ಹತಾಷೆಗೊಳಗಾಗಿರುವ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಕಂಬಳಿಯನ್ನು ಪ್ರಸ್ತಾಪಿಸಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ: ಬಿ ಸಿ ಪಾಟೀಲ

ಹತಾಷೆಗೊಳಗಾಗಿರುವ ಸಿದ್ದರಾಮಯ್ಯ ಚುನಾವಣಾ ಪ್ರಚಾರದಲ್ಲಿ ಕಂಬಳಿಯನ್ನು ಪ್ರಸ್ತಾಪಿಸಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ: ಬಿ ಸಿ ಪಾಟೀಲ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 27, 2021 | 4:29 PM

ಕಂಬಳಿ ಎಲ್ಲರಿಗೂ ಬಹುಪಯೋಗಿ ವಸ್ತು, ಅದನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಗೊಂಗಡಿಯಾಗಿ, ಮನೆಗಳಲ್ಲಿ ಹಾಸಿಗೆ ಮತ್ತು ಹೊದಿಕೆಯಾಗಿ ಉಪಯೋಗಿಸುತ್ತಾರೆ. ಸಿದ್ದರಾಮಯ್ಯನವರು ಕಂಬಳಿಯ ಪೇಟೆಂಟ್ ಹೊಂದಿಲ್ಲ, ಇದು ಎಲ್ಲರಿಗೂ ಸೇರಿದ ಮತ್ತು ಸರ್ವರೂ ಬಳಸುವ ವಸ್ತು ಎಂದು ಪಾಟೀಲ ಹೇಳಿದರು.

ಕರ್ನಾಟಕ ವಿಧಾನ ಸಭೆಯ ಎರಡು ಉಪಚುನಾವಣೆಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕುರುಬ ಸಮುದಾಯ ಮತ್ತು ಕಂಬಳಿ ಬಹು ಚರ್ಚಿತ ವಿಷಯಗಳಾಗಿಬಿಟ್ಟಿವೆ. ಹಾನಗಲ್​ಗೆ ಬುಧವಾರ ಪ್ರಚಾರಕ್ಕೆ ಆಗಮಿಸಿದ್ದ ಸಚಿವ ಬಿಸಿ ಪಾಟೀಲ್ ಅವರನ್ನು ಟಿವಿ9 ವರದಿಗಾರ ರಾಮ್ ಅವರು ಕಂಬಳಿ ಚುನಾವಣಾ ವಿಷಯವಾಗಿ ಮಾರ್ಪಟ್ಟಿರುವುದನ್ನು ಪ್ರಶ್ನಿಸಿದಾಗ ಸಚಿವರು, ಮಾಜಿ ಮುಖ್ಯಂಮಂತ್ರಿಗಳನ್ನು ತೀವ್ರವಾಗಿ ಖಂಡಿಸಿದರು. ಕಂಬಳಿಯನ್ನು ಚುನಾವಣೆ ನಡೆಯುವ ಸಂದರ್ಭದಲ್ಲಿ ಪ್ರಸ್ತಾಪಿಸಿ ಸಿದ್ದರಾಮಯ್ಯ ಸಣ್ಣತನವನ್ನು ಪ್ರದರ್ಶಿಸಿದ್ದಾರೆ, ಅದು ಯಾರ ಸೊತ್ತೂ ಅಲ್ಲ, ಕುರುಬ ಮತ್ತು ಹಾಲುಮತ ಸಮುದಾಯದವರು ಕಂಬಳಿಯನ್ನು ಕೇವಲ ತಮಗಾಗಿ ನೇಯುವುದಿಲ್ಲ, ಸರ್ವರಿಗಾಗಿ ಅದನ್ನು ತಯಾರು ಮಾಡುತ್ತಾರೆ ಎಂದ ಸಚಿವರು, ಸಿದ್ದರಾಮಯ್ಯನವರು ಕಂಬಳಿ ರಾಜಕೀಯ ಆರಂಭಿಸಿರೋದು ಅವರ ನೈತಿಕ ದಿವಾಳಿತನವನ್ನು ತೋರುತ್ತದೆ ಎಂದರು.

ಹೊಸ ಹೊಸ ಗಿಮಿಕ್ ಗಳನ್ನು ಮಾಡಿ ಜನರನ್ನು ಇಂಪ್ರೆಸ್ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವಾಟಾಳ್ ನಾಗರಾಜ್ ಮಾಡಿದ ಹಾಗೆ, ಎತ್ತಿನ ಬಂಡಿಯಲ್ಲಿ ಇಲ್ಲವೇ ಸೈಕಲ್ ತುಳಿಯುತ್ತಾ ವಿಧಾನ ಸಭೆಗೆ ಬರೋದು-ಇವೆಲ್ಲ ಗಿಮಿಕ್ ಗಳಲ್ಲದೆ ಮತ್ತೇನು? ಸದ್ಯ ಅವರು ಕತ್ತೆಯ ಬೆನ್ನೇರಿ ಬಂದಿಲ್ಲ ಎಂದು ಪಾಟೀಲ ವ್ಯಂಗ್ಯವಾಡಿದರು.

ಹಾಲುಮತ ಮತ್ತು ಕುರುಬ ಸಮುದಾಯಗಳ ಬಗ್ಗೆ ನಮ್ಮೆಲ್ಲರಿಗೆ ಅಪಾರ ಗೌರವವಿದೆ, ಗ್ರಾಮೀಣ ಭಾಗಗಳಲ್ಲಿ ಮನೆ ಕಟ್ಟುವಾಗ ಇಲ್ಲವೇ ಬೇರೆ ಮಂಗಳಕಾರ್ಯಗಳನ್ನು ಮಾಡುವಾಗ ಹಾಲುಮತ ಸಮುದಾಯವರನ್ನು ಮನೆಗೆ ಕರೆಸಿ ಹಾಲು ತುಪ್ಪ ಹಾಕಿಸುವ ಸಂಪ್ರದಾಯ ಜಾರಿಯಲ್ಲಿದೆ. ಆದರೆ, ಸಿದ್ದರಾಮಯ್ಯನವರು ನಮ್ಮ ಸೌಹಾರ್ದಯುತ ಸಂಬಂಧಗಳ ನಡುವೆ ವಿಷದ ಬೀಜ ಬಿತ್ತುವ ಹುನ್ನಾರ ಮಾಡುತ್ತಿದ್ದಾರೆ ಎಂದು ಹೇಳಿದ ಪಾಟೀಲರು, ಹಿರಿಯ ಕಾಂಗ್ರೆಸ್ ನಾಯಕರು ಇಂಥ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯಬಾರದಿತ್ತು ಅಂತ ಹೇಳಿದರು.

ಕಂಬಳಿ ಎಲ್ಲರಿಗೂ ಬಹುಪಯೋಗಿ ವಸ್ತು, ಅದನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಗೊಂಗಡಿಯಾಗಿ, ಮನೆಗಳಲ್ಲಿ ಹಾಸಿಗೆ ಮತ್ತು ಹೊದಿಕೆಯಾಗಿ ಉಪಯೋಗಿಸುತ್ತಾರೆ. ಸಿದ್ದರಾಮಯ್ಯನವರು ಕಂಬಳಿಯ ಪೇಟೆಂಟ್ ಹೊಂದಿಲ್ಲ, ಇದು ಎಲ್ಲರಿಗೂ ಸೇರಿದ ಮತ್ತು ಸರ್ವರೂ ಬಳಸುವ ವಸ್ತು ಎಂದು ಪಾಟೀಲ ಹೇಳಿದರು. ಹೇಗೆ ರೈತ ತಾನು ಬೆಳದಿದ್ದೆಲ್ಲ ತನ್ನದು, ನೇಕಾರ ತಾನು ನೇಯ್ದಿದ್ದು ಕೇವಲ ತನ್ನದು ಮಾತ್ರ ಅಂತ ಹೇಳುವುದಿಲ್ಲವೋ ಹಾಗೆಯೇ, ಕುರುಬರು ಸಹ ಕಂಬಳಿ ತಮಗೆ ಮಾತ್ರ ಸೇರಿದ್ದು ಅಂತ ಹೇಳುವುದಿಲ್ಲ ಎಂದು ಪಾಟೀಲ ಹೇಳಿದರು.

ಸಿದ್ದರಾಮಮಯ್ಯ ಹತಾಷೆಗೊಳಗಾಗಿದ್ದಾರೆ. ತಾನೇ ಮುಂದಿನ ಮುಖ್ಯಮಂತ್ರಿಯೆಂದು ಬೀಗುತ್ತಿದ್ದವರಿಗೆ ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ ಅವರು ಅಡ್ಡಗಾಲು ಹಾಕುತ್ತಿದ್ದಾರೆ. ಸ್ಥಾನ ಕೈ ತಪ್ಪುವ ಹತಾಕ್ಷೆಯಲ್ಲಿ ಅವರು ಹೀಗೆಲ್ಲ ಮಾತಾಡುತ್ತಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮವಾಗಿ ಅಧಿಕಾರ ನಡೆಸುತ್ತಿರುವುದು ಸಿದ್ದರಾಮಯ್ಯನವರಿಗೆ ಸಹಿಸಲಾಗುತ್ತಿಲ್ಲ. ಬೊಮ್ಮಾಯಿ ಅವರು ಎಲ್ಲ ಸಮುದಾಯಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವುದು, ಸಿದ್ದರಾಮಯ್ಯನವರ ಹೊಟ್ಟೆಯುರಿಗೆ ಕಾರಣವಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:    ಪ್ರಾರ್ಥನಾ ಮಂದಿರಗಳ ಮುಂದೆ ಭಕ್ತರು ಕಳಚಿರುವ ಚಪ್ಪಲಿಗಳು ಹೇಗೆ ಕಳುವಾಗುತ್ತವೆ ಗೊತ್ತಾ? ವಿಡಿಯೋ ನೋಡಿ