಳಾಂತರಿಸಲು ಅನುಕೂಲವಾದ, ಸುರಕ್ಷಿತವಾದ ಪಿಡಿಎಫ್ ದಾಖಲೆಯಾಗಿರಲಿದೆ. ಕ್ಯೂಆರ್ ಕೋಡ್, ಭಾವಚಿತ್ರ, ಕ್ರಮಸಂಖ್ಯೆಗಳು ಇದರಲ್ಲಿ ಇರಲಿದೆ. ಡಿಜಿಟಲ್ ವೋಟರ್ ಐಡಿ ಕಾರ್ಡ್, e-EPIC ಅನ್ನು ಮೊಬೈಲ್ನಲ್ಲಿ, ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿ ಸಂಗ್ರಹಿಸಿಡಬಹುದಾಗಿದೆ. ಸಾಮಾನ್ಯ ವೋಟರ್ ಐಡಿಗೆ ಹೆಚ್ಚುವರಿಯಾಗಿ ಈ ಡಿಜಿಟಲ್ ವೋಟರ್ ಐಡಿ ಇರಲಿದೆ.
ಡಿಜಿಟಲ್ ವೋಟರ್ ಐಡಿ ಕಾರ್ಡ್ ಅನ್ನು ಸಾಮಾನ್ಯ ವೋಟರ್ ಐಡಿಗಿಂತ ವೇಗವಾಗಿ ನಾವು ಪಡೆದುಕೊಳ್ಳಬಹುದು. ವೋಟರ್ ಐಡಿಗೆ ಸಮಾನವಾಗಿ, ಡಿಜಿಟಲ್ ವೋಟರ್ ಐಡಿ ಕೂಡ ಅಧಿಕೃತ ದಾಖಲೆಯಾಗಿರಲಿದೆ. e-EPICನ್ನು ಪ್ರಿಂಟ್ ತೆಗೆದು ಚುನಾವಣೆಯ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ.
ಡಿಜಿಟಲ್ ವೋಟರ್ ಐಡಿಯನ್ನು ಡಿಜಿ ಲಾಕರ್ ಅಪ್ಲಿಕೇಷನ್ನಲ್ಲಿ ಇಟ್ಟುಕೊಳ್ಳಬಹುದು ಅಥವಾ ಪ್ರಿಂಟ್ ತೆಗೆದು, ಲ್ಯಾಮಿನೇಷನ್ ಕೂಡ ಮಾಡಿಕೊಳ್ಳಬಹುದು. ಇದರಿಂದ ಮತದಾರರಿಗೆ ವೋಟರ್ ಐಡಿ ಸಂಗ್ರಹ ಮತ್ತು ಬಳಕೆಗೆ ಸಹಾಯವಾಗಲಿದೆ. e-EPIC ಯೋಜನೆಯು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತವು ಜನವರಿ 25ರಿಂದ 31ರ ವರೆಗೆ ಇರಲಿದೆ. ಎರಡನೇ ಹಂತವು ಫೆಬ್ರವರಿ 1ರಿಂದ ಆರಂಭಗೊಳ್ಳಲಿದೆ.
ವೋಟರ್ ಐಡಿಗೆ ಅರ್ಜಿ ಸಲ್ಲಿಸಿರುವ ಹಾಗೂ ತಮ್ಮ ಮೊಬೈಲ್ ನಂಬರ್ ದಾಖಲಿಸಿಕೊಂಡಿರುವ (ಫಾರ್ಮ್ 6) ಎಲ್ಲಾ ಹೊಸ ಮತದಾರರು e-EPIC ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ತಮ್ಮ ಮೊಬೈಲ್ ನಂಬರ್ ದೃಢೀಕರಿಸಿಕೊಳ್ಳುವ ಮೂಲಕ ಈ ಕಾರ್ಯ ಪೂರ್ಣಗೊಳಿಸಬಹುದಾಗಿದೆ. ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಸಲ್ಲಿಸಿರುವ ಮೊಬೈಲ್ ನಂಬರ್ ಈ ಹಿಂದೆ ಭಾರತೀಯ ಚುನಾವಣಾ ಆಯೋಗದ ಪಟ್ಟಿಯಲ್ಲಿ ದಾಖಲಾಗಿರಬಾರದು.
ಈ ಬಾರಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. e-EPICನ್ನು https://nvsp.in/ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಸದ್ದಿಲ್ಲದೆ ತಯಾರಾಗುತ್ತಿದೆ ಬಿಜೆಪಿ ಪ್ರಣಾಳಿಕೆ
Published On - 4:03 pm, Sun, 24 January 21