ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ನಾಮಕರಣ; ಹೊಸ ಹೆಸರಿನಿಂದ ವಾಸ್ತವ ಬದಲಾಗುವುದಿಲ್ಲ ಎಂದ ಭಾರತ
"ನಾವು ಅಂತಹ ಪ್ರಯತ್ನಗಳನ್ನು ಸರಾಸಗಟಾಗಿ ತಿರಸ್ಕರಿಸುತ್ತೇವೆ.ಚೀನಾ ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವುದರಿಂದ ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ವಾಸ್ತವತೆಯನ್ನು ಬದಲಾಯಿಸುವುದಿಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ದೆಹಲಿ ಏಪ್ರಿಲ್ 02: ಅರುಣಾಚಲ ಪ್ರದೇಶದ (Arunachal Pradesh) ಹಲವು ಸ್ಥಳಗಳಿಗೆ ಮರುನಾಮಕರಣ ಮಾಡಿದ್ದಕ್ಕಾಗಿ ಚೀನಾವನ್ನು (Chian) ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ವಿದೇಶಾಂಗ ಸಚಿವಾಲಯ (Ministry of External Affairs), ಹೊಸ ಹೆಸರುಗಳನ್ನಿಡುವುದರಿಂದ ಅದು ಭಾರತದ ಅವಿಭಾಜ್ಯ ಅಂಗ ಎಂಬ ವಾಸ್ತವ ಸಂಗತಿ ಬದಲಾಗುವುದಿಲ್ಲ ಎಂದು ಹೇಳಿದೆ. ಅದೇ ವೇಳೆ ಭಾರತ ಚೀನಾದ ಕ್ರಮವನ್ನು “ಅರ್ಥಹೀನ” ಎಂದು ಕರೆದಿದೆ. “ಭಾರತದ ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುಹೆಸರಿಸಲು ಚೀನಾ ತನ್ನ ಅರ್ಥಹೀನ ಪ್ರಯತ್ನಗಳನ್ನು ಮುಂದುವರೆಸಿದೆ” ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
“ನಾವು ಅಂತಹ ಪ್ರಯತ್ನಗಳನ್ನು ಸರಾಸಗಟಾಗಿ ತಿರಸ್ಕರಿಸುತ್ತೇವೆ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವುದರಿಂದ ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ವಾಸ್ತವತೆಯನ್ನು ಬದಲಾಯಿಸುವುದಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ವಿದೇಶಾಂಗ ವ್ಯವಹಾರ ಸಚಿವಾಲಯದ ಟ್ವೀಟ್
Our response to media queries on renaming places in Arunachal Pradesh by China:https://t.co/jqx6NCdQ1c pic.twitter.com/XPpysWlcQk
— Randhir Jaiswal (@MEAIndia) April 2, 2024
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗವೆಂದು ಬೀಜಿಂಗ್ ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಚೀನೀ ಹೆಸರು ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ.
ಸಚಿವಾಲಯದ ಅಧಿಕೃತ ವೆಬ್‌ಸೈಟ್ ಈ ಪ್ರದೇಶಕ್ಕೆ 30 ಹೆಚ್ಚುವರಿ ಹೆಸರುಗಳನ್ನು ಪೋಸ್ಟ್ ಮಾಡಿದೆ. ಚೀನಾದ ಈ ಕ್ರಮಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಹೆಸರು ಬದಲಿಸುವುದರಿಂದ ದೇಶಕ್ಕೆ ಏನೂ ಲಾಭವಿಲ್ಲ ಎಂದು ಸೋಮವಾರ ಹೇಳಿದ್ದಾರೆ.
“ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿತ್ತು, ಭಾರತದ ರಾಜ್ಯವಾಗಿದೆ ಮತ್ತು ಭವಿಷ್ಯದಲ್ಲಿ ಹಾಗೆಯೇ ಉಳಿಯುತ್ತದೆ, ಹೆಸರುಗಳನ್ನು ಬದಲಾಯಿಸುವುದರಿಂದ ಏನೂ ಸಿಗುವುದಿಲ್ಲ,” ಎಂದು ಅವರು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಚೀನಾದ ಮರುನಾಮಕರಣದ ಪ್ರಯತ್ನವನ್ನು ಖಂಡಿಸಿದ್ದಾರೆ.
“ಅರುಣಾಚಲ ಪ್ರದೇಶದ 30 ಸ್ಥಳಗಳಿಗೆ ಚೀನಾದ ಕಾನೂನುಬಾಹಿರವಾಗಿ ‘ಪ್ರಮಾಣೀಕೃತ’ ಭೌಗೋಳಿಕ ಹೆಸರುಗಳನ್ನು ನೀಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಚೀನಾ ಎಲ್ಲಾ ಆಧಾರರಹಿತ ಹಕ್ಕುಗಳನ್ನು ನೀಡುತ್ತಿದೆ ಆದರೆ ಇದು ನೆಲದ ವಾಸ್ತವ ಮತ್ತು ‘ಐತಿಹಾಸಿಕ ಸಂಗತಿಗಳನ್ನು’ ಬದಲಾಯಿಸುವುದಿಲ್ಲ” ಎಂದು ಅವರು ಹೇಳಿದರು.
“ಅರುಣಾಚಲ ಪ್ರದೇಶವು ಭಾರತದ ಒಂದು ಅವಿಭಾಜ್ಯ ಭಾಗವಾಗಿದೆ. ಅರುಣಾಚಲ ಪ್ರದೇಶದ ಜನರು ಎಲ್ಲಾ ಮಾನದಂಡಗಳು ಮತ್ತು ವ್ಯಾಖ್ಯಾನಗಳ ಮೂಲಕ ಅತ್ಯಂತ ದೇಶಭಕ್ತ ಭಾರತೀಯರು” ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಅರುಣಾಚಲ ಪ್ರದೇಶದ ಮರುನಾಮಕರಣಕ್ಕೆ ಚೀನಾವನ್ನು ಖಂಡಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಛೀಮಾರಿ ಹಾಕಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸುಪ್ರೀಂಕೋರ್ಟ್ ಮುಂದೆ ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್
“ಚೀನಾ ಪ್ರಚೋದನೆಯನ್ನು ಆಶ್ರಯಿಸಿದಾಗ, ಪ್ರಧಾನಿ ಮೋದಿಯವರು ಕಚ್ಚತೀವು ಬಗ್ಗೆ ಸುಳ್ಳು ನಿರೂಪಣೆಯ ಮೂಲಕ ಆಶ್ರಯ ಪಡೆಯಲು ಪ್ರಯತ್ನಿಸುತ್ತಾರೆ. ತಮ್ಮ ಚೀನಾದ ಸಹವರ್ತಿಯೊಂದಿಗೆ ಕನಿಷ್ಠ 19 ಸುತ್ತಿನ ದ್ವಿಪಕ್ಷೀಯ ಮಾತುಕತೆಗಳ ನಂತರವೂ, ಈ ಅಸಂಬದ್ಧತೆಯನ್ನು ತಡೆಯಲು ಚೀನಾದ ಮೇಲೆ ಯಾವುದೇ ರಾಜತಾಂತ್ರಿಕ ಪ್ರಭಾವವನ್ನು ಬಳಸಲು ಪ್ರಧಾನಿ ಮೋದಿಗೆ ಸಾಧ್ಯವಾಗಲಿಲ್ಲ. ಭಾರತೀಯ ಪ್ರದೇಶಗಳ ‘ಮರುನಾಮಕರಣ’… ಮೋದಿ ಸರ್ಕಾರ ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಈ ದೈನಂದಿನ ಹಾಸ್ಯಾಸ್ಪದ ಕ್ರಮಗಳು ಮತ್ತು ಹೇಳಿಕೆಗಳ ಬಗ್ಗೆ ಚೀನಾವನ್ನು ಬಲವಾಗಿ ಖಂಡಿಸುವುದು ಮತ್ತು ವಾಗ್ದಂಡನೆ ಮಾಡುವುದು” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Tue, 2 April 24