ಶ್ರೀನಗರ: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (Pakistan-occupied Kashmir – PoK) ಮೇಲೆ ದಾಳಿ ನಡೆಸುವ ಉದ್ದೇಶ ಭಾರತಕ್ಕೆ ಇಲ್ಲ. ಆದರೆ ಒಂದಲ್ಲ ಒಂದು ದಿನ ಕಾಶ್ಮೀರವು ಸಂಪೂರ್ಣವಾಗಿ ಭಾರತದ ಸುಪರ್ದಿಗೆ ಸೇರಲಿದೆ ಎಂದು ವಾಯುಪಡೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಈಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಯು ಮಹತ್ವ ಪಡೆದಿದೆ.
ಕಾಶ್ಮೀರ ಕಣಿವೆಯ ಇತಿಹಾಸದಲ್ಲಿ ಮಹತ್ವ ಪಡೆದಿರುವ ಬುದ್ಗಮ್ಗೆ ಸೇನೆಯ ಪ್ರವೇಶದ 75ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ ಪಶ್ಚಿಮ ಏರ್ ಕಮಾಂಡ್ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (AOC-in-C) ಏರ್ ಮಾರ್ಷಲ್ ಅಮಿತ್ ದೇವ್, ಪಾಕಿಸ್ತಾನಿಯರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ನಾಗರಿಕರನ್ನು ನ್ಯಾಯ ಸಮ್ಮತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
27ನೇ ಅಕ್ಟೋಬರ್ 1947ರಂದು ಭಾರತೀಯ ವಾಯುಪಡೆ ಮತ್ತು ಸೇನೆ ನಡೆಸಿದ ಕಾರ್ಯಾಚರಣೆಗಳಿಂದ ಕಾಶ್ಮೀರದ ಈ ಭಾಗದಲ್ಲಿ ಶಾಂತಿ ನೆಲೆಸಿತು. ನನಗೆ ಖಾತ್ರಿಯಿದೆ ಮುಂದಿನ ಕೆಲವರ್ಷಗಳಲ್ಲಿ ಕಾಶ್ಮೀರ ಒಂದಾಗಲಿದೆ ಎಂದು ನುಡಿದರು. ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಯಾವುದಾದರೂ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣಕ್ಕೆ ಅಂಥ ಯಾವುದೇ ಯೋಜನೆ ರೂಪುಗೊಂಡಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.
ಕಾಶ್ಮೀರ ಎನ್ನುವುದು ಸದಾ ಒಂದೇ ಆಗಿತ್ತು. ದೇಶವೂ ಸದಾ ಒಂದು. ಗಡಿಯ ಎರಡೂ ಭಾಗದಲ್ಲಿರುವ ಜನರು ಸಮಾನ ಭಾವನೆಗಳನ್ನು ಹೊಂದಿದ್ದಾರೆ. ಇಂದಲ್ಲದಿದ್ದರೆ ನಾಳೆ ಎರಡೂ ದೇಶಗಳು ಹತ್ತಿರವಾಗಲಿವೆ. ಇತಿಹಾಸ ಇದಕ್ಕೆ ಸಾಕ್ಷಿಯಾಗಲಿದೆ. ತಕ್ಷಣಕ್ಕೆ ಈ ಬಗ್ಗೆ ನಾವು ಯಾವುದೇ ಯೋಜನೆ ರೂಪಿಸಿಲ್ಲ. ಆದರೆ ದೇವರ ಚಿತ್ತಕ್ಕೆ ಬಂದಂತೆ ಆಗುತ್ತದೆ. ಯಾಕೆಂದರೆ ಪಾಕಿಸ್ತಾನೀಯರು ತಮ್ಮ ಅಧೀನದಲ್ಲಿರುವ ಕಾಶ್ಮೀರಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ತಂತ್ರಜ್ಞಾನವು ಈಗ ವೇಗವಾಗಿ ಬದಲಾಗುತ್ತಿದೆ. ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವುದೇ ನಮ್ಮೆದುರಿನ ದೊಡ್ಡ ಸವಾಲು ಎಂದು ವಾಯುಪಡೆಯ ಕಮಾಂಡರ್ ಹೇಳಿದರು. ಆರ್ಥಿಕವಾಗಿ ಬೆಳೆಯಬೇಕು ಎನ್ನುವ ಆಸೆ ಹೊಂದಿರುವ ಯಾವುದೇ ದೇಶಕ್ಕೆ ಬಲಿಷ್ಠ ಮಿಲಿಟರಿ ಅಗತ್ಯ. ನಮ್ಮ ದೇಶವು ನಮಗೆ ವಹಿಸಿರುವ ಜವಾಬ್ದಾರಿಗಳನ್ನು ಮುಂದಿನ ದಿನಗಳಲ್ಲಿ ನಾವು ಸಂಪೂರ್ಣವಾಗಿ ನಿರ್ವಹಿಸಬೇಕು. ಎಂಥದ್ದೇ ಸವಾಲು ಎದುರಿಸಲು ವಾಯುಪಡೆ ಸನ್ನದ್ಧವಾಗಿದೆ ಎಂದರು.
ಈಚೆಗೆ ನಡೆಯುತ್ತಿರುವ ಡ್ರೋಣ್ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅದನ್ನು ಎದುರಿಸಲು ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಡ್ರೋಣ್ ದಾಳಿಗಳಿಂದ ಹೆಚ್ಚಿನ ಹಾನಿ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು. ಕಾಶ್ಮೀರದ ಮಹಾರಾಜ ಹರಿ ಸಿಂಗ್ ಭಾರತದೊಂದಿಗೆ ವಿಲೀನವಾಗುವ ದಾಖಲೆಗೆ ಸಹಿ ಹಾಕಿದ ನಂತರ ಭಾರತೀಯ ಸೇನೆ ತುಕಡಿಗಳು ಪಾಕ್ ಬುಡಕಟ್ಟು ದಾಳಿಕೋರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಮಹತ್ವದ ದಿನದ ನೆನಪಿಗಾಗಿ ಬುದ್ಗಮ್ ದಿನವನ್ನು ದೇಶ ನೆನೆಯುತ್ತದೆ.
#WATCH | “…It wasn’t only IAF & Army’s participation in Budgam but many small missions that resulted in ensuring free Kashmir…I’m sure some day POK will join this part of Kashmir & we’ll have whole Kashmir in yrs to come: Air Marshal Amit Dev, AOC-in-C, Western Air Command pic.twitter.com/GuN0UE4S7q
— ANI (@ANI) October 27, 2021
ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಪಂದ್ಯ ಸೋತ ಹಿನ್ನೆಲೆ; ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಪಂಜಾಬ್ನಲ್ಲಿ ಹಲ್ಲೆ
ಇದನ್ನೂ ಓದಿ: ‘ಜಮ್ಮು-ಕಾಶ್ಮೀರದ ಅಭಿವೃದ್ಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ’-ಬಹಿರಂಗ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ