ಕರಾಚಿ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ದೆಹಲಿ ತಿರುಗೇಟು

ಕರಾಚಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ನವದೆಹಲಿಯ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ತೀವ್ರವಾಗಿ ತಿರಸ್ಕರಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪಾಕಿಸ್ತಾನದ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇತರರ ಮೇಲೆ ಗೂಬೆ ಕೂರಿಸುವ ಬದಲು ಪಾಕಿಸ್ತಾನವು ತನ್ನದೇ ಮಣ್ಣಿನಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಜಾಲಗಳನ್ನು ಧ್ವಂಸಗೊಳಿಸುವುದರತ್ತ ಗಮನ ಹರಿಸಬೇಕು ಎಂದು ಭಾರತ ಹೇಳಿದೆ. ಕರಾಚಿಯ ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲಿನ ಭೀಕರ ಉಗ್ರರ ದಾಳಿಯನ್ನು ತಡೆದಿರುವುದಾಗಿ ಪಾಕಿಸ್ತಾನಿ ಭದ್ರತಾ ಪಡೆಗಳು ಹೇಳಿಕೊಂಡ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆಯಿಂದ ಈ ಹೇಳಿಕೆ ಬಂದಿದೆ.

ಕರಾಚಿ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ದೆಹಲಿ ತಿರುಗೇಟು
Randhir Jaiswal
Image Credit source: PTI

Updated on: Jun 28, 2026 | 7:45 PM

ನವದೆಹಲಿ, ಜೂನ್ 28: ಪಾಕಿಸ್ತಾನದ ಕರಾಚಿಯಲ್ಲಿ ಇತ್ತೀಚೆಗೆ ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲೆ ನಡೆದ ದಾಳಿಯ ಹಿಂದೆ ನವದೆಹಲಿಯ ಕೈವಾಡವಿದೆ ಎಂಬ ಪಾಕಿಸ್ತಾನದ (Pakistan) ಆರೋಪವನ್ನು ಭಾರತ ತಳ್ಳಿಹಾಕಿದೆ. ಈ ಹೇಳಿಕೆ “ಆಧಾರರಹಿತ” ಎಂದು ಕರೆದಿರುವ ಭಾರತ ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದರತ್ತ ಇಸ್ಲಮಾಬಾದ್ ಗಮನ ಹರಿಸಬೇಕು ಎಂದು ಭಾರತ ಒತ್ತಾಯಿಸಿದೆ.

ಕರಾಚಿ ದಾಳಿಗೆ ಭಾರತವೇ ಕಾರಣ ಎಂದು ಬಿಂಬಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ವರದಿಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, “ಕರಾಚಿಯಲ್ಲಿ ನಡೆದ ಇತ್ತೀಚಿನ ಘಟನೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಪಾಕಿಸ್ತಾನದ ವರದಿಗಳನ್ನು ನಾವು ನೋಡಿದ್ದೇವೆ. ನಾವು ಅವುಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ” ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಕಿಸ್ತಾನವು ಇತರರತ್ತ ಬೆರಳು ತೋರಿಸುವುದನ್ನು ನಿಲ್ಲಿಸಬೇಕು. ಅದರ ಬದಲು ತನ್ನದೇ ಭೂಪ್ರದೇಶದೊಳಗೆ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳಬೇಕು ಎಂದು ಜೈಸ್ವಾಲ್ ಹೇಳಿದ್ದಾರೆ. “ಇತರರ ಮೇಲೆ ಗೂಬೆ ಕೂರಿಸುವ ಬದಲು ಪಾಕಿಸ್ತಾನವು ತನ್ನ ದೇಶದ ಒಳಗಡೆ ಕಣ್ಣು ಹಾಯಿಸುವುದು ಉತ್ತಮ. ತನ್ನ ಭೂಪ್ರದೇಶದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ವಿಶ್ವಾಸಾರ್ಹ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದನೆಯನ್ನು ರಾಜ್ಯ ನೀತಿಯನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿಯಿಂದ ಮುಕ್ತಿ ಪಡೆಯಬೇಕು” ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜೈಸ್ವಾಲ್ ಹೇಳಿದ್ದಾರೆ.


ಇದನ್ನೂ ಓದಿ: ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್

ಕರಾಚಿಯಲ್ಲಿ ಭಾರೀ ಶಸ್ತ್ರಸಜ್ಜಿತ ಉಗ್ರರು ಸಿಂಧ್ ರೇಂಜರ್ಸ್ ಕಾಂಪೌಂಡ್ ಮೇಲೆ ದಾಳಿ ನಡೆಸಿ, ನಾಲ್ವರು ಅರೆಸೇನಾ ಸಿಬ್ಬಂದಿಯನ್ನು ಬಲಿಪಡೆದ ಭೀಕರ ಗುಂಡಿನ ಚಕಮಕಿ ನಡೆದ ಮರುದಿನವೇ ಭಾರತ ಈ ಹೇಳಿಕೆ ನೀಡಿದೆ. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ಶನಿವಾರ ಸಂಜೆ ಕರಾಚಿಯ ಗುಲಿಸ್ತಾನ್-ಇ-ಜೌಹರ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್‌ನ ಭಿಟ್ಟೈ ವಿಂಗ್ ಪ್ರಧಾನ ಕಚೇರಿಗೆ ಉಗ್ರರು ನುಗ್ಗಿದಾಗ ಈ ದಾಳಿ ಸಂಭವಿಸಿದೆ. ದಾಳಿಕೋರರು ಮೊದಲು ಕಾಂಪೌಂಡ್‌ನ ಮುಖ್ಯ ಗೇಟ್‌ಗೆ ವಾಹನವನ್ನು ಡಿಕ್ಕಿ ಹೊಡೆಸಿ ನಂತರ ಒಳಗೆ ನುಗ್ಗಿ ಗ್ರೆನೇಡ್‌ಗಳನ್ನು ಎಸೆದಿದ್ದರಿಂದ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us