
ನವದೆಹಲಿ, ಜುಲೈ 11: ಭಾರತೀಯ ಗಗನಯಾತ್ರಿ(Astronut) ಶುಭಾಂಶು ಶುಕ್ಲಾ(Shubhanshu Shukla) ಜುಲೈ 14ರಂದು ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರಲಿದ್ದಾರೆ. ಜೂನ್ 25, 2025ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿತ್ತು.
ಶುಭಾಂಶು ಮತ್ತು ಅವರ ಸಹ ಗಗನಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್(ಯುಎಸ್ಎ), ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಪು (ಹಂಗೇರಿ) ಅವರು ಜುಲೈ 10, 2025 ರ ನಂತರ ಯಾವುದೇ ಸಮಯದಲ್ಲಿ ಭೂಮಿಗೆ ಮರಳಬಹುದು. ಜುಲೈ 14 ರ ಮೊದಲು ಅವರ ಮರಳುವಿಕೆ ಸಾಧ್ಯವಿಲ್ಲ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಹೇಳಿದೆ. ಅಂದರೆ, 3-4 ದಿನಗಳ ವಿಳಂಬವಾಗಬಹುದು ಎಂದು ಹೇಳಿದ್ದಾರೆ.
ಆಕ್ಸಿಯಮ್-4 ಸಿಬ್ಬಂದಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ‘ಗ್ರೇಸ್’ ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಇದು ಅಟ್ಲಾಂಟಿಕ್ ಸಾಗರ ಅಥವಾ ಫ್ಲೋರಿಡಾ ಕರಾವಳಿಯ ಬಳಿಯ ಮೆಕ್ಸಿಕೋ ಕೊಲ್ಲಿಯಲ್ಲಿ ಮೃದುವಾದ ಸ್ಪ್ಲಾಶ್‌ಡೌನ್ ಮಾಡುತ್ತದೆ.
ಮತ್ತಷ್ಟು ಓದಿ: ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ; ಮೊದಲ ವಿಡಿಯೋ ಇಲ್ಲಿದೆ
ಆದರೆ ಬಲವಾದ ಗಾಳಿ, ಮಳೆ ಅಥವಾ ಬಿರುಗಾಳಿಗಳಂತಹ ಪ್ರದೇಶದಲ್ಲಿ ಹವಾಮಾನ ಸಮಸ್ಯೆಗಳಿದ್ದರೆ, ಸ್ಪ್ಲಾಶ್‌ಡೌನ್ ಸುರಕ್ಷಿತವಾಗಿರುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಜುಲೈ 14 ರವರೆಗೆ ವಾಪಸಾತಿ ವಿಳಂಬವಾಗಬಹುದು ಎಂದು ಇಎಸ್‌ಎ ಮತ್ತು ನಾಸಾ ತಿಳಿಸಿವೆ.
ಫಾಲ್ಕನ್ 9 ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ, ಡ್ರ್ಯಾಗನ್ ಕ್ಯಾಪ್ಸುಲ್‌ನ ವಿದ್ಯುತ್ ಸರಂಜಾಮು ಸಮಸ್ಯೆಗಳು ಮತ್ತು ಕೆಟ್ಟ ಹವಾಮಾನದಂತಹ ಆಕ್ಸಿಯಮ್ -4 ಕಾರ್ಯಾಚರಣೆಯ ಉಡಾವಣಾ ಪ್ರಕ್ರಿಯೆಯು ಹಲವಾರು ಬಾರಿ ವಿಳಂಬವಾಯಿತು.
ವೈದ್ಯಕೀಯ ತಪಾಸಣೆ
ಸಿಬ್ಬಂದಿ ಹಿಂತಿರುಗುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ, ಭೂಮಿಯ ಮರು ಪ್ರವೇಶಕ್ಕೆ ಅವರ ದೇಹ ಯೋಗ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ESA ಯ ಬಾಹ್ಯಾಕಾಶ ವೈದ್ಯಕೀಯ ತಂಡವು ಶುಭಾಂಶು ಮತ್ತು ಇತರ ಸದಸ್ಯರನ್ನು ಮೇಲ್ವಿಚಾರಣೆ ಮಾಡುತ್ತದೆ.
ಅನ್‌ಡಾಕಿಂಗ್: ಡ್ರ್ಯಾಗನ್ ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಡುತ್ತದೆ. ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿರುತ್ತದೆ, ನಾಸಾ(NASA) ಮತ್ತು ಸ್ಪೇಸ್‌ಎಕ್ಸ್( SpaceX) ಇದನ್ನು ಮೇಲ್ವಿಚಾರಣೆ ಮಾಡುತ್ತದೆ. Axiom-4 ನ ಡ್ರ್ಯಾಗನ್ ಕ್ಯಾಪ್ಸುಲ್ ‘ಗ್ರೇಸ್’ ಅನ್ನು ಜೂನ್ 26 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ್ ನಿಲ್ದಾಣಕ್ಕೆ ಜೋಡಿಸಲಾಯಿತು ಮತ್ತು ಜುಲೈ 14 ರ ನಂತರ ಅನ್‌ಡಾಕಿಂಗ್ ಪ್ರಕ್ರಿಯೆ ನಡೆಯಬಹುದು.
ಕ್ಯಾಪ್ಸುಲ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ಗಂಟೆಗೆ 28,000 ಕಿಮೀ ವೇಗ) ಭೂಮಿಯ ಮೇಲ್ಮೈಗೆ ಪ್ರಯಾಣಿಸಬೇಕಾದ ಈ ಪ್ರಕ್ರಿಯೆಗೆ 28 ಗಂಟೆಗಳ ಕಾಲಾವಕಾಶ ಬೇಕು.
ಸ್ಪ್ಲಾಶ್‌ಡೌನ್
ಡ್ರ್ಯಾಗನ್ ಕ್ಯಾಪ್ಸುಲ್ ಅಟ್ಲಾಂಟಿಕ್ ಸಾಗರ ಅಥವಾ ಫ್ಲೋರಿಡಾ ಕರಾವಳಿಯ ಆಚೆಗಿನ ಮೆಕ್ಸಿಕೋ ಕೊಲ್ಲಿಯಲ್ಲಿ ಮೃದುವಾದ ಸ್ಪ್ಲಾಶ್‌ಡೌನ್ ಮಾಡುತ್ತದೆ. ಹವಾಮಾನ ಮತ್ತು ಸಮುದ್ರದ ಪರಿಸ್ಥಿತಿಗಳ ಆಧಾರದ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪ್ಲಾಶ್‌ಡೌನ್ ನಂತರ, ಸ್ಪೇಸ್‌ಎಕ್ಸ್ ಮತ್ತು ನಾಸಾ ತಂಡಗಳು ತಕ್ಷಣವೇ ಕ್ಯಾಪ್ಸುಲ್ ಅನ್ನು ತಲುಪುತ್ತವೆ. ಸಿಬ್ಬಂದಿಯನ್ನು ಹಡಗು ಅಥವಾ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತದೆ.
ಲ್ಯಾಂಡಿಂಗ್ ನಂತರದ ಕಾರ್ಯವಿಧಾನ
ಬಾಹ್ಯಾಕಾಶದಲ್ಲಿನ ಸೂಕ್ಷ್ಮ ಗುರುತ್ವಾಕರ್ಷಣೆಯು ದೇಹದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ ( ಸ್ನಾಯು ಮತ್ತು ಮೂಳೆ ದೌರ್ಬಲ್ಯ), ಆದ್ದರಿಂದ ESA ಯ ಬಾಹ್ಯಾಕಾಶ ವೈದ್ಯಕೀಯ ತಂಡವು ಶುಭಾಂಶು ಮತ್ತು ಇತರ ಸಿಬ್ಬಂದಿಗೆ ಭೂಮಿಯ ಗುರುತ್ವಾಕರ್ಷಣೆಗೆ ಮತ್ತೆ ಹೊಂದಿಕೊಳ್ಳಲು ಸಹಾಯ ಮಾಡಲು ಚೇತರಿಕೆ ಕಾರ್ಯಕ್ರಮವನ್ನು ಒದಗಿಸುತ್ತದೆ.
ಪ್ರಾಯೋಗಿಕ ಮಾದರಿಗಳನ್ನು (ಮೆಂತ್ಯ ಮತ್ತು ಹೆಸರುಕಾಳಿನ ಬೀಜಗಳಂತೆ) ವಿಜ್ಞಾನಿಗಳಿಗೆ ಹಸ್ತಾಂತರಿಸಲಾಗುತ್ತದೆ, ಇವುಗಳನ್ನು ಇಸ್ರೋ ಮತ್ತು ಭಾರತದ ಇತರ ಸಂಸ್ಥೆಗಳಲ್ಲಿ ವಿಶ್ಲೇಷಿಸಲಾಗುತ್ತದೆ.
ಶುಭಾಂಶು ಶುಕ್ಲರ ಕೊಡುಗೆ
ಶುಭಾಂಶು ಐಎಸ್‌ಎಸ್‌ನಲ್ಲಿ 60 ಪ್ರಯೋಗಗಳನ್ನು ನಡೆಸಿದ್ದಾರೆ, ಅದರಲ್ಲಿ 7 ಇಸ್ರೋದಿಂದ ನಡೆದಿದೆ ಮತ್ತು 5 ಇಸ್ರೋ-ನಾಸಾ ಸಹಯೋಗದಿಂದ ನಡೆದಿದೆ. ಇವುಗಳಲ್ಲಿ ಮೆಂತ್ಯ ಮತ್ತು ಹೆಸರುಕಾಳಿನ ಬೀಜಗಳನ್ನು ಬೆಳೆಯುವುದು, ಸೂಕ್ಷ್ಮ ಪಾಚಿ ಮತ್ತು ಕಾಂಡಕೋಶ ಸಂಶೋಧನೆಯನ್ನು ಅಧ್ಯಯನ ಮಾಡುವುದು ಸೇರಿವೆ. ಈ ಪ್ರಯೋಗಗಳು ಬಾಹ್ಯಾಕಾಶದಲ್ಲಿ ಸುಸ್ಥಿರ ಕೃಷಿ ಮತ್ತು ದೀರ್ಘ ಬಾಹ್ಯಾಕಾಶ ಪ್ರಯಾಣಕ್ಕಾಗಿ ಜೀವಾಧಾರಕ ವ್ಯವಸ್ಥೆಗಳನ್ನು ರಚಿಸಲು ಸಹಾಯ ಮಾಡುತ್ತದೆ.
ವಿಳಂಬವಾದರೆ ಏನಾಗುತ್ತೆ?
ಹವಾಮಾನ ಅಥವಾ ತಾಂತ್ರಿಕ ಕಾರಣಗಳು ಜುಲೈ 14 ರೊಳಗೆ ಹಿಂತಿರುಗಲು ಅಡ್ಡಿಪಡಿಸಿದರೆ, ನಾಸಾ ಮತ್ತು ಸ್ಪೇಸ್‌ಎಕ್ಸ್ ಜುಲೈ ಮಧ್ಯದಲ್ಲಿ ಮುಂದಿನ ಉಡಾವಣಾ ವಿಂಡೋಗಾಗಿ ಕಾಯುತ್ತವೆ.
ಸಿಬ್ಬಂದಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚುವರಿ ದಿನಗಳನ್ನು ಕಳೆಯಬೇಕಾಗಬಹುದು, ಅಲ್ಲಿ ಅವರು ಸಾಕಷ್ಟು ಆಹಾರ, ಆಮ್ಲಜನಕ ಮತ್ತು ಇತರ ಸಂಪನ್ಮೂಲಗಳನ್ನು ಹೊಂದಿದ್ದಾರೆ. Axiom-1 ಕಾರ್ಯಾಚರಣೆಯಲ್ಲಿಯೂ ಸಹ, ಕೆಟ್ಟ ಹವಾಮಾನದಿಂದಾಗಿ ಗಗನಯಾತ್ರಿಗಳು ಹೆಚ್ಚುವರಿಯಾಗಿ 17 ದಿನಗಳನ್ನು ಕಳೆದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ