ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಭೀಕರ ಸ್ವರೂಪಕ್ಕೆ ತಿರುಗುತ್ತಿದ್ದು, ಎಲ್ಲೆಡೆ ಸಾವು, ನೋವು, ಆತಂಕ ಹೆಚ್ಚಾಗುತ್ತಿದೆ. ಏತನ್ಮಧ್ಯೆ ದೇಶದಲ್ಲಿ ಕೊರೊನಾ ಹೊಸದೊಂದು ದಾಖಲೆ ನಿರ್ಮಿಸಿದ್ದು, 24 ಗಂಟೆಯ ಅವಧಿಯಲ್ಲಿ 3.14 ಲಕ್ಷ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ವಿಶ್ವದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಸೋಂಕು ದಾಖಲಾದ ದೇಶ ಎಂದು ಗುರುತಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ದಾಖಲಾದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1.59 ಲಕ್ಷದ ಗಡಿ ದಾಟಿದೆ.
ಸದ್ಯ ದೇಶದ ಆರೋಗ್ಯ ವ್ಯವಸ್ಥೆಯಲ್ಲೂ ಏರುಪೇರಾಗಿದ್ದು ಆಕ್ಸಿಜನ್ ಕೊರತೆ, ಐಸಿಯು ಕೊರತೆ, ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ, ರೆಮ್ಡೆಸಿವರ್ ಇಂಜೆಕ್ಷನ್ ಅಭಾವ ಎದುರಾಗಿದೆ. ಏಪ್ರಿಲ್ 15 ರಿಂದೀಚೆಗೆ ಪ್ರತಿನಿತ್ಯ ಸುಮಾರು 2 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿದ್ದು, ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ಹೋದಾಗ ಇನ್ನೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳಲಿವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ರಾಜ್ಯಗಳು ಕಳೆದ ಬಾರಿಯಂತೆಯೇ ಕೊರೊನಾ ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳ ಮೊರೆ ಹೋಗಿದ್ದು, ನಿಯಮ ಪಾಲಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.
ಇದಕ್ಕೂ ಮುನ್ನ ದೇಶವೊಂದರಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ 2,97,430 ಆಗಿದ್ದು, ಜನವರಿ ತಿಂಗಳಲ್ಲಿ ಅಮೆರಿಕಾ ಇದಕ್ಕೆ ಸಾಕ್ಷಿಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದಿರುವ ಭಾರತ 3.14 ಲಕ್ಷ ಹೊಸ ಪ್ರಕರಣಗಳಿಗೆ ತೆರೆದುಕೊಳ್ಳುವ ಮೂಲಕ ಆತಂಕವನ್ನು ಸೃಷ್ಟಿಸಿದೆ. ಈ ಹೊತ್ತಿನಲ್ಲಿ ಲಾಕ್ಡೌನ್ ಮಾಡುವುದು ದೇಶದ ಆರ್ಥಿಕತೆಯ ದೃಷ್ಟಿಯಿಂದ ಕಠಿಣ ನಿರ್ಧಾರವಾಗಿರುವುದರಿಂದ ಸರ್ಕಾರ ಕೂಡ ಏಕಾಏಕಿ ಲಾಕ್ಡೌನ್ ಮಾಡಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ ಜನರು ಎಚ್ಚರಿಕೆಯಿಂದ ಇದ್ದು ತಮ್ಮನ್ನು ತಾವು ಕೊರೊನಾದಿಂದ ರಕ್ಷಿಸಿಕೊಳ್ಳಬೇಕು, ಲಾಕ್ಡೌನ್ ಏನಿದ್ದರೂ ಕೊನೆಯ ಅಸ್ತ್ರ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಕೊರೊನಾದಿಂದ ತತ್ತರಿಸಿ ಹೋಗುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಎಡವಿದ್ದೆಲ್ಲಿ?
ದೇಶವ್ಯಾಪಿ ಕೊರೊನಾ 2ನೇ ಅಲೆ, ಸತ್ತವರಲ್ಲಿ ವೃದ್ಧರೇ ಹೆಚ್ಚು: ಐಸಿಎಂಆರ್