ಕೇರಳದಲ್ಲಿ ಆಮ್ಲಜನಕಕ್ಕೆ ಇಲ್ಲ ಬರ, ತಮಿಳುನಾಡು ಕರ್ನಾಟಕಕ್ಕೆ ಇಲ್ಲಿಂದ ಪೂರೈಕೆಯಾಗಲಿದೆ ವೈದ್ಯಕೀಯ ಆಕ್ಸಿಜನ್

Medical Oxygen: ಕೇರಳವು ತಮಿಳುನಾಡು, ಕರ್ನಾಟಕ ಮತ್ತು ಲಕ್ಷದ್ವೀಪಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಕಳೆದ ಏಳು ದಿನಗಳಿಂದ ನಾವು ತಮಿಳುನಾಡಿಗೆ ಸರಾಸರಿ 72 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಮತ್ತು ಕರ್ನಾಟಕಕ್ಕೆ 36 ಮೆಟ್ರಿಕ್ ಟನ್ ಪೂರೈಸುತ್ತಿದ್ದೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಕೇರಳದಲ್ಲಿ ಆಮ್ಲಜನಕಕ್ಕೆ ಇಲ್ಲ ಬರ, ತಮಿಳುನಾಡು ಕರ್ನಾಟಕಕ್ಕೆ ಇಲ್ಲಿಂದ ಪೂರೈಕೆಯಾಗಲಿದೆ ವೈದ್ಯಕೀಯ ಆಕ್ಸಿಜನ್
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Apr 22, 2021 | 11:32 AM

ಕೊಚ್ಚಿ: ಕೇರಳದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಇಲ್ಲ. ಕೊರೊನಾವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಇಲ್ಲಿನ ಆಸ್ಪತ್ರೆಗಳು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿವೆ ಎಂದು ಕೇರಳದಲ್ಲಿ ಆಕ್ಸಿಜನ್ ಪೂರೈಕೆಯ ನೋಡಲ್ ಅಧಿಕಾರಿ ಆರ್ ವೇಣುಗೋಪಾಲ್ ಹೇಳಿದ್ದಾರೆ. ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ ಆರ್ಗನೈಸೇಷನ್‌ (ಪಿಇಎಸ್‌ಒ) ಪ್ರಧಾನ ಉಪ ನಿಯಂತ್ರಣಾಧಿಕಾರಿ ವೇಣುಗೋಪಾಲ್ ಕೇರಳ ರಾಜ್ಯವು ತಮಿಳುನಾಡು ,ಕರ್ನಾಟಕ ಮತ್ತುಲಕ್ಷದ್ವೀಪಕ್ಕೆ ಆಕ್ಸಿಜನ್ ಪೂರೈಸಲಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 30ರ ವರೆಗೆ ಕೇರಳದಲ್ಲಿರುವ ಕೊವಿಡ್ ರೋಗಿಗಳು 56.35ಮೆಟ್ರಿಕ್ ಟನ್ ಆಕ್ಸಿಜನ್ ಬಳಸಲಿದ್ದಾರೆ. ಕೊವಿಡ್ ರೋಗವಿಲ್ಲದ ಇತರ ರೋಗಿಗಳು 47.16 ಮೆಟ್ರಿಕ್ ಟನ್ ಆಕ್ಸಿಜನ್ ಬಳಸುವ ಸಾಧ್ಯತೆ ಎಂದು ನಾವು ಅಂದಾಜಿಸಿದ್ದೇವೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ವೇಣುಗೋಪಾಲ್ ಹೇಳಿದ್ದಾರೆ.ಕಳೆದ ಮೂರು ದಿನಗಳ ಅಂಕಿ ಅಂಶಗಳನ್ನು ನೋಡಿದರೆ ಇಲ್ಲಿ ಆಕ್ಸಿಜನ್ ಕಡಿಮೆ ಬಳಕೆ ಆಗಿದೆ. ನಾವು ಏಪ್ರಿಲ್ 18ರಂದು 31.60 ಮೆಟ್ರಿಕ್ ಟನ್ ಬಳಕೆಯಾಗುವುದಾಗಿ ನಿರೀಕ್ಷಿಸಿದ್ದು, ಅಂದು ಬಳಕೆಯಾಗಿದ್ದು 29.58 ಮೆಟ್ರಿಕ್ ಟನ್. ಅಂದರೆ ನಿರೀಕ್ಷಿಸಿದ್ದಕ್ಕಿಂತ ಒಂದು ಟನ್ ಕಡಿಮೆ ಬಳಕೆ ಆಗಿದೆ.

ಕಳೆದ ಕೆಲವು ದಿನಗಳಲ್ಲಿ ಕೇರಳದಲ್ಲಿ ವೈದ್ಯಕೀಯ ಆಕ್ಸಿಜನ್ ಬಳಕೆಯು 66 ಮೆಟ್ರಿಕ್ ಟನ್​ನಿಂದ 75 ಮೆಟ್ರಿಕ್ ಟನ್​ಗಳಾಗಿ ಏರಿಕೆಯಾಗಿದೆ. ಇದು ಚಿಂತೆಗೀಡು ಮಾಡುವ ವಿಷಯವೇ. ಆದರೆ ನಾವು ಯಾವುದೇ ಕೊರತೆ ಬರದಂತೆ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಿದ್ಧರಾಗಿದ್ದೇವೆ ಎಂದಿದ್ದಾರೆ.

ಈಗ ಕೇರಳದಲ್ಲಿ 501 ಮೆಟ್ರಿಕ್ ಟನ್ ಗಳಷ್ಟು ವೈದ್ಯಕೀಯ ಆಕ್ಸಿಜನ್ ಸಂಗ್ರಹ ಇದೆ. 74.45 ಮೆಟ್ರಿಕ್ ಟನ್ ಆಕ್ಸಿಜನ್ ಇಲ್ಲಿ ಅಗತ್ಯವಿದೆ. ಪಾಲಕ್ಕಾಡ್​ನಲ್ಲಿರುವ ಆಕ್ಸಿಜನ್ ಸ್ಥಾವರದಲ್ಲಿ 1000 ಮೆಟ್ರಿಕ್ ಟನ್ ಸಂಗ್ರಹಿಸುವ ಸಾಮರ್ಥ್ಯವಿದೆ. ಇದು ನಮಗೆ ಸಾಕು.

ಕೇರಳದದಲ್ಲಿ ಆಕ್ಸಿಜನ್ ಉತ್ಪಾದಿಸುವ ಬೇರೆ ಬೇರೆ ಸ್ಥಾವರಗಳ ಬಗ್ಗೆ ವಿವರಿಸಿದ ವೇಣುಗೋಪಾಲ್, ಪಾಲಕ್ಕಾಡ್​ನಲ್ಲಿರುವ ಆಮ್ಲಜನಕ ಉತ್ಪಾದನಾ ಸ್ಥಾವರದಲ್ಲಿ ಪ್ರತಿದಿನ 149 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತದೆ. ಇಲ್ಲಿ ಈಗ 147 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಕೇರಳ ಮಿನರಲ್ಸ್ ಅಂಡ್ ಮೆಟಲ್ಸ್ ಸ್ಥಾವರದಲ್ಲಿ ಪ್ರತಿದಿನ 6 ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದ್ದು 50 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಪ್ರಾಕ್ಸೈರ್ ಲಿಂಡ್​ನಲ್ಲಿ50 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯವಿದೆ. ಇವುಗಳು ಆಸ್ಪತ್ರೆಗಳಿಗೆ ನೇರವಾಗಿ ಆಮ್ಲಜನಕ ಪೂರೈಸುತ್ತಿವೆ. ಪ್ರಸ್ತುತ ನಮ್ಮಲ್ಲಿ 1,100 ಮೆಟ್ರಿಕ್ ಟನ್ ಆಕ್ಸಿಜನ್ ಇದ್ದು, ಪ್ರತಿದಿನ 155 ಮೆಟ್ರಿಕ್ ಟನ್ ಉತ್ಪಾದಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಆಕ್ಸಿಜನ್ ಬೇಡಿಕೆಯನ್ನು ಇದು ಸರಿದೂಗಿಸಬಹುದು ಎಂಬ ನಿರೀಕ್ಷೆಯಿದೆ ಎಂದಿದ್ದಾರೆ.

ಕೇರಳವು ತಮಿಳುನಾಡು, ಕರ್ನಾಟಕ ಮತ್ತು ಲಕ್ಷದ್ವೀಪಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಕಳೆದ ಏಳು ದಿನಗಳಿಂದ ನಾವು ತಮಿಳುನಾಡಿಗೆ ಸರಾಸರಿ 72 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಮತ್ತು ಕರ್ನಾಟಕಕ್ಕೆ 36 ಮೆಟ್ರಿಕ್ ಟನ್ ಪೂರೈಸುತ್ತಿದ್ದೇವೆ. ನಾವು ಲಕ್ಷದ್ವೀಪಕ್ಕೂ ಸರಬರಾಜು ಮಾಡುತ್ತಿದ್ದೇವೆ.

ಆಮ್ಲಜನಕದ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯಗಳಲ್ಲಿ ಕೇರಳ ಕೂಡ ಒಂದು ಅಂತಾರೆ ವೇಣುಗೋಪಾಲ್. ನಾವು ಮಾರ್ಚ್ 2020 ರಿಂದ ಈ ಆಮ್ಲಜನಕದ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ಕೊವಿಡ್ ಬಿಕ್ಕಟ್ಟಿನ ಉತ್ತುಂಗದಲ್ಲಿದ್ದಾಗಲೂ ಈ ದಿನಗಳಲ್ಲಿ ನಾವು ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಹೊಂದಲು ಸಾಧ್ಯವಾಯಿತು. ಬೇಡಿಕೆ ಹೆಚ್ಚಾಗಿದ್ದರೂ ಸಹ ನಾವು ಮುಂಬರುವ ದಿನಗಳಲ್ಲಿ ಆಮ್ಲಜನಕ ಪೂರೈಸಲು ಸಾಧ್ಯವಾಗುತ್ತದೆ. ಕೇರಳದಲ್ಲಿ 32 ಆಸ್ಪತ್ರೆಗಳಿವೆ, ಅಲ್ಲಿ ಅವುಗಳು ಹೆಚ್ಚಿನ ಪ್ರಮಾಣದ ಆಮ್ಲಜನಕ ಸೌಲಭ್ಯವನ್ನು ಹೊಂದಿವೆ.

ಒಟ್ಟು ಆಮ್ಲಜನಕದ ಬಳಕೆಯನ್ನು ಹೋಲಿಸಿದರೆ, ಕೇರಳದಲ್ಲಿ ಕೊವಿಡ್ ಇಲ್ಲದಿರುವ ರೋಗಿಗಳು ಕೊವಿಡ್ ರೋಗಿಗಳಿಗಿಂತ ಹೆಚ್ಚಿನ ಆಮ್ಲಜನಕವನ್ನು ಸೇವಿಸುತ್ತಾರೆ. ಆದರೆ ಕಳೆದ ಏಳು ದಿನಗಳಲ್ಲಿ ಕೊವಿಡ್ ರೋಗಿಗಳಿಗಾಗಿ ಆಮ್ಲಜನಕದ ಬಳಕೆ ಅಧಿಕವಾಗಿದೆ. ಆದರೆ ಯಾವುದೇ ಪರಿಸ್ಥಿತಿ ಎದುರಿಸಲುನಾವು ಸಿದ್ಧರಿದ್ದೇವೆ. ಎಲ್ಲಾ 23 ಸ್ಥಾವರಗಳು 24×7 ಕಾರ್ಯನಿರ್ವಹಿಸುತ್ತಿವೆ. ಕೇರಳಕ್ಕೆ ಕೇಂದ್ರದಿಂದ ಆಮ್ಲಜನಕ ಹಂಚಿಕೆ ಈಗ ಆಗಿಲ್ಲ. ಯಾಕೆಂದರೆ ನಮ್ಮಲ್ಲಿ ಸಾಕಷ್ಟು ಉತ್ಪಾದನೆ ಇದೆ ಮತ್ತು ನಮಗೆ ಸಂಗ್ರಹದ ಸಾಮರ್ಥ್ಯವಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ಸರ್ಕಾರಿ ಆಸ್ಪತ್ರೆಗಳಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆಯಿಂದ ದಿನಕ್ಕೆ 1.5 ಟನ್ ಮೆಡಿಕಲ್​​ ಆಕ್ಸಿಜನ್​ ಪೂರೈಕೆ

(No shortage of medical oxygen in Kerala state supplies oxygen to Tamil Nadu Karnataka and Lakshadweep)

Published On - 11:15 am, Thu, 22 April 21