
ಶ್ರೀನಗರ, ನವೆಂಬರ್ 6: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack) ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಗಿತ್ತು. ಅದಾಗಿ 6 ತಿಂಗಳಾಗಿವೆ. ಈಗ ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಗುಂಪುಗಳು ಅದರಲ್ಲೂ ವಿಶೇಷವಾಗಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಹೊಸ ಸಂಘಟಿತ ದಾಳಿಗಳಿಗೆ ಸಿದ್ಧತೆ ನಡೆಸಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಭಾರತದ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಉಗ್ರರ ದಾಳಿಯ ಆತಂಕವನ್ನು ಹೆಚ್ಚಿಸಿದೆ. ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಭಯೋತ್ಪಾದನಾ ನಿಗ್ರಹ ಅಭಿಯಾನವನ್ನು ಪ್ರಾರಂಭಿಸಿದ 6 ತಿಂಗಳ ನಂತರ ಪಾಕ್ ಮೂಲದ ಉಗ್ರ ಸಂಘಟನೆಗಳು ಮತ್ತೊಮ್ಮೆ ಭಾರತದ ಮೇಲೆ ದಾಳಿ ನಡೆಸಲು ಪ್ಲಾನ್ ಮಾಡುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ನೀವು ಸಿಖ್ಖರಲ್ಲ; ಗುರುನಾನಕ್ ಜಯಂತಿಗೆ ಭಾರತದ 14 ಹಿಂದೂಗಳಿಗೆ ಪ್ರವೇಶ ನಿರಾಕರಿಸಿದ ಪಾಕಿಸ್ತಾನ
ಪಾಕಿಸ್ತಾನದ ವಿಶೇಷ ಸೇವಾ ಗುಂಪು (SSG) ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಕಾರ್ಯಕರ್ತರ ಸಹಾಯದಿಂದ ಎಲ್‌ಇಟಿ ಮತ್ತು ಜೆಇಎಂ ಘಟಕಗಳು ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಬಳಿ ಒಳನುಸುಳುವಿಕೆ ಮಾರ್ಗಗಳ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿತ್ತು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ಎಸ್‌ಎಸ್‌ಜಿ ಈ ದಾಳಿಯ ಪ್ರಯತ್ನವನ್ನು ಸಕ್ರಿಯವಾಗಿ ಬೆಂಬಲಿಸುತ್ತಿವೆ ಎನ್ನಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ (ಪಿಒಕೆ) ಪಾಕಿಸ್ತಾನದ ಗಡಿ ಕ್ರಿಯಾ ತಂಡದ (ಬಿಎಟಿ) ಹೊಸ ಚಲನವಲನಗಳು ಪತ್ತೆಯಾಗಿವೆ ಎಂದು ಭದ್ರತಾ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಭಾರತದ ಹೆಣ್ಣುಮಕ್ಕಳು ಯುದ್ಧವಿಮಾನವನ್ನೂ ಹಾರಿಸುತ್ತಿದ್ದಾರೆ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸಂದೇಶ
ಅಕ್ಟೋಬರ್‌ನಲ್ಲಿ ಪಿಒಕೆಯಲ್ಲಿ ಜಮಾತ್-ಎ-ಇಸ್ಲಾಮಿ, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಐಎಸ್‌ಐ ಪ್ರತಿನಿಧಿಗಳ ಹಿರಿಯ ಸದಸ್ಯರನ್ನು ಒಳಗೊಂಡ ರಹಸ್ಯ ಸಭೆಗಳ ಸರಣಿಯನ್ನು ನಡೆಸಲಾಗಿದೆ ಎಂದು ಗುಪ್ತಚರ ವರದಿ ಬಹಿರಂಗಪಡಿಸಿದೆ.
ಎಲ್‌ಇಟಿ ಕಾರ್ಯಕರ್ತರು ಕಾಶ್ಮೀರ ಕಣಿವೆಯೊಳಗೆ ತಮ್ಮ ಮಾನವ ಗುಪ್ತಚರ ಜಾಲವನ್ನು ಪುನರ್ನಿರ್ಮಿಸುತ್ತಿದ್ದಾರೆ. ಸ್ಥಳೀಯ ಸಹಾಯಕರು, ಸುರಕ್ಷಿತ ತಾಣಗಳು ಮತ್ತು ಸಂಪನ್ಮೂಲ ಮಾರ್ಗಗಳನ್ನು ಗುರುತಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ