AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹೆಂಡತಿಯರ ಸೀರೆ ಸುಡಬಲ್ಲಿರಾ?: ಬಾಂಗ್ಲಾದಲ್ಲಿ ಬಾಯ್ಕಾಟ್ ಇಂಡಿಯಾ ಅಭಿಯಾನ ವಿರುದ್ಧ ಪ್ರಧಾನಿ ಹಸೀನಾ ಗುಡುಗು

Bangladesh PM Sheikh Hasina counters Boycott India campaign: ಮಾಲ್ಡೀವ್ಸ್ ದೇಶದಲ್ಲಿ ನಡೆದಿದ್ದ ರೀತಿಯಲ್ಲಿ ಬಾಂಗ್ಲಾದೇಶದಲ್ಲೂ ಬಾಯ್ಕಾಟ್ ಇಂಡಿಯಾ ಅಭಿಯಾನ ಚಾಲನೆಗೆ ಬಂದಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಪರವಾಗಿರುವ ನಾಯಕಿ. ಅವರ ಆಡಳಿತದ ವೇಳೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಉತ್ತಮಗೊಂಡಿದೆ. ಇದು ವಿಪಕ್ಷಗಳನ್ನು ಭಾರತ ವಿರೋಧಿ ಹೋರಾಟಕ್ಕೆ ದೂಡಿದೆ. ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಾಯ್ಕಾಟ್ ಇಂಡಿಯಾ ಅಭಿಯಾನಕ್ಕೆ ಬಿಎನ್​ಪಿ ಪಕ್ಷ ಬೆಂಬಲ ನೀಡಿದೆ. ವಿಪಕ್ಷಗಳ ಈ ಕಾರ್ಯಗಳನ್ನು ಪ್ರಧಾನಿ ಶೇಖ್ ಹಸೀನಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮ ಹೆಂಡತಿಯರ ಸೀರೆ ಸುಡಬಲ್ಲಿರಾ?: ಬಾಂಗ್ಲಾದಲ್ಲಿ ಬಾಯ್ಕಾಟ್ ಇಂಡಿಯಾ ಅಭಿಯಾನ ವಿರುದ್ಧ ಪ್ರಧಾನಿ ಹಸೀನಾ ಗುಡುಗು
ಶೇಖ್ ಹಸೀನಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 02, 2024 | 10:58 AM

Share

ನವದೆಹಲಿ, ಏಪ್ರಿಲ್ 2: ಮಾಲ್ಡೀವ್ಸ್ ದೇಶದಲ್ಲಿ ಈಗಿನ ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohammed Muizzu) ಬಾಯ್ಕಾಟ್ ಇಂಡಿಯಾ ಅಭಿಯಾನ ನಡೆಸಿ ಅದನ್ನೇ ಚುನಾವಣೆಯ ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ಆರಿಸಿಬಂದಿದ್ದರು. ಅದಾದ ಬಳಿಕ ಭಾರತ ವಿರುದ್ಧ ಅವರು ಕತ್ತಿ ಮಸೆಯುವುದು ಇನ್ನಷ್ಟು ಹೆಚ್ಚಾಗಿದೆ. ಮಾಲ್ಡೀವ್ಸ್​ನಲ್ಲಿ ನಡೆದಿದ್ದ ಭಾರತ ವಿರೋಧಿ ಅಭಿಯಾನವು (Anti India movement) ಬಾಂಗ್ಲಾದೇಶಕ್ಕೂ ಸೋಂಕಿದಂತಿದೆ. ಬಾಂಗ್ಲಾದೇಶದಲ್ಲಿ ವಿಪಕ್ಷವಾದ ಬಿಎನ್​ಪಿ ಇದೀಗ ಬಾಯ್ಕಾಟ್ ಇಂಡಿಯಾ ಅಭಿಯಾನ (boycott India campaign) ಆರಂಭಿಸಿದೆ. ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಲು ಜನರಿಗೆ ಕರೆ ನೀಡಿದೆ. ಭಾರತದ ಪರ ಇರುವ ಅಲ್ಲಿನ ಅಧ್ಯಕ್ಷೆ ಶೇಖ್ ಹಸೀನಾ (Sheikh Hasina) ಸತತ ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದಿರುವುದು ವಿಪಕ್ಷಗಳನ್ನು ಹತಾಶೆಗೊಳಿಸಿದಂತಿದೆ. ಹಸೀನಾ 2009ರಿಂದಲೂ ಸತತವಾಗಿ ಪ್ರಧಾನಿ ಸ್ಥಾನದಲ್ಲಿದ್ದಾರೆ.

ಜನವರಿಯಲ್ಲಿ ನಡೆದಿದ್ದ ಬಾಂಗ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತವು ಶೇಖ್ ಹಸೀನಾರ ಅವಾಲಿ ಲೀಗ್ ಪಕ್ಷಕ್ಕೆ ಬೆಂಬಲ ನೀಡಿತ್ತು ಎಂಬುದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಆರೋಪ. ಬಾಂಗ್ಲಾದೇಶದ ರಾಜಕೀಯ ಹಾಗೂ ಇತರ ಆಂತರಿಕ ವಿದ್ಯಮಾನಗಳಲ್ಲಿ ಭಾರತ ಪ್ರಭಾವ ಬೀರುತ್ತಿದೆ. ಪ್ರಧಾನಿ ಶೇಖ್ ಹಸೀನಾ ಕೂಡ ಭಾರತದ ಪರವಾಗಿದ್ದಾರೆ ಎಂದು ವಿಪಕ್ಷಗಳು ಕೆಂಡಾಮಂಡಲವಾಗಿವೆ. ಈ ಹಿನ್ನೆಲೆಯಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಅವು ಕರೆ ನೀಡಿವೆ.

ಇದನ್ನೂ ಓದಿ: ಭಾರತಕ್ಕೆ ಮೊದಲ ಮಹಿಳಾ ಬ್ರಿಟನ್ ರಾಯಭಾರಿಯಾಗಲಿದ್ದಾರೆ ಲಿಂಡಿ ಕ್ಯಾಮರಾನ್

‘ಭಾರತವು ಬಾಂಗ್ಲಾದೇಶದ ಜನರನ್ನು ಬೆಂಬಲಿಸುತ್ತಿಲ್ಲ. ಅವಾಮಿ ಲೀಗ್ ಪಕ್ಷಕ್ಕೆ ಅದರ ಬೆಂಬಲ ಇದೆ. ಹೀಗಾಗಿ, ಜನರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ,’ ಎಂದು ಬಿಎನ್​ಪಿ ಪಕ್ಷದ ಹಿರಿಯ ಮುಖಂಡ ರುಹೂಲ್ ಕಬೀರ್ ರಿಜ್ವಿ ಹೇಳಿದ್ದಾರೆ. ಬಿಎನ್​ಪಿಯ ಇತರ ಹಲವು ಮುಖಂಡರು ಈ ಭಾರತ ವಿರೋಧಿ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ.

ನಿಮ್ಮ ಹೆಂಡತಿಯರ ಸೀರೆ ಸುಟ್ಟುಹಾಕಿ: ಹಸೀನಾ ಸವಾಲು

ವಿಪಕ್ಷಗಳ ಭಾರತ ವಿರೋಧಿ ಆಟಾಟೋಪಕ್ಕೆ ಪ್ರಧಾನಿ ಶೇಖ್ ಹಸೀನಾ ಸೊಪ್ಪು ಹಾಕುತ್ತಿಲ್ಲ. ಅಭಿಯಾನ ಶುರುವಾದಾಗ ಮೌನವಾಗಿದ್ದ ಹಸೀನಾ ಇದೀಗ ವಿಪಕ್ಷಗಳು ಹಾಗೂ ಬಾಯ್ಕಾಟ್ ನಿರತರ ವಿರುದ್ದ ವಾಗ್ದಾಳಿ ಆರಂಭಿಸಿದ್ದಾರೆ. ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆನ್ನುವ ನಾಯಕರು ತಮ್ಮ ಹೆಂಡತಿಯರು ಧರಿಸುವ ಭಾರತೀಯ ಸೀರೆಗಳನ್ನು ಸುಟ್ಟುಹಾಕುವರೆ ಎಂದು ಪ್ರಶ್ನಿಸಿದ್ದಾರೆ.

‘ಒಬ್ಬ ಬಿಎನ್​ಪಿ ಮುಖಂಡರು ಅವರ ಶಾಲನ್ನು ಸುಟ್ಟುಹಾಕಿದ್ದಾರೆ. ಈ ಬಿಎನ್​ಪಿ ಮುಖಂಡರ ಹೆಂಡತಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಭಾರತದಿಂದ ಆಮದು ಮಾಡಿಕೊಳ್ಳಲಾದ ಸೀರೆಗಳನ್ನು ಈದ್​ಗೆ ಮುನ್ನ ಈ ಬಿಎನ್​ಪಿ ನಾಯಕರ ಹೆಂಡತಿಯರು ಮಾರುತ್ತಿದ್ದುದನ್ನು ನಾನು ಕಂಡಿದ್ದೇನೆ,’ ಎಂದು ಹಸೀನಾ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ಹಲವೆಡೆ ಇಂದೂ 38 ವಿಸ್ತಾರ ವಿಮಾನ ಸಂಚಾರ ರದ್ದು: ವರದಿ ಕೇಳಿದ ಕೇಂದ್ರ

‘ಬಿನ್​ಪಿ ನಾಯಕರು ನಿಜವಾಗಿಯೂ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದಿದ್ದರೆ ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನು ಸುಟ್ಟುಹಾಕಿರುತ್ತಿದ್ದರು. ಭಾರತೀಯ ಮಸಾಲೆ ಪದಾರ್ಥಗಳಿಲ್ಲದೇ ಅವರು ತಿನ್ನಬಲ್ಲುರೆ ಎಂದು ಹೇಳಲಿ ನೋಡೋಣ,’ ಎಂದು ಬಾಂಗ್ಲಾದೇಶ ಪ್ರಧಾನಿ ವಿಪಕ್ಷದ ನಾಯಕರಿಗೆ ಸವಾಲು ಹಾಕಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮಧ್ಯೆ ಸಂಬಂಧ ಗಾಢವಾಗುತ್ತಿದೆ. ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಭೂತಾನ್​ನಿಂದ ಬಾಂಗ್ಲಾದೇಶಕ್ಕೆ ತನ್ನ ನೆಲದ ಮೂಲಕ ವಿದ್ಯುತ್ ಸರಬರಾಜು ಮಾಡಲು ಭಾರತ ಅವಕಾಶ ಕಲ್ಪಿಸಲು ಮುಂದಾಗಿದೆ. ಬಾಂಗ್ಲಾದೇಶದಿಂದ ಸರಬರಾಜಾಗುವ ಜೂಟ್ ಅಥವಾ ಸೆಣಬು ಉತ್ಪನ್ನಗಳಿಗೆ ಆಮದು ಸುಂಕ ಕಡಿಮೆ ಮಾಡುವ ಪ್ರಸ್ತಾಪವನ್ನು ಭಾರತ ಪರಿಶೀಲಿಸುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ