ಅಮೆರಿಕಕ್ಕೆ ಗಿಫ್ಟ್ ಕಳಿಸಬೇಕಾ? ಆ. 25ರಿಂದ ಭಾರತದಿಂದ ಯುಎಸ್​ಗೆ ಹೋಗುವ ಪಾರ್ಸೆಲ್‌ ಸೇವೆ ಸ್ಥಗಿತ

ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ ಎಂಬ ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಒಟ್ಟು ಶೇ. 50ರಷ್ಟು ವ್ಯಾಪಾರ ಆಮದು ಸುಂಕ ವಿಧಿಸಿದ್ದರು. ಈ ಸುಂಕದ ಅಡಿಯಲ್ಲಿ ಹೊಸ ಕಸ್ಟಮ್ಸ್ ನಿಯಮಗಳು ಜಾರಿಗೆ ಬರುತ್ತಿದ್ದಂತೆ ಭಾರತ ಅಮೆರಿಕಕ್ಕೆ ಪಾರ್ಸೆಲ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಆಗಸ್ಟ್ 25ರಿಂದ ಭಾರತದಿಂದ ಅಮೆರಿಕಕ್ಕೆ ಪಾರ್ಸೆಲ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸಲಾಗುವುದು.

ಅಮೆರಿಕಕ್ಕೆ ಗಿಫ್ಟ್ ಕಳಿಸಬೇಕಾ? ಆ. 25ರಿಂದ ಭಾರತದಿಂದ ಯುಎಸ್​ಗೆ ಹೋಗುವ ಪಾರ್ಸೆಲ್‌ ಸೇವೆ ಸ್ಥಗಿತ
India Post

Updated on: Aug 23, 2025 | 5:35 PM

ನವದೆಹಲಿ, ಆಗಸ್ಟ್ 23: ಭಾರತದ ಅಂಚೆ ಇಲಾಖೆ (India Post) ಆಗಸ್ಟ್ 25ರಿಂದ ಅಮೆರಿಕಕ್ಕೆ (Unite States Tariff) ಕಳುಹಿಸುವ ಎಲ್ಲಾ ರೀತಿಯ ವಸ್ತುಗಳ ಬುಕಿಂಗ್ ಅನ್ನು ಸ್ಥಗಿತಗೊಳಿಸಲಿದೆ. ಪತ್ರಗಳು, ದಾಖಲೆಗಳು ಮತ್ತು 100 ಡಾಲರ್ ವರೆಗಿನ ಮೌಲ್ಯದ ಉಡುಗೊರೆ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಪಾರ್ಸಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಆಗಸ್ಟ್ 29ರಿಂದ 100 ಡಾಲರ್ ಮೇಲಿನ ಪ್ರತಿಯೊಂದು ಅಂತಾರಾಷ್ಟ್ರೀಯ ಅಂಚೆ ವಸ್ತುವು ಕಸ್ಟಮ್ಸ್ ಸುಂಕವನ್ನು ಒಳಗೊಳ್ಳಲಿದೆ. ಹೀಗಾಗಿ, 100 ಡಾಲರ್ ವರೆಗಿನ ಉಡುಗೊರೆಗಳ ಪಾರ್ಸೆಲ್​ಗೆ ಮಾತ್ರ ವಿನಾಯಿತಿ ನೀಡಲಾಗುವುದು ಎಂದು ಅಂಚೆ ಇಲಾಖೆ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಅಮೆರಿಕ ಸರ್ಕಾರದ ಇತ್ತೀಚಿನ ಸುಂಕದ ಕ್ರಮಗಳ ನಂತರ ಅಂಚೆ ಇಲಾಖೆಯು ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಜುಲೈ 30ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ನಿಯಮಗಳಿಗೆ ಸಹಿ ಹಾಕಿದ್ದರು. ಇದುವರೆಗೂ 800 ಡಾಲರ್ ವರೆಗಿನ ಸರಕುಗಳಿಗೆ ಸುಂಕ ಮುಕ್ತ ಸೇವೆಯಿತ್ತು. ಆದರೆ, ಇನ್ನುಮುಂದೆ ಅದು 100 ಡಾಲರ್​​ಗೆ ಇಳಿಕೆಯಾಗಲಿದೆ. ಆ. 29ರಿಂದ ಅಮೆರಿಕಕ್ಕೆ ಸಾಗಿಸಲಾಗುವ ಎಲ್ಲಾ ವಸ್ತುಗಳು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (IEEPA) ಸುಂಕ ಚೌಕಟ್ಟಿನ ಅಡಿಯಲ್ಲಿ ಕಸ್ಟಮ್ಸ್ ಸುಂಕಗಳನ್ನು ಒಳಗೊಂಡಿರುತ್ತವೆ. 100 ಡಾಲರ್ ವರೆಗಿನ ಉಡುಗೊರೆಗಳು ಮಾತ್ರ ಸುಂಕ-ವಿನಾಯಿತಿಯಾಗಿ ಉಳಿಯುತ್ತವೆ.

ಇದನ್ನೂ ಓದಿ: ಭಾರತ, ಚೀನಾ ಏಷ್ಯಾದ ಡಬಲ್ ಎಂಜಿನ್‌ಗಳು; ಟ್ರಂಪ್ ಸುಂಕದ ವಿರುದ್ಧ ಭಾರತಕ್ಕೆ ಬೀಜಿಂಗ್ ಬೆಂಬಲ


ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರುವ ಯುಎಸ್ ಸುಂಕ ನಿಯಮಗಳಲ್ಲಿ ಬದಲಾವಣೆಗಳನ್ನು ಅನುಸರಿಸಿ ಆಗಸ್ಟ್ 25ರಿಂದ ಅಮೆರಿಕಕ್ಕೆ ಹೆಚ್ಚಿನ ಅಂಚೆ ಸರಕುಗಳನ್ನು ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಅಂಚೆ ಇಲಾಖೆ ಘೋಷಿಸಿದೆ. 800 ಅಮೆರಿಕನ್ ಡಾಲರ್ ವರೆಗಿನ ಸರಕುಗಳಿಗೆ ಸುಂಕ-ಮುಕ್ತ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ಅಮೆರಿಕ ಜುಲೈ 30ರಂದು ಹೊರಡಿಸಿತು. ಈ ಆದೇಶದ ಪ್ರಕಾರ, ಯುಎಸ್ ಕಸ್ಟಮ್ಸ್ ಅನುಮೋದಿಸಿದ ಅಂತಾರಾಷ್ಟ್ರೀಯ ವಾಹಕಗಳು ಮಾತ್ರ ಅಂಚೆ ಸಾಗಣೆಗಳ ಮೇಲೆ ಸುಂಕವನ್ನು ಸಂಗ್ರಹಿಸಬಹುದು ಮತ್ತು ಪಾವತಿಸಬಹುದು.

ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲೆ ಭಾರತವೂ ಶೇ.50ರಷ್ಟು ಸುಂಕ ವಿಧಿಸಬೇಕು; ಟ್ರಂಪ್ ವಿರುದ್ಧ ಶಶಿ ತರೂರ್ ಕಿಡಿ

ಇದಕ್ಕೆ ಅನುಗುಣವಾಗಿ, ಇಂಡಿಯಾ ಪೋಸ್ಟ್ ಆಗಸ್ಟ್ 25ರಿಂದ ಅಮೆರಿಕಕ್ಕೆ ಹೋಗುವ ಎಲ್ಲಾ ರೀತಿಯ ವಸ್ತುಗಳ ಬುಕಿಂಗ್ ಅನ್ನು ಸ್ಥಗಿತಗೊಳಿಸಲಿದೆ. ಪತ್ರಗಳು, ದಾಖಲೆಗಳು ಮತ್ತು 100 ಡಾಲರ್ ವರೆಗಿನ ಉಡುಗೊರೆ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ವಸ್ತುಗಳಿಗೆ ಇದು ಅನ್ವಯವಾಗಲಿದೆ. ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ರವಾನೆ ಮಾಡಲಾಗದ ಪಾರ್ಸೆಲ್‌ಗಳ ಅಂಚೆ ಮರುಪಾವತಿಯನ್ನು ಪಡೆಯಬಹುದು ಎಂದು ಅಂಚೆ ಇಲಾಖೆ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:26 pm, Sat, 23 August 25