Coronavirus cases in India: ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣ ಪತ್ತೆ, 509 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Sep 02, 2021 | 11:29 AM

Covid 19: 47,092 ಪ್ರಕರಣಗಳಲ್ಲಿ ಕೇರಳವು ಅರ್ಧಕ್ಕಿಂತ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಕೇರಳದಲ್ಲಿ ಒಂದೇ ದಿನದಲ್ಲಿ 32,803 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರನೇ ತರಂಗದ ಭೀತಿಯ ನಡುವೆ ಕೇರಳದಲ್ಲಿ ಕಳೆದ ಕೆಲವು ವಾರಗಳಿಂದ ಕೊವಿಡ್ -19 ಉಲ್ಬಣವಾಗಿದೆ.

Coronavirus cases in India: ದೇಶದಲ್ಲಿ 47,092 ಹೊಸ ಕೊವಿಡ್ ಪ್ರಕರಣ ಪತ್ತೆ, 509 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ 47,092 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿರುವುದರಿಂದ ಭಾರತದ ಕೊವಿಡ್ -19  ಪ್ರಕರಣಗಳ ಸಂಖ್ಯೆ ಸತತ ಎರಡನೇ ದಿನ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಈ ಸಂಖ್ಯೆ ಬುಧವಾರಕ್ಕಿಂತ ಶೇಕಡಾ 12 ರಷ್ಟು ಹೆಚ್ಚಾಗಿದ್ದು, 41,965 ಪ್ರಕರಣಗಳನ್ನು ದಾಖಲಿಸಿದೆ. ಅದೇ ಅವಧಿಯಲ್ಲಿ 509 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆಯು ಏರಿಕೆಯನ್ನು ಕಂಡಿದ್ದು 439,529 ಕ್ಕೆ ತಲುಪಿದೆ.

47,092 ಪ್ರಕರಣಗಳಲ್ಲಿ ಕೇರಳವು ಅರ್ಧಕ್ಕಿಂತ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಕೇರಳದಲ್ಲಿ ಒಂದೇ ದಿನದಲ್ಲಿ 32,803 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರನೇ ತರಂಗದ ಭೀತಿಯ ನಡುವೆ ಕೇರಳದಲ್ಲಿ ಕಳೆದ ಕೆಲವು ವಾರಗಳಿಂದ ಕೊವಿಡ್ -19 ಉಲ್ಬಣವಾಗಿದೆ.


ಅಂಡಮಾನ್‌ನಲ್ಲಿ ಯಾವುದೇ ಹೊಸ ಕೊವಿಡ್ -19 ಪ್ರಕರಣಗಳಿಲ್ಲ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುರುವಾರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಕೇಂದ್ರಾಡಳಿತ ಪ್ರದೇಶವು ಈಗ ಆರು ಸಕ್ರಿಯ ಪ್ರಕರಣಗಳನ್ನು ಹೊಂದಿದೆ.7,431 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಮತ್ತು 129 ರೋಗಿಗಳು ಇಲ್ಲಿಯವರೆಗೆ ಸೋಂಕಿಗೆ ಬಲಿಯಾಗಿದ್ದಾರೆ. ಆಡಳಿತವು ಇದುವರೆಗೆ ಕೋವಿಡ್ -19 ಗಾಗಿ 4.90 ಲಕ್ಷ ಮಾದರಿಗಳನ್ನು ಪರೀಕ್ಷಿಸಿದೆ ಮತ್ತು 2.58 ಲಕ್ಷ ಜನರಿಗೆ ಲಸಿಕೆ ಹಾಕಿದೆ, ಅವರಲ್ಲಿ 1.05 ಲಕ್ಷ ಜನರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ ಎಂದು ಅದು ಹೇಳಿದೆ. ಇಲ್ಲಿ ಒಟ್ಟು 7,566 ಕೊವಿಡ್ ಪ್ರಕರಣಗಳಿವೆ. 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ವರದಿ ಮಾಡಿವೆ.

ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 32,803 ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 40,90,036 ಕ್ಕೆ ತಲುಪಿದೆ.  ಟೆಸ್ಟ್ ಪಾಸಿಟಿವಿಟಿ ದರವು ಶೇ 18.76 ಆಗಿದೆ. 173 ಸಾವುಗಳೊಂದಿಗೆ, ಸಾವಿನ ಸಂಖ್ಯೆ 20,961 ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ದಕ್ಷಿಣ ರಾಜ್ಯದಲ್ಲಿ 85 ಪ್ರತಿಶತದಷ್ಟು ಕೊವಿಡ್ ರೋಗಿಗಳು ಮನೆಯಲ್ಲಿ ಕ್ವಾರಂಟೈನ್ ಆಗಿರುವುದರಿಂದ, ಆರೋಗ್ಯ ಸಚಿವಾಲಯವು ದಿನನಿತ್ಯದ ಉಲ್ಬಣವನ್ನು ತಡೆಯಲು “ಸ್ಮಾರ್ಟ್ ಮತ್ತು ಕಾರ್ಯತಂತ್ರದ ಲಾಕ್‌ಡೌನ್” ಮೇಲೆ ಒತ್ತು ನೀಡಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ದೇಶದಲ್ಲಿನ ಅತಿಹೆಚ್ಚು ದೈನಂದಿನ ಪ್ರಕರಣಗಳನ್ನು ವರದಿ ಮಾಡುವಾಗ ಕೇರಳವು ಕೇಂದ್ರದ ಸಲಹೆಯನ್ನು ಅನುಸರಿಸುತ್ತಿಲ್ಲ, ನೆರೆಯ ರಾಜ್ಯಗಳು ಇದರ ಪರಿಣಾಮವನ್ನು ಅನುಭವಿಸುತ್ತಿವೆ ಎಂದು ಅಧಿಕಾರಿಗಳು ಒತ್ತಾಯಿಸಿದರು.
ಕೇರಳದಿಂದ ಹಿಂತಿರುಗಿದ ಸುಮಾರು 32 ವಿದ್ಯಾರ್ಥಿಗಳು ಕರ್ನಾಟಕದ ಕಾಲೇಜಿನಲ್ಲಿ ಕೊವಿಡ್ -19 ಪಾಸಿಟಿವ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಬುಧವಾರ ತಿಳಿಸಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ 18,386 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಕೊವಿಡ್ ಸಂಖ್ಯೆ 4,456 ರಷ್ಟು ಏರಿಕೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 64,69,332 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 183 ಸಾವುಗಳು ವರದಿಯಾಗಿವೆ.

6 ರಿಂದ 8 ನೇ ತರಗತಿಯ ಶಾಲೆಗಳು ಇಂದು ಗುಜರಾತ್‌ನಲ್ಲಿ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಪುನರಾರಂಭಗೊಂಡಿವೆ. ರಾಜ್ಯದ ಶಾಲೆಗಳು ತರಗತಿಗಳನ್ನು ಪುನರಾರಂಭಿಸಲು ಅನುಮತಿ ನೀಡಿದ್ದರೂ, ಈ ತರಗತಿಗಳಿಗೆ ನಡೆಯುತ್ತಿರುವ ಆನ್‌ಲೈನ್ ಪಾಠಗಳ ವ್ಯವಸ್ಥೆಯು ಮುಂದುವರಿಯುತ್ತದೆ. ಪ್ರಸ್ತುತ ರಾಜ್ಯದಲ್ಲಿ 6 ರಿಂದ 8 ನೇ ತರಗತಿಯಲ್ಲಿ ಸುಮಾರು 32 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 36 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 343 ಕ್ಕೆ ತಲುಪಿದೆ. ಅಧಿಕೃತ ಮಾಹಿತಿಯ ಪ್ರಕಾರ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ನಗರದಲ್ಲಿನ ಸಕ್ರಿಯ ಪ್ರಕರಣಗಳು ಈಗ ಶೇಕಡಾ 0.23 ರಷ್ಟಿದೆ.

ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳ ಶೇ 1.19 ರಷ್ಟಿದ್ದರೆ, ಚೇತರಿಕೆಯ ಪ್ರಮಾಣವು ಶೇ 97.48 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದಿನನಿತ್ಯದ ಪಾಸಿಟಿವಿಟಿ ದರವು ಈಗ 2.80 ಪ್ರತಿಶತದಷ್ಟಿದೆ.

ದೇಶದಲ್ಲಿ ನೀಡಲಾಗುವ  ಕೊವಿಡ್ -19 ಲಸಿಕೆ ಪ್ರಮಾಣಗಳು 66 ಕೋಟಿ ಗಡಿ ದಾಟಿದೆ. ಬುಧವಾರ ಸಂಜೆ 7 ಗಂಟೆಯವರೆಗೆ 69 ಲಕ್ಷ (69,42,335) ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಯಿತು. ಈ ವರ್ಷ ಜನವರಿ 16 ರಿಂದ ಭಾರತವು ಕೊವಿಡ್ -19 ವಿರುದ್ಧ ಅತಿದೊಡ್ಡ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ.

ಇದನ್ನೂ ಓದಿ: ವಿದೇಶಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ, ನೆಗೆಟಿವ್ ವರದಿ ಬಂದರೆ ಮಾತ್ರ ಮನೆಗೆ; ರಾಜ್ಯ ಸರ್ಕಾರ ಆದೇಶ

(India reports 47,092 Covid-19 fresh cases 509 people succumbing to the disease)

Published On - 10:20 am, Thu, 2 September 21