ರೋಮ್: ಇಟಲಿಯಲ್ಲಿ ನಡೆದ ಜಿ20 ಸಮಾವೇಶದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಅಭಿವೃದ್ಧಿ ಹೊಂದಿದ ಇತರ ದೇಶಗಳು ಹವಾಮಾನ ಬದಲಾವಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸುವಲ್ಲಿ ಭಾರತ ಪ್ರಭಾವ ಬೀರಿತು ಎಂದು ಈ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿರುವವರು ಹೇಳಿದ್ದಾರೆ.
ಜಾಗತಿಕ ತಾಪಮಾನವನ್ನು ಇನ್ನು 1.5 ಡಿಗ್ರಿ ಸೆಲ್ಷಿಯಸ್ನಷ್ಟಕ್ಕೆ ಮಿತಗೊಳಿಸಲು ಬದ್ಧತೆಯನ್ನು ಜಿ20 ನಾಯಕರು ಪ್ರದರ್ಶಿಸಿದರು. ಈ ಗುರಿಯನ್ನು ಮುಟ್ಟಲು ಸುಸ್ಥಿರತೆ ಮತ್ತು ಜವಾಬ್ದಾರಿಯುತ ಬಳಕೆ ಹಾಗೂ ಜವಾಬ್ದಾರಿಯುತ ಉತ್ಪಾದನೆಯೇ ನಮ್ಮ ಮುಂದಿರುವ ಸಾಧನಗಳು ಎಂದು ಎಲ್ಲರೂ ಒಪ್ಪಿಕೊಂಡರು.
ಝೀರೊ ಎಮಿಷನ್ ಬಗ್ಗೆ ಸಮಾವೇಶವು ಯಾವುದೇ ಘೋಷಣೆ ಮಾಡಲಿಲ್ಲ. ಸಮಾವೇಶಕ್ಕೆ ಮೊದಲೇ ಭಾರತವು ಈ ಘೋಷಣೆಯನ್ನು ತಿರಸ್ಕರಿಸಿತ್ತು. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಅಧಿವೇಶನದಲ್ಲಿಯೂ ಭಾರತ ತನ್ನ ನಿಲುವು ಪ್ರತಿಪಾದಿಸಿತ್ತು. ಸುಸ್ಥಿರ ಬಳಕೆ ಮತ್ತು ಜವಾಬ್ದಾರಿಯುತ ಉತ್ಪಾದನೆಯ ವಿಧಾನಗಳು ಸಹ ಸುಸ್ಥಿರ ಅಭಿವೃದ್ಧಿ ಗುರಿಯ ಭಾಗವೇ ಆಗಿವೆ. ಇದು ಅಭಿವೃದ್ಧಿ ಹೊಂದಿದ ದೇಶಗಳು ಐಷಾರಾಮಿ ಜೀವನಕ್ರಮಕ್ಕೆ ಹೆಚ್ಚು ಇಂಧನ ಬಳಸುವುದಕ್ಕೆ ಕಡಿವಾಣ ಬೀಳಬೇಕು ಎಂದು ಪ್ರತಿಪಾದಿಸುತ್ತದೆ.
ಭಾರತದ ರೈತರಿಗೂ ಈ ಬಾರಿ ದೊಡ್ಡ ಗೆಲುವು ಸಿಕ್ಕಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಬದುಕು ಸುಧಾರಿಸುವ ಬಗ್ಗೆ ಜಿ20 ದೇಶಗಳು ಬದ್ಧತೆ ಪ್ರದರ್ಶಿಸಿವೆ. ಕೇವಲ ಶ್ರೀಮಂತ ರೈತರ ಬಗ್ಗೆ ಮಾತ್ರವೇ ಅಲ್ಲ, ಅತಿಸಣ್ಣ ರೈತರ ಬದುಕಿನ ಬಗ್ಗೆಯೂ ಈ ಬಾರಿಯ ಸಮಾವೇಶದಲ್ಲಿ ಚರ್ಚೆಯಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಬದುಕು ಸುಧಾರಿಸಬೇಕು ಎಂದು ನಾಯಕರೂ ಒಪ್ಪಿಕೊಂಡರು ಭಾರತದ ಪ್ರತಿನಿಧಿಯಾಗಿದ್ದ ಪಿಯೂಷ್ ಗೋಯೆಲ್ ರೋಮ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿ20 ಸಮಾವೇಶದಲ್ಲಿ ಭಾರತದೊಂದಿಗೆ ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಸ್ಪಷ್ಟ ರಾಷ್ಟ್ರೀಯ ಯೋಜನೆಗಳು ಬೇಕು ಎಂದು ಕೋರಿದ್ದವು. ಅಂತರರಾಷ್ಟ್ರೀಯ ಸಹಕಾರ ಮತ್ತು ಬೆಂಬಲದೊಂದಿಗೆ ಅಲ್ಪಾವಧಿ, ಮಧ್ಯಮವಾಧಿ ಮತ್ತು ದೀರ್ಘಾವಧಿ ಗುರಿಗಳನ್ನು ಘೋಷಿಸಬೇಕು ಎಂದು ಕೋರಿದ್ದವು. ಪ್ರಧಾನಿ ನರೇಂದ್ರ ಮೋದಿ ಭಾರತ ನಿಯೋಗದ ನಾಯಕತ್ವ ವಹಿಸಿದ್ದರು. ಜಿ20 ಸಮಾವೇಶದ ಜೊತೆಜೊತೆಗೆ ಹಲವು ದ್ವಿಪಕ್ಷೀಯ ಸಭೆಗಳಲ್ಲಿಯೂ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಭಾರತಕ್ಕೂ ಆಹ್ವಾನಿಸಿದ್ದರು.
ಇದನ್ನೂ ಓದಿ: 2022ರ ಅಂತ್ಯದ ಹೊತ್ತಿಗೆ 5ಬಿಲಿಯನ್ ಡೋಸ್ ಕೊರೊನಾ ಲಸಿಕೆ ಉತ್ಪಾದನೆ: ಜಿ20 ನಾಯಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು
ಇದನ್ನೂ ಓದಿ: ರೋಮ್ನಲ್ಲಿ ಜಿ20 ನಾಯಕರ ಸಮಾಗಮ; ಶೃಂಗಸಭೆಯ ಪ್ರಾರಂಭದ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ