ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಸದ್ದಿಲ್ಲದೆ ತಯಾರಾಗುತ್ತಿದೆ ಬಿಜೆಪಿ ಪ್ರಣಾಳಿಕೆ
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿ, ಕೆಲಸ ಮಾಡುತ್ತಿರುವ ಬಿಜೆಪಿ, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಚುನಾವಣಾ ಪ್ರಣಾಳಿಕೆಗೂ ಕೆಲಸ ಮಾಡುತ್ತಿದೆ.
ಕೋಲ್ಕತ್ತಾ: ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣಾ ಆಯೋಗವು, ಫೆಬ್ರವರಿ ಮೊದಲ ವಾರದಲ್ಲಿ ಚುನಾವಣಾ ದಿನಾಂಕವನ್ನು ಪ್ರಕಟಿಸಲಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರದಲ್ಲಿ ಅಧಿಕಾರ ಹೊತ್ತಿರುವ ಬಿಜೆಪಿ ಪಕ್ಷ ಶತಾಯಗತಾಯ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾದು ಕುಳಿತಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿ, ಕೆಲಸ ಮಾಡುತ್ತಿರುವ ಬಿಜೆಪಿ, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಪಶ್ಚಿಮ ಬಂಗಾಳ ಭೇಟಿ ನೀಡಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಮೋದಿ-ದೀದಿ ಗುದ್ದಾಟ ಆರಂಭವಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಪಕ್ಷ, ಚುನಾವಣಾ ಪ್ರಣಾಳಿಕೆ ತಯಾರಿಯ ಸಿದ್ಧತೆಯಲ್ಲಿದೆ.
ಚುನಾವಣಾ ಪ್ರಣಾಳಿಕೆ ತಯಾರಿಯ ವಿಚಾರದಲ್ಲಿ ಬಿಜೆಪಿ, ಕಳೆದ ಒಂದು ತಿಂಗಳಿನಿಂದ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ನಿರುದ್ಯೋಗ, ಭ್ರಷ್ಟಾಚಾರ, ಕೈಗಾರಿಕೆಗಳಿಗೆ ವಿರೋಧ, ಆರೋಗ್ಯ ವ್ಯವಸ್ಥೆಯಲ್ಲಿನ ಸಮಸ್ಯೆ ಮುಂತಾದ ವಿಚಾರಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಿದೆ. ರಾಜ್ಯದ ಜನರು ಹೆಚ್ಚು ಗಮನ ಹರಿಸಿರುವ ಈ ವಿಚಾರಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಗೂ ಸೇರಿಸಿಕೊಂಡಿದೆ.
ಬಿಜೆಪಿ ಪ್ರಣಾಳಿಕೆ ತಯಾರಿಸುತ್ತಿರುವ ಸಮಿತಿಯು, ಪಶ್ಚಿಮ ಬಂಗಾಳ ರಾಜ್ಯಾದ್ಯಂತ ವಿಚಾರಗಳನ್ನು ಕಲೆ ಹಾಕುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ, ನಗರಗಳಿಗೆ ಹೊಂದಿಕೊಂಡಂತೆ ಹಲವು ತಂಡಗಳನ್ನು ರಚಿಸಿ ಆ ಮೂಲಕ ಮಾಹಿತಿ ಪ್ರಣಾಳಿಕೆಯ ವಿಷಯಗಳನ್ನು ಹೊಂದಿಸಲಾಗುತ್ತಿದೆ. ಈ ತಂಡಗಳು ವಿವಿಧ ಹೂಡಿಕೆದಾರರನ್ನು ಒಟ್ಟಾಗಿಸಿ ಸಭೆ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಇಂದು ಸಂಜೆಯ ಸಭೆ ಹಾಗೂ ಮಾತುಕತೆ (‘Aaj ker sondhai aalap o addai’) ಎಂದು ಹೆಸರಿಸಲಾಗಿದೆ. ಪ್ರತಿನಿತ್ಯ ಸಂಜೆ, ತಂಡವು 100ರಿಂದ 150 ಜನರನ್ನು ಸೇರಿಸಿ ಈ ಸಭೆ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಅನುಪಮ್ ಹಜ್ರಾ ಮಾಹಿತಿ ನೀಡಿದ್ದಾರೆ.
ಆ ಮೂಲಕ, ಪ್ರಸ್ತುತ ಜನರ ಆದ್ಯತೆಗಳನ್ನು, ಬೇಕು-ಬೇಡಗಳನ್ನು, ಸವಾಲುಗಳನ್ನು ತಂಡವು ಗಮನಿಸುತ್ತಿದೆ. ಪಶ್ಚಿಮ ಬಂಗಾಳದ ಸರ್ಕಾರಿ ನೌಕರರು, ಶಿಕ್ಷಕರು, ರೈತರು, ದಿನಗೂಲಿ ಕಾರ್ಮಿಕರು ಮತ್ತು ಇತರ ಜನಸಾಮಾನ್ಯರು ಸಭೆಯಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಮತ್ತು ಅಂಥಾ ಪ್ರದೇಶದಲ್ಲೇ ಸಭೆ ಆಯೋಜಿಸಲಾಗುತ್ತಿದೆ. ಎಲ್ಲಾ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ವಿಮರ್ಶೆ, ವಿಶ್ಲೇಷಣೆ ನಡೆಸಿದ ಬಳಿಕ, ಚುನಾವಣಾ ಪ್ರಣಾಳಿಕೆಯ ಮುಖ್ಯ ಅಂಶಗಳನ್ನು ಹಾಗೂ ಉದ್ದೇಶವನ್ನು ಅಂತಿಮಗೊಳಿಸುವ ಬಗ್ಗೆ ಪಕ್ಷದ ಮೂಲಗಳು ಮಾಹಿತಿ ನೀಡಿವೆ.
Published On - 1:36 pm, Sun, 24 January 21