ಕಂಬಳಿ ಟ್ವೀಟ್ಗೆ ಗೋವಾದಲ್ಲಿ ಸ್ಪಷ್ಟನೆ ನೀಡಿದ ಬಿಜೆಪಿ ನಾಯಕ ಸಿಟಿ ರವಿ
ಇಂಥ ಸಿಟ್ಟಿಗೆ ನನ್ನ ಬಳಿ ಯಾವುದೇ ಔಷಧವಿಲ್ಲ ಎಂದು ಸಿಟಿ ರವಿ ವ್ಯಂಗ್ಯವಾಡಿದರು.

ಪಣಜಿ: ಕಂಬಳಿ ಹಾಸುವ ವಿಚಾರ ಕುರಿತಂತೆ ತಾವು ಮಾಡಿದ್ದ ಟ್ವೀಟ್ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಗೋವಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕೆಲವರಿಗೆ ಅವರದೇ ಧಾಟಿಯಲ್ಲಿ ಎದುರಿಗೆ ಇರುವವರು ಪ್ರಶ್ನಿಸಿದಾಗ ಸಿಟ್ಟು ಬರುತ್ತದೆ. ನಾನು ಪ್ರಶ್ನಿಸಿದಾಗಲೂ ಬಹಳಷ್ಟು ಜನರಿಗೆ ಸಿಟ್ಟು ಬಂದಿತ್ತು. ಇಂಥ ಸಿಟ್ಟಿಗೆ ನನ್ನ ಬಳಿ ಯಾವುದೇ ಔಷಧವಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಯಾರು ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ನಾನು ಅದರ ಅಧಾರದ ಮೇಲೆಯೇ ಈ ರೀತಿ ಹೇಳಿದ್ದೇನೆ. ಯಾರಿಗಾದರೂ ನೋವುಂಟು ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಕಂಬಳಿ ಹಾಕುವ ಬಗ್ಗೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದ ಸಿ.ಟಿ.ರವಿ ಕಂಬಳಿ ಹಾಕಲು ಕುರುಬರೇ ಆಗಬೇಕೆಂಬುದು ನಿಮ್ಮ ವಾದ. ಆದರೆ ಮುಸ್ಲಿಂ ಟೋಪಿ ಯಾರು ಬೇಕಾದರೂ ಹಾಕಬಹುದೇ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದರು. ಕಂಬಳಿ ವಿಚಾರ ಕುರಿತು ಉಪ ಚುನಾವಣೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಕಾಮೆಂಟ್ ಮಾಡಿದ್ದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದರು. ಕಂಬಳಿ ಹೊತ್ತುಕೊಳ್ಳಲು ಕುರುಬರೇ ಆಗಬೇಕು ಅಂತೇನಿಲ್ಲ. ಈ ವಿಚಾರವನ್ನೇ ನಾನು ಮಾರ್ಮಿಕವಾಗಿ ಪ್ರಶ್ನೆ ಕೇಳಿದ್ದೆ ಎಂದು ಸಿ.ಟಿ.ರವಿ ಹೇಳಿದ್ದರು.
ಕಂಬಳಿ ಹೊತ್ತುಕೊಳ್ಳಲು ಕುರುಬರೇ ಆಗಬೇಕೆನ್ನುವ ಮನಸ್ಥಿತಿಯನ್ನು ಪ್ರಶ್ನಿಸಿದ್ದಕ್ಕೆ ತಪ್ಪಾಗಿ ಭಾವಿಸಬೇಕಿಲ್ಲ. ಭಕ್ತ ಕನಕದಾಸರು ಸಹ ಕಂಬಳಿ ಬಗ್ಗೆ ಮಾತನಾಡಿದ್ದಾರೆ ಎಂದು ರವಿ ಇದೀಗ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾನು ಕಂಬಳಿ ಹಾಕ್ಕೊಳ್ತೇನೆ, ಮುಸಲ್ಮಾನರ ಟೋಪಿಯನ್ನೂ ಧರಿಸುತ್ತೇನೆ, ಅದನ್ನು ಕೇಳೋದಿಕ್ಕೆ ಸಿಟಿ ರವಿ ಯಾರು? ಸಿದ್ದರಾಮಯ್ಯ ಇದನ್ನೂ ಓದಿ: ಹತಾಷೆಗೊಳಗಾಗಿರುವ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಕಂಬಳಿಯನ್ನು ಪ್ರಸ್ತಾಪಿಸಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ: ಬಿ ಸಿ ಪಾಟೀಲ
Published On - 5:40 pm, Wed, 27 October 21
